ಬೆಂಗಳೂರು: ನಟ ಧನಂಜಯರ ಸಿನಿಮಾ ಕೋಟಿ ಸಿದ್ಧವಾಗಿದೆ. ಇದರ ನಿರ್ದೇಶಕ ಪರಮ್. ನಿರ್ಮಾಣ ಜಿಯೋ ಸ್ಟುಡಿಯೋಸ್ ನದ್ದು. ಕನ್ನಡ ಸಿನಿಮಾ ಮಾರುಕಟ್ಟೆಗೆ ಜಿಯೋ ಪ್ರವೇಶಿಸುತ್ತಿರುವುದು ಈ ಚಿತ್ರದದ ಮೂಲಕ. ಇತ್ತೀಚೆಗೆ ಟೀಸರ್ ಬಿಡುಗಡೆಯಾಗಿದೆ. ವೀಕ್ಷಕರ ಪ್ರತಿಕ್ರಿಯೆಯೂ ಚೆನ್ನಾಗಿದೆ.
ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸಿರುವ ಜಿಯೋ ಈಗ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ.
ಒಂದು ಕೋಟಿ ರೂ. ಸಿಕ್ಕರೆ ಎಲ್ಲವೂ ಸರಿಯಾದಂತೆ, ಬದುಕಿನಲ್ಲಿ ಎಲ್ಲವನ್ನೂ ಗಿಟ್ಟಿಸಿಕೊಳ್ಳಬಹುದು ಎನ್ನುವ ಅಲೋಚನೆ ಹಲವರದ್ದು ಇರುತ್ತದೆ. ಅದೇ ಆಲೋಚನೆಯ ಕೋಟಿಯಾಗಿ ಧನಂಜಯ ನಟಿಸಿದ್ದಾರೆ.
ತನ್ನ ಪಾತ್ರದ ಬಗ್ಗೆ ವಿವರಿಸುತ್ತಾ, ಎಲ್ಲರೊಳಗೂ ಒಬ್ಬ ಕೋಟಿ ಇರುತ್ತಾನೆ. ನನ್ನೊಳಗಿನ ಕೋಟಿ ನೋಡಲಿಕ್ಕೆ ಸಿಕ್ಕಿರುವ ಅವಕಾಶವಿದು. ಅದರಂತೆಯೇ ನಿಮ್ಮೊಳಗಿನ ಕೋಟಿಯನ್ನು ನೋಡಿಕೊಳ್ಳಲು, ಹುಡುಕಿಕೊಳ್ಳಲು ಈ ಸಿನಿಮಾ ನೋಡಬೇಕುʼ ಎಂದವರು ಧನಂಜಯ.
ನಿರ್ದೇಶಕ ಪರಮ್ ಅವರ ಚೊಚ್ಚಲ ಸಿನಿಮಾವಿದು. ಕಥೆ ಹೇಳುವ ಕ್ರಮ ತಿಳಿದಿರುವ ಪರಮ್ ಕೆಲವು ಯಶಸ್ವಿ ಧಾರಾವಾಹಿ ಹಾಗೂ ರಿಯಾಲಿಟಿ ಷೋಗಳನ್ನು ರೂಪಿಸಿದವರು. ಆದರೆ ಈ ಕ್ವಾನ್ವಾಸ್ ದೊಡ್ಡದು, ವಿಶಾಲವಾದದ್ದು. ಅಲ್ಲಿ ಕಥೆ ಹೇಳುವಲ್ಲಿ ಹೇಗೆ ಮತ್ತು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಕುತೂಹಲದ ಸಂಗತಿ.
ಇವುಗಳನ್ನೂ ಓದಿ ನಿಮ್ಮ ಆಸಕ್ತಿಗೆ ಪೂರಕವಾಗಿ : ಕನ್ನಡ ಚಿತ್ರರಂಗದ ಸ್ಥಿತಿಗತಿ ಚೆನ್ನಾಗಿಯೇ ಇದೆಯಲ್ಲ :ಶೇಷಾದ್ರಿ
ಒಳ್ಳೆ ಕಥೆಗಳನ್ನು ಹೇಳಬೇಕು ಎನ್ನುವುದು ನನ್ನ ಕನಸು. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ ಎನ್ನುವುದು ಪರಮ್ ಮಾತು. ಧನಂಜಯರಿಗೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸುತ್ತಿದ್ದಾರೆ. ಹೊಸ ಪರಿಚಯ ಕನ್ನಡಕ್ಕೆ. ಕೊಡಗಿನ ಮೂಲದವರು. ‘ಸಪ್ತ ಸಾಗರದಾಚೆʼ ಸಿನಿಮಾದ ರಮೇಶ್ ಇಂದಿರಾ ಕೋಟಿಯಲ್ಲಿ ಖಳ ನಾಯಕನ ಪಾತ್ರದಲ್ಲಿದ್ದಾರೆ.
ವಾಸುಕಿ ವೈಭವ್ ರದ್ದು ರಾಗ ಸಂಯೋಜನೆ. ಯೋಗರಾಜ ಭಟ್ ಹಾಗೂ ವಾಸುಕಿಯರದ್ದು ಗೀತ ಸಾಹಿತ್ಯ. ಹಿನ್ನೆಲೆ ಸಂಗೀತ ಒದಗಿಸಿದವರು ‘777ಚಾರ್ಲಿ’ ಖ್ಯಾತಿಯ ಸಂಗೀತ ನಿರ್ದೇಶಕ ನೊಬಿನ್ ಪೌಲ್. ಇನ್ನು ಸಂಕಲನದ ಹೊಣೆ ಪ್ರತೀಕ್ ಶೆಟ್ಟಿಯವರಿಗೆ. ಅರುಣ್ ಬ್ರಹ್ಮನ್ ‘ಕೋಟಿ’ ರದ್ದು ಛಾಯಾಗ್ರಹಣ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೆಂಕಟೇಶ ಅವರೆಲ್ಲ ಮುಖ್ಯ ಪಾತ್ರಗಳಲ್ಲಿದ್ದಾರೆ.
ಇವರೆಲ್ಲರ ಸಿನಿಮಾ ಪ್ರೇಕ್ಷಕರ ಸಿನಿಮಾವಾಗುವುದು ಜೂನ್ 14 ರಂದು ಚಿತ್ರಮಂದಿರಗಳಲ್ಲಿ. ಜೋರಾಗಿ ಮಳೆ ಸುರಿಯುವ ಹೊತ್ತು, ಕಾವು ಹೆಚ್ಚಿಸುತ್ತೆದೆಯೇ ಕಾದು ನೋಡಬೇಕಿದೆ.