ಎರಡು ವರ್ಷಕ್ಕೊಮ್ಮೆ ನಡೆಯುವ ಮುಂಬಯಿ ಅಂತಾರಾಷ್ಟ್ರೀಯ ಸಿನಿಮೋತ್ಸವ (MIFF) ಕ್ಕೆ ಸಿದ್ಧತೆ ಭರದಿಂದ ನಡೆದಿದೆ. ಈ ಮಧ್ಯೆ ಚಿತ್ರೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇರುವ ಸಿನಿ ಉತ್ಸಾಹಿಗಳಿಗೆ ನೋಂದಣಿಗೆ ಆಹ್ವಾನಿಸಿದೆ. ಎನ್ ಎಫ್ ಡಿಸಿ ಆಯೋಜಿಸುತ್ತಿರುವ ಈ ಸಿನಿಮೋತ್ಸವದ 18 ನೇ ಆವೃತ್ತಿ ಜೂನ್ 15 ರಿಂದ 21 ರವರೆಗೆ ಮುಂಬಯಿನಲ್ಲಿ ನಡೆಯಲಿದೆ.
ಕಿರುಗತೆ, ಸಾಕ್ಷ್ಯಚಿತ್ರ, ಅನಿಮೇಷನ್ ಚಿತ್ರಗಳಂಥ ಸೃಜನಶೀಲ ಪ್ರಸ್ತುತಿಗಳಿಗೆ ಇದು ಮುಖ್ಯ ವೇದಿಕೆಯಾಗಿದೆ. ಸಿನಿಮಾ ಪ್ರದರ್ಶನಗಳ ಜೊತೆಗೆ ಡಾಕ್ಯುಮೆಂಟರಿ ಬಜಾರ್, ಮಾಸ್ಟರ್ ಕ್ಲಾಸಸ್ ಎಲ್ಲವೂ ಇರಲಿದೆ. ಹದಿನೆಂಟು ವರ್ಷ ಪೂರೈಸಿರುವ ಎಲ್ಲರೂ ನೋಂದಣಿ ಮಾಡಿಕೊಳ್ಳಬಹುದು. ಪ್ರತಿನಿಧಿ ಶುಲ್ಕ 500 ರೂ. ಗಳು. ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಪ್ರತಿ ಪ್ರತಿನಿಧಿಗೂ ಗುರುತಿನ ಚೀಟಿ ನೀಡಲಾಗುತ್ತದೆ.
Cannes Palme d’or movies : ಪಾಲ್ಮೆದೋರ್ ಪ್ರಶಸ್ತಿ ಪಡೆದ ಈ ಐದು ಚಿತ್ರಗಳನ್ನು ತಪ್ಪದೇ ವೀಕ್ಷಿಸಿ
ಹದಿನೇಳು ಆವೃತ್ತಿಗಳಿಂದ ಸಾಕಷ್ಟು ಜನಪ್ರಿಯವಾಗಿರುವ ಮಿಫ್ ದಕ್ಷಿಣ ಏಷ್ಯಾದಲ್ಲೇ ಪ್ರಮುಖ ಚಲನಚಿತ್ರೋತ್ಸವವೆಂದು ಪರಿಗಣಿತವಾಗಿದೆ. ಜೂನ್ 16 ರಿಂದ 18 ರವರೆಗೆ ನಡೆಯುವ ಡಾಕ್ಯುಮೆಂಟರಿ ಬಜಾರ್ ನಲ್ಲಿ ಹೊಸಬರಿಗೆ ಅವಕಾಶ ಹೆಚ್ಚಿದೆ.
ಹೊಸಬರು ತಮ್ಮ ಕಥೆಗೆ ಅಥವಾ ಸ್ಕ್ರಿಪ್ಟ್ ಗೆ ಸೂಕ್ತ ಹೂಡಿಕೆದಾರರನ್ನೂ ಇಲ್ಲಿ ಹುಡುಕಲು ಅವಕಾಶವಿದೆ. ಡಾಕ್ಯುಮೆಂಟರಿ ಕೋ ಪ್ರೊಡಕ್ಷನ್ ಮಾರ್ಕೆಟ್ ಸಹ ಇರಲಿದೆ. ಇದರೊಂದಿಗೆ ಡಾಕ್ಯುಮೆಂಟರಿ ವ್ಯೂವಿಂಗ್ ರೂಂಗಳು ಇರಲಿದ್ದು, ಇಲ್ಲಿ ಡಾಕ್ಯುಮೆಂಟರಿಗಳ ಪ್ರದರ್ಶನವೂ ನಡೆಯಲಿದೆ.
Cannes 2024 : ಪಾಯಲ್ ಕಪಾಡಿಯರ ಚಲನಚಿತ್ರಕ್ಕೆ ಗ್ರ್ಯಾಂಡ್ ಪ್ರಿಕ್ಸ್ ಪುರಸ್ಕಾರ
ಅಲ್ಲದೇ ಡಾಕ್ಯುಮೆಂಟ್ ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್ ಇದೆ. ಸಾಕ್ಷ್ಯಚಿತ್ರ ನಿರ್ಮಾಪಕರು ತಮ್ಮ ಸಾಕ್ಷ್ಯಚಿತ್ರದ ನಿರ್ಮಾಣದ ಹಂತವನ್ನು ತೋರಿಸಲಿಕ್ಕೆ, ವಿವರಿಸಲಿಕ್ಕೂ ಒಂದು ವೇದಿಕೆಯಾಗಲಿದೆ. ಹಿರಿಯ ಸಿನಿಮಾ ಕರ್ತೃಗಳು ಭಾಗವಹಿಸಲಿದ್ದು, ಕೆಲವು ಸಲಹೆಗಳನ್ನೂ ನೀಡುವರು. ಇದು ಪೂರ್ಣ ಅಕಾಡೆಮಿಕ್ ಹಿನ್ನೆಲೆಯದ್ದು.
ದೇಶ ವಿದೇಶಗಳಿಂದ ಸಾವಿರಾರು ಮಂದಿ ಈ ಉತ್ಸವದಲ್ಲಿ ಪ್ರತಿ ಬಾರಿ ಪಾಲ್ಗೊಳ್ಳುವರು. ಅಂಥದ್ದೇ ನಿರೀಕ್ಷೆ ಈ ವರ್ಷವೂ ಚಿತ್ರೋತ್ಸವ ಸಮಿತಿ ಹೊಂದಿದೆ. ನೋಂದಣಿ ಮಾಡುವವರು ಇಲ್ಲಿ ಕ್ಲಿಕ್ ಮಾಡಬಹುದು.