ಮೋಡ ಮುಸುಕಿದ ಬಾನಿನಲ್ಲಿ ತಾರೆಗಳಿರಲಿಲ್ಲ: ಎಲ್ಲರೂ ಭೂಮಿ ಮೇಲೆ ಅವತರಿಸಿದ್ದರು ! …ಬುಧವಾರ ಅಧಿಕೃತವಾಗಿ ಕಾನ್ 77 ನೇ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದಾಗ ಅನಿಸಿದ್ದು ಇದೇ. ಆಕಾಶವನ್ನೆಲ್ಲ ಮೋಡ ಆವರಿಸಿದೆ. ತಾರೆಗಳೆಲ್ಲ ಮುಸುಕು ಹೊದ್ದುಕೊಂಡು ಕಾಣೆಯಾಗಿವೆ. ಇನ್ನೇನು ಮಳೆ ಹನಿ ಬಿದ್ದೇ ಬಿಡಬಹುದೆಂಬ ವಾತಾವರಣ. ಮೋಡವೆಲ್ಲ ಕರಗಿ ಒಂದುವೇಳೆ ಜೋರಾಗಿ ಮಳೆ ಸುರಿದರೆ ಮತ್ತೆ ಹೊಳೆಯಬಲ್ಲವೆಲ್ಲ ಎಂಬ ತುಡಿತ ತಾರೆಗಳಿಗೆ. ಆದರೂ ಮೋಡಗಳದ್ದೇ ಕಾರುಬಾರು ಕಾನ್ ಅಂಗಳದಲ್ಲಿ.
ಈ ಮೋಡಗಳು ಆವರಿಸಿದ ಆಕಾಶದ ಕೆಳಗೆ ಇದ್ದಕ್ಕಿದ್ದಂತೆ ಸಿನಿತಾರೆಗಳು ಹೊಳೆಯತೊಡಗುತ್ತವೆ. ಕಾನ್ ಚಿತ್ರೋತ್ಸವದ ದೀಪಗಳೆಲ್ಲ ಪ್ರಜ್ವಲಿಸತೊಡಗುತ್ತವೆ. ವೇದಿಕೆಯಲ್ಲಿ ಪ್ರಸಿದ್ಧ ನಟಿ ಮೆರಿಲ್ ಸ್ಟ್ರೀಪ್ ಕಂಗೊಳಿಸುತ್ತಾರೆ. ರೆಡ್ ಕಾರ್ಪೆಟ್ ಎಂಬಿತ್ಯಾದಿ ಆಕರ್ಷಣೆಗಳ ಮಧ್ಯೆ ಕಾನ್ ಚಿತ್ರೋತ್ಸವದ ಬೆಳಕು ವ್ಯಾಪಿಸಿಕೊಳ್ಳುತ್ತದೆ.
ಬುಧವಾರ ಹನ್ನೊಂದು ದಿನಗಳ ಕಾನ್ ಚಿತ್ರೋತ್ಸವಕ್ಕೆ ಗ್ರ್ಯಾಂಡ್ ಥಿಯೇಟರ್ ಲೂಮಿಯರ್ ನಲ್ಲಿ ವಿಧ್ಯುಕ್ತ ಚಾಲನೆ ಸಿಕ್ಕಿತು. ಚಿತ್ರೋತ್ಸವದ 77 ನೇ ಆವೃತ್ತಿಯಿದು. ನಟಿ ಕ್ಯಾಮಿಲ್ ಕಾಟಿನ್ ವೇದಿಕೆಯಲ್ಲಿದ್ದರು. ಅವರೊಂದಿಗೆ ಸೇರಿಕೊಂಡವರು ಎಬ್ರು ಸಿಲಾನ್, ಲಿಲಿ ಗ್ಲಾಡ್‌ಸ್ಟೋನ್, ಇವಾ ಗ್ರೀನ್, ನಾಡಿನ್ ಲಬಾಕಿ, ಜುವಾನ್ ಆಂಟೋನಿಯೊ ಬಯೋನಾ, ಪಿಯರ್‌ಫ್ರಾನ್ಸ್ಕೊ ಫಾವಿನೊ, ಕೋರೆ-ಎಡಾ ಹಿರೊಕಾಜು ಮತ್ತು ಒಮರ್ ಸೈ.
ಮೊದಲೇ ಕತ್ತಲೆಯ ಲೋಕ. ಅದರೊಳಗೆ ಸಣ್ಣ ಮಿಂಚು ಹುಳು ಹಾರಾಡಿದರೂ ಕಾಣಿಸುವಂಥದ್ದು. ಅಂಥದ್ದರಲ್ಲಿ ಬೆಳಕಿನ ಸ್ಫೋಟವಾದರೆ ! ಪ್ರಸಿದ್ಧ ನಟಿ ಮೆರಿಲ್ ಸ್ಟ್ರೀಪ್ ಗೆ ಜೀವಿತಾವಧಿಯ ಸಾಧನೆಗಾಗಿ ಪಾಲ್ಮೆದೋರ್ (ನಟನೆ) ಪ್ರಶಸ್ತಿ ನೀಡಿ ಗೌರವಿಸುವ ಸಂದರ್ಭ. ಮತ್ತೊಬ್ಬ ನಟಿ ಜೂಲಿಯಟ್ ಬಿನೋಚೆಗೆ ಈ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ. ವೇದಿಕೆಗೆ ಮೆರಿಲ್ ಅವರನ್ನು ಆಹ್ವಾನಿಸಿದಾಗ ಇಡೀ ಸಭೆಯೇ ಚಪ್ಪಾಳೆಯೊಂದಿಗೆ ಪ್ರತಿಧ್ವನಿಸಿತು. ಸತತ ಚಪ್ಪಾಳೆಯೊಂದಿಗೆ ತಮ್ಮ ನೆಚ್ಚಿನ ನಟಿಗೆ ಅಭಿನಂದನೆ ಸಲ್ಲಿಸಿದ ಸಿನಿ ಪ್ರೇಕ್ಷಕರು ಒಂದು ಅವಿಸ್ಮರಣೀಯ ಘಳಿಗೆಗೆ ಸಾಕ್ಷಿಯಾದರು. ಯಾಕೆಂದರೆ, ಈ ಬಾರಿಯ ಉತ್ಸವದ ಉದ್ಘಾಟನಾ ವೇದಿಕೆಯನ್ನು ಆಳಿದ್ದೇ ಮಹಿಳೆಯರು.
ಇನ್ನು ಹತ್ತು ದಿನ ಸಿನಿಮಾ ವಿಶ್ವ ಜಗತ್ತು ಇಲ್ಲಿ ತೆರೆದುಕೊಳ್ಳುತ್ತದೆ. ಭಾರತದ ಏಳೂ ಚಿತ್ರಗಳೂ ಸೇರಿದಂತೆ ಹಾಲಿವುಡ್ ಮತ್ತಿತರ ಭಾಗಗಳಿಂದ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತವೆ.
ಕಾನ್ ಚಲನಚಿತ್ರೋತ್ಸವ 2024 : ಈ ಬಾರಿ ಕನ್ನಡಿಗರದ್ದೇ ಹವಾ
ಇನ್ನೇನಿದ್ದರೂ ಇಡೀ ದಿನ ಚಲನಚಿತ್ರಗಳನ್ನು ನೋಡುವುದು, ಹರಟುವುದು, ವಿಮರ್ಶಿಸುವುದು, ರಾತ್ರಿಯಿಡೀ ಕುಳಿತು ಚರ್ಚಿಸುವುದು. ಎಲ್ಲರೂ ಬೇರೆ ಬೇರೆ ರಾಷ್ಟ್ರಿಗರು, ಬೇರೆ ಬೇರೆ ಭಾಷಿಕರು. ಆದರೆ ಇಲ್ಲಿ ಆಡುವುದು ಒಂದೇ ಭಾಷೆ. ಅದು ಸಿನಿಮಾ ಭಾಷೆ. ಕತ್ತಲೆ ಬೇಕೆಂದು ಸೃಷ್ಟಿಸಿಕೊಂಡು ಕತ್ತಲೆ ಆವರಿಸಿದಾಗ ಬೆಳಕನ್ನು ಹುಡುಕುವುದು ಒಂದು ಹುಚ್ಚುತನ. ಆದರೆ ಅದೇ ಜಗತ್ತೂ ಸಹ,ಬ ಬದುಕೂ ಸಹ. ಕಾನ್ ಚಿತ್ರೋತ್ಸವದಲ್ಲಿ ಇಂಥದ್ದೇ ಹುಚ್ಚುತನ ವ್ಯಾಪಿಸಿಕೊಂಡಿರುತ್ತದೆ.
ಪ್ರತಿವರ್ಷ ಇಂಥದೊಂದು ಸಂಭ್ರಮವನ್ನು ತುಂಬಿಕೊಳ್ಳಲೆಂದೇ ಕಾನ್ ಗೆ ಬರುವವರು ಅಸಂಖ್ಯಾತ ಜನರಿದ್ದಾರೆ. ಅದೇ ಸಂದರ್ಭದಲ್ಲಿ ಒಮ್ಮೆಯಾದರೂ ಕಾನ್ ಚಿತ್ರೋತ್ಸವಕ್ಕೆ ಹೋಗಬೇಕು, ಅದನ್ನು ಕಾಣಬೇಕು ಎಂದು ಹಂಬಲಿಸುವ ಸಿನಿಮೋಹಿಗಳೂ ಇದ್ದಾರೆ. ಇಂಥವರಿಂದಲೇ ಇಡೀ ಕಾನ್ ಅಂಗಳ ಇನ್ನು ಹತ್ತು ದಿನ ತುಂಬಿಕೊಂಡಿರುತ್ತದೆ.
ಕಾನ್ ಸಿನಿಮೋತ್ಸವದಲ್ಲಿ ಮೂರು ಭಾರತೀಯರ ಚಿತ್ರಗಳು
ತಮ್ಮ ನಟನಾ ಜೀವನದ ಅಪೂರ್ವ ಸಾಧನೆಗಾಗಿ ಪಾಲ್ಮೋದೋರ್ ಗೌರವ ಸ್ವೀಕರಿಸಿದ ಮೆರಿಲ್, ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ನನ್ನ ಬಗೆಗಿನ ಈ ಕ್ಲಿಪ್ (ಮೆರಿಲ್ ಕುರಿತಾಗಿ ಪ್ರದರ್ಶಿಸಿದ ವಿಡಿಯೋ ಕ್ಲಿಪ್) ನೋಡುವಾಗ ಹೈ ಸ್ಪೀಡ್ ರೈಲಿನ ಕಿಟಕಿಯಿಂದ ಹೊರ ಜಗತ್ತನ್ನು ನೋಡುವಂತಿದೆ. ತರುಣಿಯಾಗಿ ಈ ರಂಗಕ್ಕೆ ಪ್ರವೇಶಿಸಿದ ದಿನದಿಂದಲೂ ಇಂದಿನವರೆಗೂ ಮಿಂಚಿನಂತೆ ಧಾವಿಸುತ್ತಿದ್ದೇನೆ. 35 ವರ್ಷಗಳ ಹಿಂದೆ ಇದೇ ಕಾನ್ ನಲ್ಲಿದ್ದಾಗ ಮೊದಲ ಬಾರಿಗೆ ಆ ಅನುಭವ ಅವಿಸ್ಮರಣೀಯ. ನನ್ನ ವೃತ್ತಿಜೀವನ ಮುಗಿದಿದೆ ಎಂದು ಭಾವಿಸಿದ್ದೆ. ಹಾಗೇನೂ ಇಲ್ಲ. ಇಂದು ನಿಮ್ಮ ಮುಂದೆ ಇದ್ದೇನೆʼ ಎಂದಾಗ ಭಾವುಕರಾಗಿದ್ದರು.
ಅಂತಿಮವಾಗಿ 77 ನೇ ಚಿತ್ರೋತ್ಸವದ ತೆರೆ ಸರಿಸಲಾಯಿತು. ಈ ಚಿತ್ರೋತ್ಸವ ಮೇ 25 ರಂದು ಮುಗಿಯಲಿದೆ. ಭಾರತದ ಪಾಯಲ್ ಕಪಾಡಿಯಾ ಅವರ “ಆಲ್ ಇಮ್ಯಾಜಿನ್ ಆಸ್ ಲೈಟ್ʼ ಚಿತ್ರ ಆತ್ಯುತ್ತಮ ಚಿತ್ರದ ಪ್ರಶಸ್ತಿಗಾಗಿ ಸೆಣಸುತ್ತಿದೆ.
#cannesfestival2024 #worldcinema