Sunday, December 22, 2024
spot_img
More

    Latest Posts

    Happy old Year movie : ನೆನಪಿನ ಪೆಟ್ಟಿಗೆಯ ಖಾಲಿ ಮಾಡುವುದು ಹೇಗೆ?

    ಹ್ಯಾಪಿ ಓಲ್ಡ್‌ ಇಯರ್‌ ಥಾಯ್‌ ಚಿತ್ರ ವಿಶಿಷ್ಟವೆನಿಸುವುದು ಭೂತ ಮತ್ತು ವರ್ತಮಾನಕ್ಕಿರುವ ಸಂಬಂಧದ ಶೋಧದಿಂದ. ಉಪಯೋಗಕ್ಕಿರುವುದನ್ನು ಮಾತ್ರ ಇಟ್ಟುಕೊಳ್ಳಬೇಕು ಎಂಬುದು ಈಗಿನ ತಲೆಮಾರಿನ ಪ್ರತಿಪಾದನೆ. ಒಂದುಬಗೆಯಲ್ಲಿ ಮಿನಿಮಲಿಸಂ ನ ನೆಲೆ. ಆದರೆ ನೆನಪುಗಳಿಗೆ ಆ ಸೂತ್ರವನ್ನು ಅನ್ವಯಿಸಲು ಸಾಧ್ಯವೇ ಎಂಬುದೇ ಈ ಚಿತ್ರದ ಪ್ರಶ್ನೆ.

    ನೆನಪುಗಳ ಪೆಟ್ಟಿಗೆಯನ್ನು ಖಾಲಿ ಮಾಡಿಕೊಳ್ಳುವುದು ಹೇಗೆ ಹಾಗೂ ಸಾಧ್ಯವೇ?

    ಇದು ಇಂದಿನ ಆಧುನಿಕ ತಲೆಮಾರು ಹಾಗೂ ಹಿಂದಿನ ತಲೆಮಾರಿನ ಪ್ರಶ್ನೆ. ಎರಡೂ ತಲೆಮಾರುಗಳು ಮುಖಾಮುಖಿಯಾಗುವುದೂ ಸಹ ಇಲ್ಲಿಯೇ. ಇಂದಿನ ತಲೆಮಾರು ಖಾಲಿ ಮಾಡಿಕೊಳ್ಳುವುದು ಸಾಧ್ಯವೆನ್ನುತ್ತಾ ಅಂಥದೊಂದು ಪ್ರಕ್ರಿಯೆಯಲ್ಲಿ ನಿರತರು. ಅದೇ ಹೊತ್ತಿನಲ್ಲಿ ನೆನಪುಗಳೊಂದಿಗೇ ಬದುಕಿರುವ ತಲೆಮಾರುಗಳೂ, ಖಂಡಿತಾ ಖಾಲಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸುವುದುಂಟು.

    2019 ರಲ್ಲಿ ಬಿಡುಗಡೆಗೊಂಡ ಥಾಯ್‌ ಭಾಷೆಯ (ದೇಶ : ಥೈಲ್ಯಾಂಡ್‌) ಚಲನಚಿತ್ರ ಹ್ಯಾಪಿ ಓಲ್ಡ್‌ ಇಯರ್‌ ಮುಖಾಮುಖಿಗೊಳಿಸುವುದು ಇಂಥದ್ದೇ ಪ್ರಶ್ನೆಗಳನ್ನು. ಈ ಎರಡು ತಲೆಮಾರುಗಳನ್ನೇ. ಹಲವು ಬಾರಿ ಬೇಡವಾದದ್ದನ್ನು ಎಸೆದು ಬಿಡುವುದು ಸುಲಭ. ಆದರೆ, ಈ ಬೇಡವಾದದ್ದು ಎಂದು ನಿರ್ಧರಿಸುವುದು ಅಷ್ಟೊಂದು ಸುಲಭವೇ, ಸರಳವೇ ಎನ್ನುವುದನ್ನು ಅಮ್ಮ-ತಾಯಿಯ ಬದುಕಿನ ಉದಾಹರಣೆಗಳಿಂದಲೇ ವಿವರಿಸುವುದು ವಿಶೇಷ.

    ಮಿನಿಮಲಿಸಂ ಎಂಬ ಪರಿಕಲ್ಪನೆ ಗೌತಮ ಬುದ್ಧನದು. ಈಗ ಇಡೀ  ಜಗತ್ತು, ಅದರಲ್ಲೂ ವಿಶೇಷವಾಗಿ ಹೊಸ ತಲೆಮಾರುಗಳು (ಮಿಲಿನೆಯಿಲ್ಸ್‌) ಪ್ರಯತ್ನಪಡುತ್ತಿರುವಂಥದ್ದು ಇದನ್ನೇ. ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ಸಾರವೇ ಇಂಥದೊಂದು ಇಸಂ ಗೆ ನೆಲೆಯಾಗಿದೆ. ಇಂದಿನ ತಲೆಮಾರಿಗೆ  ವತಮಾನ ಮಾತ್ರ ನಮ್ಮದು ಎಂಬ ಅಚಲವಾದ ನಂಬಿಕೆ ಈ ತಲೆಮಾರಿನದ್ದು. ಭವಿಷ್ಯ ನಂತರದ್ದು, ಭೂತ ಅಗತ್ಯವಿಲ್ಲದ್ದು.

    ಇದನ್ನೂ ಓದಿ : ಸಿನಿಮಾದೊಳಗೊಂದು ಸಿನಿಮಾ ಕೊಟ್ಟ ಅನುಭವ

    ಅದರಂತೆಯೇ ಸಾಗುತ್ತಾ, ಹೇಗೆ ಭೂತವೂ ಬದುಕಿನ ದಿಕ್ಕನ್ನು ಬದಲಿಸಬಲ್ಲದು, ಭವಿಷ್ಯದ ಬಗ್ಗೆ ಒಂದು ಸಣ್ಣದೊಂದು ಭರವಸೆ ಹುಟ್ಟಿಸಬಲ್ಲದು ಎಂಬುದನ್ನು ಹೇಳುತ್ತಲೇ, ವರ್ತಮಾನದಲ್ಲೇ ಸಿನಿಮಾವನ್ನು ನಿಲ್ಲಿಸುವುದು ಥಾಯ್‌ಲ್ಯಾಂಡ್‌ನ ನಿರ್ದೇಶಕ ನವಾಪೊಲ್ ತಮ್ರೊಂಗ್ರತ್‌ನರಿಟ್‌ (Nawapol Thamrongrattanarit) ನ ಚಾಣಾಕ್ಷತೆ.

    ಕಥಾಸಾರ ಅತ್ಯಂತ ಸಾಮಾನ್ಯದ್ದು. ಕಥಾನಾಯಕಿ(ಜೀನ್‌] ಸ್ವೀಡನ್‌ನಿಂದ ವಾಪಸಾಗಿ, ತನ್ನ ಮನೆಯಲ್ಲೇ ಒಂದು ಸ್ಟುಡಿಯೋ ಆರಂಭಿಸಲು ನಿರ್ಧರಿಸುತ್ತಾಳೆ. ಅದಕ್ಕಾಗಿ ತನ್ನ ಮನೆಯನ್ನು ಒಪ್ಪ ಓರಣಗೊಳಿಸಲು ಸಿದ್ಧಳಾಗುತ್ತಾಳೆ. ಯಾವುದು ಈ ಹೊತ್ತಿಗೆ ಉಪಯೋಗವಿಲ್ಲವೋ ಅವುಗಳ ಅಗತ್ಯವಿಲ್ಲಎಂಬ ನಿರ್ಧಾರಕ್ಕೆ ಅವಳು ಬಂದಿರುತ್ತಾಳೆ. ಅದರಂತೆ ಎಲ್ಲ ವಸ್ತುವನ್ನೂ ಹೆಕ್ಕಿ ಹೆಕ್ಕಿ ಬಳಸದ್ದನ್ನು ಬಿಸಾಡಲು ಪಟ್ಟಿ ಮಾಡುತ್ತಾಳೆ. ಅವಳಿಗೆ ಪ್ರಮುಖ ಸವಾಲಾಗಿ ತೋರುವುದು ತನ್ನ ಕುಟುಂಬ.

    ಕಾಲದೊಳಗೆ ಹೂತು ಹೋಗಿರುವ (ಭೂತದೊಂದಿಗೆ ಬದುಕುತ್ತಿರುವ) ಕುಟುಂಬದಲ್ಲಿ ನೆನಪುಗಳಿಗೆ ಜಾಗವಿರುತ್ತದೆ. ಎಲ್ಲವೂ ಬೇಕೆನ್ನುವ ಹಾಗೂ ಪ್ರತಿಯೊಂದರಲ್ಲೂ ನೆನಪುಗಳ ಬಂಧವನ್ನು ಹೊಂದಿರುವ ಕುಟುಂಬವನ್ನು ಬರೀ ವರ್ತಮಾನ-ಭವಿಷ್ಯಕ್ಕೆ ಒಪ್ಪಿಸುವುದು ಅಥವಾ ಅಣಿಗೊಳಿಸುವುದು ತೀರಾ ಕಷ್ಟವಾದುದು.

    ಕಥಾನಾಯಕಿಗೆ ವಿರುದ್ಧವಾದ ಕ್ರಮದಲ್ಲಿ ಅವಳ ಅಮ್ಮ ಬದುಕುತ್ತಿರುತ್ತಾಳೆ. ಅವಳಮ್ಮನಿಗೆ ತನ್ನ ಪತಿ ಬಳಸುತ್ತಿದ್ದ ಪಿಯಾನೋ ಭವಿಷ್ಯವನ್ನು ಎದುರುಗೊಳ್ಳಲು ಇರುವ ಒಂದು ಊರುಗೋಲು. ಆದರೆ ಕಥಾ ನಾಯಕಿಗೆ, ಅದೊಂದು ಅನಗತ್ಯವಾಗಿ ಅಗಾಧವಾದ ಜಾಗವನ್ನು ಆಕ್ರಮಿಸಿಕೊಂಡಿರುವ ನಿರ್ಜೀವ ವಸ್ತು. ಈ ವಿಷಯವಾಗಿ ಅಮ್ಮ[ಜೀನ್‌ ಳ ಅಮ್ಮ] ಮತ್ತು ಮಗಳ ನಡುವೆ ನಡೆಯುವ ವಾಗ್ವಾದದಲ್ಲಿ ಪ್ರತಿಯೊಬ್ಬರ ಬದುಕಿನ ಅಗತ್ಯಗಳು ಬಿಚ್ಚಿಕೊಳ್ಳುತ್ತವೆ. ಬೇಡವಾದದ್ದು, ಬೇಕಾದದ್ದು ಎಲ್ಲ ನೆನಪುಗಳ ಮೆರವಣಿಗೆ ನಡೆಯುತ್ತದೆ. ಇದನ್ನೂ ಓದಿ : ದಿ ಪೋಪ್ಸ್ ಟಾಯ್ಲೆಟ್ : ವಿಭಿನ್ನ ನೆಲೆಯ ಚಿತ್ರ

    ಕಥೆ ಸಾಗುವಿಕೆಗೆ ನಿರ್ದೇಶಕ ಕಥಾನಾಯಕಿ ಮತ್ತು ಅವನ ಗೆಳೆಯನನ್ನು ಆಯ್ದುಕೊಂಡಿದ್ದಾನೆ. ಅವರಿಬ್ಬರ ಹಳೆಯ ಬದುಕು, ಅವುಗಳ ನೆನಪುಗಳನ್ನು ಕಥೆಯೊಳಗಿನ ಸಾರದ ಸಾಂದ್ರತೆಯನ್ನು ಹೆಚ್ಚಿಸಲು ಬಳಸಿಕೊಂಡಿದ್ದಾನೆ.

    ಎಲ್ಲ ಅನುಪಯುಕ್ತ ವಸ್ತುಗಳನ್ನೂ ಹೊರಗೆಸೆದು ಮನೆಯನ್ನು ಸ್ವಚ್ಛಗೊಳಿಸಬೇಕೆಂದು ಹೊರಡುವ ಕಥಾನಾಯಕಿಗೆ ಹಳೆಯ ಗೆಳೆಯನೊಬ್ಬನು ಕೊಟ್ಟ ಕೆಮರಾ ಸಿಗುತ್ತದೆ. ಅದನ್ನು ಬಳಸದೇ ಹಲವು ವರ್ಷಗಳಾಗಿವೆ. ಆ ಕೆಮರಾವನ್ನು ವಾಪಸು ಅವನಿಗೆ ನೀಡಬೇಕೆಂದು ನಿರ್ಧರಿಸಿ ಅವನಿರುವಲ್ಲಿಗೆ ಹೊರಡುತ್ತಾಳೆ. ಅವನು [ಐಮ್] ಈ ಹಿಂದೆ ಇವಳನ್ನು ಪ್ರೀತಿಸಿದವನು. ಸಂಬಂಧ ಕಡಿದ ಮೇಲೆ, ಮತ್ತೊಬ್ಬಳೊಂದಿಗೆ ಬದುಕು ನಡೆಸುತ್ತಿರುತ್ತಾನೆ. ಅಂದರೆ ವರ್ತಮಾನವನ್ನು ಮೆಲ್ಲಗೆ ಸರಿಸಿ ಭವಿಷ್ಯಕ್ಕೆ ಮುಖ ಮಾಡಿರುವವನು. ಇವಳು ಇನ್ನೂ ವರ್ತಮಾನವೆಂದುಕೊಂಡ ಭೂತದಲ್ಲಿರುವವಳು, ಭವಿಷ್ಯಕ್ಕೆ ಹಾತೊರೆಯುತ್ತಿರುವವಳು. ಅವನಲ್ಲಿದ್ದಲ್ಲಿಗೆ ಹೋದಾಗ ಆ ಹಳೆಯ ನೆನಪುಗಳು, ಆಯ್ಕೆಗಳು, ನಿರ್ಧಾರಗಳೆಲ್ಲಾ ಅನಾವರಣಗೊಳ್ಳುತ್ತವೆ.

    ನಿರ್ದೇಶಕ ಬಹಳ ಸೂಕ್ಷ್ಮವಾದ ವಿಷಯವನ್ನು ಅತ್ಯಂತ ನಾಜೂಕಾಗಿ ಹೆಣೆದಿದ್ದಾನೆ. ಸನ್ನಿವೇಶಗಳನ್ನು ಸೃಷ್ಟಿಸುವಾಗಲೂ ಎಚ್ಚರ ವಹಿಸಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಕಥಾವಸ್ತು ತೀರಾ ಶುಷ್ಕ ಗುಣವುಳ್ಳದ್ದು. ಪ್ರೇಕ್ಷಕರಿಗೆ ಸನ್ನಿವೇಶಗಳನ್ನು ಅರ್ಥೈಸಬೇಕು (ಕನ್ವಿನ್ಸ್‌) ಎಂದು ಹೊರಟಾಗ ಅದೊಂದು ಬಗೆಯ ಉಪದೇಶ ಅಥವಾ ಒಣ ಭಾಷಣ ಎಂದೆನಿಸಿಬಿಡುವ ಅಪಾಯವಿದೆ. ಜೊತೆಗೆ ಅದರಲ್ಲಿರಬಹುದಾದ ಮನೋರಂಜನಾ ಅಂಶಗಳು ಅಂದವನ್ನು ಕಳೆದುಕೊಳ್ಳುವ ಭೀತಿಯೂ ಇದ್ದೇ ಇರುತ್ತದೆ. ಅವೆಲ್ಲವನ್ನೂ ಸರಿಯಾಗಿ ನಿರ್ವಹಿಸಿರುವುದು ವಿಶೇಷ.

    ಕಥೆಗೆ ಬಳಸಿಕೊಂಡ ಸನ್ನಿವೇಶಗಳು ತೀರಾ ನಾಟಕೀಯ ಎನಿಸಿದರೂ (ಹಳೆಯ ಕೆಮರಾ ಸಿಗುವುದು, ಅದರೊಂದಿಗಿನ ನೆನಪುಗಳು) ಅಥವಾ ಹಳೆಯ ಜಾಡಿನ ಶೈಲಿ ಎನಿಸಿದರೂ, ಅದನ್ನು ಜೀವಂತವಾಗಿಸಿರುವುದು ಪಾತ್ರಗಳನ್ನು ನಿರ್ವಹಿಸಿರುವವರ ಕಲಾವಿದರ ಅಭಿನಯ. ಸಣ್ಣ ಸಣ್ಣ ಸಂದರ್ಭಗಳಲ್ಲೂ ಅವರ ಭಾವಾಭಿನಯ ಅಭಿವ್ಯಕ್ತಗೊಂಡಿರುವ ರೀತಿಯೂ ಈ ನಾಟಕೀಯತೆಯನ್ನು ಕೊಂದು ನಮ್ಮೊಳಗೆ ಪಾತ್ರಗಳು ಇಳಿದುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ : ಕನಸೆಂಬ ಕುದುರೆಯನ್ನೇರಿ; ಕುದುರೆ ಏರುವ ಮೊದಲಿನ ಕಥೆ

    ನವಾಪೊಲ್‌ ಗೆ ನೆನಪುಗಳ ಮೂಲಕ ಕಥೆ ಹೇಳುವುದು ಬಹಳ ಇಷ್ಟವಾದ ಕೆಲಸ. ಅದನ್ನು ತನ್ನಹಿಂದಿನ ಸಿನಿಮಾ ೩೬ ನಲ್ಲೂ ಪ್ರಯತ್ನಿಸಿದ್ದಾನೆ. ಆದ್ದರಿಂದ ಸಿನಿಮಾ ವ್ಯರ್ಥ ಪ್ರಲಾಪದಂತೆಯೋ ಅಥವಾ ತೀರಾ ನಾಟಕೀಯತೆಯಿಂದ ತುಂಬಿಕೊಂಡಿರುವ ಒಂದು ಕಲಾಕೃತಿಯಂತೆ ತೋರುವುದಿಲ್ಲ. ಎಲ್ಲವೂ ಡಿಜಿಟಲ್‌ ಎನ್ನುತ್ತಾ ಯಾಂತ್ರೀಕತೆಗೆ ಜಗತ್ತು ಮತ್ತು ನಾವು ಮತ್ತಷ್ಟು ತೆರೆದುಕೊಳ್ಳುತ್ತಿರುವಾಗ ಮನುಷ್ಯ ಸಂಬಂಧಗಳು, ಅದರೊಳಗಿನ ನೆನಪುಗಳಲ್ಲಿರುವ ಆರ್ದ್ರತೆ, ಭಾವನೆಗಳ ಅಗತ್ಯಗಳನ್ನು ಸೂಕ್ಷ್ಮವಾಗಿ ನಿರ್ದೇಶಕ ಉಲ್ಲೇಖಿಸುತ್ತಾನೆ. ಹಾಗಾಗಿಯೇ ಈ ಸಿನಿಮಾ ನಮ್ಮನ್ನು ನಾವು, ನಮ್ಮ ಬದುಕಿನ ಕ್ರಮವನ್ನೂ ಮತ್ತೊಮ್ಮೆ ಮರು ವಿಮರ್ಶೆಗೊಳಪಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

    ನವಾಪೊಲ್‌ನ ಒಂದು ಉತ್ತಮ ಕಲಾಕೃತಿಯಾಗಿ ಈ ಸಿನಿಮಾ ತೋರುತ್ತದೆ. ಒಂದು ಕಹಿ ನೆನಪನ್ನು ತಿರಸ್ಕರಿಸಿ ಮುಂದೆ ಸಾಗುವುದು ಪ್ರತಿಯೊಬ್ಬನ ಬದುಕಿನಲ್ಲಿ ಬಂದಿರಬಹುದಾದ ಕ್ಷಣಗಳು. ಅದಕ್ಕೆ ಬಹಳ ಸರಳವಾದ ಉತ್ತರಗಳಿರುವುದಿಲ್ಲ. ಅದರ ಬದಲಾಗಿ ನೋವನ್ನು ಸಹಿಸಿಕೊಳ್ಳಬೇಕಾದ ಹಾಗೂ ಮುಂದಡಿ ಇಡಬೇಕಾದ ಅನಿವಾರ್ಯತೆಗಳೂ ಕಾರಣವಾಗಿರುತ್ತವೆ. ಆಗ ನಮ್ಮ ಬುದ್ಧಿವಂತಿಕೆಯ ನಿರ್ಧಾರಗಳು ಉತ್ತರವಾಗಿ ತೋರಬಲ್ಲದು ಎಂಬುದನ್ನು ಹೇಳಲು ನಿರ್ದೇಶಕ ಪ್ರಯತ್ನಿಸುತ್ತಾನೆ.

    ಇನ್ನಷ್ಟು ಅಂಶಗಳು

    ಈ ಚಿತ್ರ ಥಾಯ್‌ಲ್ಯಾಂಡ್‌ನಿಂದ ೨೦೧೯ ಕ್ಕೆ ಆಸ್ಕರ್‌ ಗೆ ನಾಮ ನಿರ್ದೇಶನಗೊಂಡ ಚಿತ್ರ. ಕೊನೆಯ ಸುತ್ತಿನಲ್ಲಿ ಹೊರಗುಳಿಯಿತು. ಆದರೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಏಷ್ಯನ್‌ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು.

    ವಿವರ

    Chutimo Cheungcharoensukying-Jean

    Sunny suwanmethanont-Aim

    Sarika Satsilpupa-Mi

    Apsiri Chantrasmi-Jeans Mother

    Director/Producer- Nawapol Thamrongrattanarit

    Cinematography- Niramon Ross

    Editor- Chonlasit Upanigkit

    Year – 2019

    Country- Thailand

    Launguage- Thai

    Running time-113 minutes

     

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]