Saturday, September 28, 2024
spot_img
More

    Latest Posts

    Jugari Cross: ಪೂಚಂತೇ ಅವರ ಲೋಕದ ಆರನೇ ಸಿನಿಮಾ ಇದು !

    ಸಾಹಿತಿ ಪೂಚಂತೇ ಅವರ ಮತ್ತೊಂದು ಕಾದಂಬರಿ ಸಿನಿಮಾ ಆಗುತ್ತಿದೆ. ಅದು ಜುಗಾರಿ ಕ್ರಾಸ್.‌ ಈಗಾಗಲೇ ನಾಟಕವಾಗಿಯೂ ಪ್ರದರ್ಶಿತವಾಗಿರುವಂಥ ಕಾದಂಬರಿಯಿದು.

    ಹಾಗೆ ಹೇಳುವುದಾದರೆ ಇದು ಪೂಚಂತೇ ಅವರ ಕೃತಿಗಳನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವ ಉತ್ತರಾರ್ಧದ ಪ್ರಯತ್ನ ಎಂದೇ ಹೇಳಬೇಕು. ಈ ಉತ್ತರಾರ್ಧದ ಕ್ರಮದಲ್ಲಿ ಕಿರಗೂರಿನ ಗಯ್ಯಾಳಿಗಳು ಹಾಗೂ ಡೇರ್‌ ಡೆವಿಲ್‌ ಮುಸ್ತಫಾಗಳು ಸಿನಿಮಾಗಳಾಗಿವೆ. ಎರಡಕ್ಕೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಕಿರಗೂರಿನ ಗಯ್ಯಾಳಿಗಳು ಗಳಿಕೆಯಲ್ಲೂ ಯಶಸ್ವಿಯಾಗಿತ್ತು.

    ಇದಕ್ಕಿಂತ ಮೊದಲು ಪೂರ್ವಾರ್ಧದಲ್ಲಿ ಅಬಚೂರಿನ ಪೋಸ್ಟ್‌ ಆಫೀಸ್‌ ನ್ನು ಎನ್.‌ ಲಕ್ಷ್ಮೀನಾರಾಯಣರು ನಿರ್ದೇಶಿಸಿದ್ದರು 1973 ರಲ್ಲಿ. ನಾಣಿ, ಗಿರಿಜಾ ಲೋಕೇಶ್‌ ಮತ್ತಿತರರು ಅಭಿನಯಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಅತ್ಯುತ್ತಮ ಚಿತ್ರ ಪುರಸ್ಕಾರ ಲಭಿಸಿತ್ತು. ಹದಿನಾಲ್ಕು ವರ್ಷಗಳ ಬಳಿಕ ಗಿರೀಶ್‌ ಕಾಸರವಳ್ಳಿಯವರು ತಬರನ ಕಥೆಯನ್ನು ನಿರ್ದೇಶಿಸಿದ್ದರು. ಚಾರು ಹಾಸನ್‌, ನಳಿನಿ ಮೂರ್ತಿ, ಆರ್.‌ ನಾಗೇಶ್‌ ಮತ್ತಿತರರು ಅಭಿನಯಿಸಿದ್ದರು. ಈ ಚಿತ್ರಕ್ಕೂ ರಾಷ್ಟ್ರೀಯ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟನೆಗೆ ಚಾರು ಹಾಸನ್‌ ಗೆ ಪ್ರಶಸ್ತಿಗಳು ಬಂದಿದ್ದವು. ಅತ್ಯುತ್ತಮ ಚಿತ್ರ, ಕಥೆ, ನಟನೆ ಎಲ್ಲವನ್ನೂ ಸೇರಿ 7 ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿತ್ತು.

    ಅಮೆರಿಕಾ ಅಮೆರಿಕ: ಭಾಗ ಎರಡರಲ್ಲಿ ನಾಗತಿಹಳ್ಳಿಯವರ ಕಥೆ ಎಳೆ ಏನು?

    ಮತ್ತೊಂದು ಚಿತ್ರ 1992 ರಲ್ಲಿ ನಿರ್ಮಾಣವಾದದ್ದು. ಗಿರೀಶ್‌ ಕಾಸರವಳ್ಳಿಯವರು ಚಿತ್ರಕಥೆ ಬರೆದು ಸದಾನಂದ ಸುವರ್ಣರು ನಿರ್ದೇಶಿಸಿದ್ದ ಕುಬಿ ಮತ್ತು ಇಯಾಲದಲ್ಲೂ ಚಾರುಹಾಸನ್‌, ರಘುಬೀರ್‌ ಯಾದವ್‌ ಮತ್ತಿತರರು ನಟಿಸಿದ್ದರು. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿತ್ತು. ಅತ್ಯುತ್ತಮ ಕಥೆಯ ವಿಭಾಗದಲ್ಲೂ ಪುರಸ್ಕಾರ ಲಭಿಸಿತ್ತು. ಫಿಲ್ಮ್‌ ಫೇರ್‌ ಪ್ರಶಸ್ತಿ ಚಾರು ಹಾಸನ್‌ ರ ನಟನೆಗೆ ಸಿಕ್ಕಿತ್ತು. ಅಲ್ಲಿಗೆ ಪೂರ್ವಾರ್ಧದ ಕಥೆ ಮುಗಿದಿತ್ತು.

    ಬಳಿಕ 24 ವರ್ಷಗಳ ಬಳಿಕ 2016 ರಲ್ಲಿ ಸುಮನಾ ಕಿತ್ತೂರು ನಿರ್ದೇಶನದಲ್ಲಿ ಬಂದದ್ದು ಕಿರಗೂರಿನ ಗಯ್ಯಾಳಿಗಳು. ಶ್ವೇತಾ ಶ್ರೀವಾಸ್ತವ, ಸುಕೃತಾ ವಾಗ್ಳೆ, ಕಾರುಣ್ಯಾ ರಾಮ್‌, ಸೋನು ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದರು. ಬಿ. ಜಯಶ್ರೀ, ಗಿರಿಜಾ ಲೋಕೇಶ್‌, ಕಿಶೋರ್‌, ಅಚ್ಚುತ್‌ ಕುಮಾರ್‌, ಪ್ರಕಾಶ್‌ ಬೆಳವಾಡಿ, ಶರತ್‌ ಲೋಹಿತಾಶ್ವ ಮತ್ತಿತರರು ತಾರಾಗಣದಲ್ಲಿದ್ದರು. ಸಾಧು ಕೋಕಿಲರ ಸಂಗೀತವಿತ್ತು.

    ವೆನಿಸ್‌ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್‌ ಕಾಸರವಳ್ಳಿಯವರಿಗೆ ಪುರಸ್ಕಾರ

    2023 ರಲ್ಲಿ ಶಶಾಂಕ್‌ ಸೋಗಾಲ ನಿರ್ದೇಶಿಸಿದ್ದು ಡೇರ್‌ ಡೆವಿಲ್‌ ಮುಸ್ತಫಾ. ಶಿಶಿರ್‌ ಬೈಕಾಡಿ, ಆದಿತ್ಯ ಆಶ್ರೀ, ಪ್ರೇರಣಾ, ಮಂಡ್ಯ ರಮೇಶ್‌ ಮತ್ತಿತರರು ಅಭಿನಯಿಸಿದ್ದರು. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವೂ ವ್ಯಕ್ತವಾಗಿತ್ತು. ಗಳಿಕೆಯಲ್ಲೂ ಹಿಂದೆ ಬೀಳಲಿಲ್ಲ. ಕೆಲವು ಚಿತ್ರಮಂದಿರಗಳಲ್ಲಿ 50 ದಿನಗಳ ಕಾಲ ಪ್ರದರ್ಶನವಾಗಿದ್ದು ಇದರ ಮತ್ತೊಂದು ಯಶಸ್ಸು. ಎರಡು ದಿನಗಳ ಹಿಂದಷ್ಟೇ ಈ ಸಿನಿಮಾವನ್ನು ಯೂ ಟ್ಯೂಬ್‌ ನಲ್ಲೂ ವೀಕ್ಷಣೆಗೆ ಲಭ್ಯವಾಗಿಸಲಾಗಿದೆ. ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರ ವಿಭಾಗದಲ್ಲಿ, ಚೊಚ್ಚಲ ಚಿತ್ರದ ನಟನೆಯಡಿ ಶಿಶಿರ್‌ ಬೈಕಾಡಿಯವರಿಗೂ ಪುರಸ್ಕಾರ ಲಭಿಸಿತ್ತು.

    ಪೂರ್ಣ ಚಂದ್ರ ತೇಜಸ್ವಿಯವರ ಕಥೆಗಳೇ ಒಂದು ಸಿನಿಮಾದ ಹಾಗೆ. ನಾವು ಓದುತ್ತಾ ಹೋದಂತೆ ಕಣ್ಣ ಮುಂದೆ ಚಿತ್ರ ಪಟಗಳು ಸರದಿಯಂತೆ ಹಾದು ಹೋಗುತ್ತವೆ. ನಾವು ಅವುಗಳ ಹಿಂದೆ ನಡೆದು ಬಿಡುತ್ತೇವೆ. ಈ ಮಾತು ಕಿರಗೂರಿನ ಗಯ್ಯಾಳಿಗಳಿಗೂ ಅನ್ವಯ, ಚಿದಂಬರ ರಹಸ್ಯಕ್ಕೂ ಅಷ್ಟೇ. ಕರ್ವಾಲೋಗೂ ಅಷ್ಟೇ. ಅಂಥದೊಂದು ಕಥನ ಶಕ್ತಿ ಆ ಕಥೆಗಳಲ್ಲಿ ಇತ್ತು.

    ಸರಳವಾದ ನಿರೂಪಣೆಯಲ್ಲೇ ಭಾಷೆಯಲ್ಲಿನ ಗ್ರಾಂಥಿಕ ಪದಗಳ ಗೊಡವೆಗೆ ತೀರಾ ಹೋಗದೇ ಆಡು ನೆಲೆಯಲ್ಲೇ ಇರುವುದನ್ನು ಹೇಳುತ್ತಾ ಆಪ್ತರಾಗುವುದೂ ಮತ್ತೊಂದು ವಿಶೇಷ. ಅವರ ಕಥೆಗಳಲ್ಲೇ ಆ ಸಿನಿಮೀಯ ಗುಣ, ಚಿತ್ರಕಥೆಯ ಎಳೆಗಳು ಇದ್ದೇ ಇವೆ. ಹಾಗಾಗಿ ಚಿತ್ರಕಥೆ ಬರೆಯುವುದು ದೊಡ್ಡ ಸಂಗತಿಯಲ್ಲ.

    New Movie: ರಮೇಶ್‌ ಅರವಿಂದ್-‌ಗಣೇಶರಲ್ಲದೇ ಈ ನಿಮ್ಮ ಪ್ರೀತಿಯ ರಾಮ್‌ ಯಾರು?

    ಆದರೆ ಅವರ ಕಥೆಗಳನ್ನು ಸಿನಿಮಾ ಮಾಡುವವರಿಗೆ ಸಾಹಸ ಮತ್ತು ಸವಾಲು ಎನಿಸುವುದು ಅಷ್ಟೂ ಸಂಗತಿಗಳನ್ನು ಒಂದು ಸಿನಿಮಾದಲ್ಲಿ ಕಟ್ಟಿಕೊಡಲು ಪಡಬೇಕಾದ ಪ್ರಯಾಸ. ಅಷ್ಟೇ ಅಲ್ಲ, ಅದರಲ್ಲಿನ ಸಿನಿಮೀಯ ಗುಣದ ತಾಜಾತನವನ್ನು ನಮ್ಮ ಕಲ್ಪನಾ ಶಕ್ತಿಯನ್ನು ಸೀಮಿತಗೊಳಿಸುವಂಥ ತೆರೆಯ ಮೇಲೂ ಸೀಮಾತೀತಗೊಳಿಸುವುದು.

    ಬಹುತೇಕರು ಸೋಲುವುದು ಅಲ್ಲೇ. ಈ ಸವಾಲು ಬಹುತೇಕ ಕಾದಂಬರಿಕಾರರ, ಕಥೆಗಾರರ ಕಥೆಗಳನ್ನು ಅಳವಡಿಸುವಾಗ ಎದುರಿಸಲಾಗುತ್ತದೆ. ಎಷ್ಟೇ ಸ್ವಾತಂತ್ರ್ಯ ಎಂಬುದನ್ನು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡರೂ ಇಲ್ಲಿ ಸಾಕಾಗದು. ಹುಲಿಯನ್ನು ಹಿಡಿದು ಬೋನಿಗೆ ಹಾಕಿದಂತೆಯೇ ಪೂಚಂತೇ ಅವರ ಕಥೆಯನ್ನು ಸಿನಿಮಾದ ಪಂಜರದೊಳಗೆ ಬಂಧಿಸುವುದು.

    ಈ ದೃಷ್ಟಿಯಲ್ಲೇ ಜುಗಾರಿ ಕ್ರಾಸ್‌ ಹೇಗಾಗುತ್ತದೋ ಕಾದು ನೋಡಬೇಕು. ಗುರುದತ್‌ ಗಾಣಿಗ ಇದನ್ನು ನಿರ್ದೇಶಿಸುತ್ತಿದ್ದಾರೆ. ಯಾವ ರೀತಿ ಪ್ರೇಕ್ಷಕನ ಹಾಗೂ ಸಾಹಿತ್ಯಾಸಕ್ತನ ಕುತೂಹಲವನ್ನು ಕೆರಳಿಸುತ್ತದೆಯೋ ಕಾದು ನೋಡಬೇಕಿದೆ. ಯಾವುದಕ್ಕೂ ಗುರುದತ್‌ ಗೆ ಒಳ್ಳೆಯದಾಗಲಿ ಎನ್ನೋಣ, ಮತ್ತೆ ಸಾಹಿತ್ಯ ಕೃತಿಗಳ ತೋರಣ ಕನ್ನಡ ಚಿತ್ರರಂಗಕ್ಕೆ ಕಟ್ಟೋಣ.

    Latest Posts

    spot_imgspot_img

    Don't Miss

    Stay in touch

    To be updated with all the latest news, offers and special announcements.