ಕಿರಿಕ್ ಪಾರ್ಟಿ, ಹಾಸ್ಟೆಲ್ ಹುಡುಗ್ರು..ಆದ್ಮೇಲೆ ಬ್ಯಾಕ್ ಬೆಂಚರ್ಸ್. ಹೈಸ್ಕೂಲ್, ಕಾಲೇಜು ದಿನಗಳ ಸಿನಿಮಾಗಳೆಲ್ಲ ಬರತೊಡಗಿವೆ. ಈಗ ಮತ್ತೊಂದು ಕಾಲೇಜು ದಿನಗಳ ಕಥೆ ಸಿದ್ಧವಾಗಿದೆ. ಬ್ಯಾಕ್ ಬೆಂಚರ್ಸ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿಂದಿನ ಸಾಲಿನ ಹುಡುಗರು/ಹುಡುಗಿಯರು ಎಂದು ಬಳಸುತ್ತಿದ್ದ ಮಾದರಿ ಈಗ ಸಿನಿಮಾವಾಗಿದೆ.
ಸದ್ಯವೇ ಥಿಯೇಟರ್ ಗಳಲ್ಲಿ ವೀಕ್ಷಣೆಗೆ ಲಭ್ಯವಾಗುವ ಈ ಚಿತ್ರದ ನಿರ್ದೇಶಕರು ಬಿ.ಆರ್ ರಾಜಶೇಖರ್. ಹೊಸಬರ ತಂಡವನ್ನಿಟ್ಟುಕೊಂಡು ರೂಪಿಸಿರುವ ಚಿತ್ರವಂತೆ. ಈಗಾಗಲೇ ಹಾಡುಗಳ ಮೂಲಕ ಜನಪ್ರಿಯವಾಗಿದೆಯಂತೆ ಈ ಚಿತ್ರ.
ಕಾಲೇಜು ದಿನಗಳೆಂದರೆ ಕೊಂಚ ಹರಟೆ, ಕೊಂಚ ತಲೆ ಹರಟೆ, ತಮಾಷೆ, ಕಿರಿಕ್, ಕೀಟಲೆ ಎಲ್ಲವೂ ಇರುತ್ತದಲ್ಲ. ಅವೆಲ್ಲವೂ ಈ ಚಿತ್ರದಲ್ಲಿದೆಯಂತೆ. ವಿಶಿಷ್ಟವಾದ ಈಗಿನ ಯುವ ತಲೆಮಾರಿಗೆ ಇಷ್ಟವಾಗುವ ಕಂಟೆಂಟ್ ಎನ್ನುತ್ತಾರೆ ನಿರ್ದೇಶಕರು.
ಕಥೆಯ ಹೊಸತನ, ಹೊಸಬರ ಅಭಿನಯ, ಹದವಾದ ಹೆಣಿಗೆ-ಎಲ್ಲವೂ ಸಿನಿಮಾವನ್ನು ಗೆಲ್ಲಿಸಬಹುದು ಎಂಬ ನಂಬಿಕೆ ಚಿತ್ರತಂಡದ್ದು. ಈಗಾಗಲೇ ಕಾಲೇಜು ಕೇಂದ್ರಿತವಾದ ಸಿನಿಮಾಗಳು ಬಂದಿದ್ದರೂ ಆ ಸಾಲಿಗಿಂತ ವಿಭಿನ್ನವಾದ ಕಥಾ ಹಂದರವುಳ್ಳ ಸಿನಿಮಾವಂತೆ ಇದು.
ಇವುಗಳನ್ನೂ ಓದಿ : ಕೇಳತೊಡಗಿದೆ ಮಮ್ಮುಟ್ಟಿ, ರಾಜ್ ಬಿ. ಶೆಟ್ಟಿಯವರ ಟರ್ಬೊ ಸದ್ದು !
ಪಿಪಿ ಪ್ರೊಡಕ್ಷನ್ಸ್ ರೂಪಿಸಿರುವ ಚಿತ್ರವಿದು. ರಾಜಶೇಖರ್ ಇದರ ನಿರ್ಮಾಪಕರು. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ.
ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.