ಪಣಜಿಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 55 ನೇ ಭಾರತೀಯ ಅಂತಾರಾಷ್ಟೀಯ ಚಲನಚಿತ್ರೋತ್ಸವ (ಇಫಿ) ಯಲ್ಲಿ ಭಾಗವಹಿಸಲು ಇಚ್ಛೆಯಿದ್ದರೆ ಪ್ರತಿನಿಧಿಯಾಗಿ ನೋಂದಣಿ ಮಾಡಬಹುದು.
ಇಫಿ ವೆಬ್ ಸೈಟ್ ನಲ್ಲಿ ಈಗಾಗಲೇ ಪ್ರತಿನಿಧಿ ನೋಂದಣಿಯನ್ನು(https://my.iffigoa.org/)ಆರಂಭಿಸಲಾಗಿದೆ. ವಿದ್ಯಾರ್ಥಿಗಳು, ಸಿನಿಮಾ ಆಸಕ್ತರು, ಸಿನಿಪ್ರೇಮಿಗಳು, ಸಿನಿಮಾ ಪ್ರೋತ್ಸಾಹಿಸುವ ಸಂಘಟನೆಗಳ ಸದಸ್ಯರು ಹಾಗೂ ಯಾರೇ ಆಸಕ್ತರೂ ನಿಗದಿತ ಶುಲ್ಕವನ್ನು ಪಾವತಿಸಿ ನೋಂದಾಯಿಸಬಹುದಾಗಿದೆ.
ಎಂಟು ದಿನಗಳಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗಳೂ ಸೇರಿದಂತೆ ವಿವಿಧ ದೇಶಗಳ ಸುಮಾರು 250 ಕ್ಕೂ ಹೆಚ್ಚು ಸಿನಿಮಾಗಳ ವೀಕ್ಷಣೆಗೆ ಅವಕಾಶವಿರಲಿದೆ.
ಇದರೊಂದಿಗೆ ಹೆಸರಾಂತ ಸಿನಿಮಾ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಭಾಗವಹಿಸುವ ಸಂವಾದ, ನಡೆಸುವ ಮಾಸ್ಟರ್ ಕ್ಲಾಸ್ ನಲ್ಲೂ ಭಾಗವಹಿಸಬಹುದು. ಆ ಮೂಲಕ ನಿಮ್ಮ ಸಿನಿಮಾ ಬಗೆಗಿನ ಅರಿವನ್ನು ಹೆಚ್ಚಿಸಿಕೊಳ್ಳಬಹುದು. ಇದಲ್ಲದೇ ಸಿನಿಮಾ ಕುರಿತಾದ ಪ್ರದರ್ಶನ, ಓಪನ್ ಫೋರಂನಂಥ ವೇದಿಕೆಗಳಲ್ಲಿ ನಡೆಯುವ ಚರ್ಚೆಗಳಲ್ಲೂ ಪಾಲ್ಗೊಳ್ಳಬಹುದು.
Film Bazaar: ಪ್ರೊಗ್ರೆಸ್ ಇನ್ ಲ್ಯಾಬ್ ಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಚಿತ್ರೋತ್ಸವದಲ್ಲಿ ನಿರ್ದಿಷ್ಟ ದೇಶದ ಸಿನಿಮಾ (ಕಂಟ್ರಿ ಫೋಕಸ್), ನಿರ್ದೇಶಕರ, ಕಲಾವಿದರ ಸಿನಿಮಾ(ರೆಟ್ರಾಸ್ಪೆಕ್ಟಿವ್), ಭಾರತೀಯ ಪನೋರಮಾ, ವಿಶ್ವ ಸಿನಿಮಾ, ಚೊಚ್ಚಲ ನಿರ್ದೇಶಕರ ಸಿನಿಮಾ, ಅಂತಾರಾಷ್ಟ್ರೀಯ ಅತ್ಯುತ್ತಮ ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಸಿನಿಮಾಗಳು ಸೇರಿದಂತೆ ವಿವಿಧ ವಿಭಾಗಗಳು ಇರಲಿವೆ.
ಪ್ರತಿನಿಧಿಯಾಗುವವರಿಗೆ ಒಂದು ದಿನಕ್ಕೆ ಮೂರು ಸಿನಿಮಾ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರಲಿದೆ. ಸಿನಿಮಾಗಳ ಟಿಕೆಟ್ ನ್ನೂ ನಿರ್ದಿಷ್ಟ ವೆಬ್ ಸೈಟ್ ಮೂಲಕ ಆನ್ ಲೈನ್ ಬುಕ್ಕಿಂಗ್ ಸಹ ಮಾಡಲು ಅವಕಾಶವಿರಲಿದೆ.
IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ
ನವೆಂಬರ್ 20 ರಂದು ಚಿತ್ರೋತ್ಸವ ಆರಂಭವಾಗಲಿದ್ದು, ನವೆಂಬರ್ 28 ರಂದು ಸಮಾರೋಪಗೊಳ್ಳಲಿದೆ. ಚಿತ್ರೋತ್ಸವ ಉದ್ಘಾಟನಾ ಚಿತ್ರ, ಮಿಡ್ ಫೆಸ್ಟ್ ಫಿಲ್ಮ್ ಹಾಗೂ ಸಮಾರೋಪ ಚಿತ್ರಗಳೆಂದು ಇರಲಿದ್ದು, ಅತ್ಯುತ್ತಮ ಎನ್ನುವ ಚಿತ್ರಗಳನ್ನು ಆಯ್ಕೆ ಮಾಡಲಾಗಿರುತ್ತದೆ.
ಈ ಬಾರಿಯದ್ದು 55 ರ ಆವೃತ್ತಿ. 1952 ರಲ್ಲಿ ಇಫಿ ಆರಂಭವಾಗಿತ್ತು. ಮೊದಲಿಗೆ ವಿವಿಧ ನಗರಗಳಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದ್ದ ಉತ್ಸವ 2004 ರಿಂದ ಗೋವಾದ ಪಣಜಿಯಲ್ಲೇ ಸಂಘಟಿಸಲಾಗುತ್ತಿದೆ. ಪ್ರಸ್ತುತ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಎನ್ ಎಫ್ ಡಿ ಸಿ ಹಾಗೂ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ ಸಂಯುಕ್ತವಾಗಿ ಈ ಉತ್ಸವವನ್ನು ಸಂಘಟಿಸುತ್ತಿವೆ.
ಉತ್ಸವದಲ್ಲಿ ವಿವಿಧ ಸ್ಪರ್ಧೆಗಳಿವೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಿರ್ದೇಶಕ, ನಟಿ, ಚೊಚ್ಚಲ ನಿರ್ದೇಶಕ, ವಿಶೇಷ ತೀರ್ಪುಗಾರರ ಪ್ರಶಸ್ತಿ, ಐಸಿಎಫ್ ಟಿ ಯುನೆಸ್ಕೊ ಗಾಂಧಿ ಪುರಸ್ಕಾರ, ಸತ್ಯಜಿತ್ ರೇ ಜೀವಿತಾವಧಿ ಪ್ರಶಸ್ತಿ, ವಾರ್ಷಿಕ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಸಿನಿಮಾ ರಂಗಕ್ಕೆ ನೀಡಲಾಗುತ್ತಿದೆ.