ಜೂನ್ 14 ಶುಕ್ರವಾರ. ಚಿತ್ರಮಂದಿರಗಳಲ್ಲಿ ಮೂರು ಕಾರಣಗಳಿಂದ ಜನರು ತುಂಬಬೇಕು. ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ. ಮೂರೂ ವಿಭಿನ್ನ ನೆಲೆಯ, ವಿಭಿನ್ನ ಕಥಾ ಹಂದರದ ಸಿನಿಮಾಗಳು. ಸಾಮಾನ್ಯವಾಗಿ ಪ್ರತಿವಾರ ಹಲವಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅವೆಲ್ಲವೂ ಬಹುತೇಕ ಒಂದೇ ಕಡೆಯಿಂದ ಹೊರಟು ಮೂರು ಟಿಸಿಲುಗಳಾಗಿ ಮತ್ತೆ ಒಂದಾಗುವ ಕಥೆಗಳು ಸಾಮಾನ್ಯ. ದ್ವೇಷ ಸಾಧನೆ ಅಥವಾ ಮುಯ್ಯಿಗೆ ಮುಯ್ಯಿ ಎಲ್ಲ ಸಿನಿಮಾಗಳ ಮೂಲಗುಣವಾಗಿರುತ್ತದೆ. ಅದನ್ನು ಸಾಧಿಸಲು ಹೀರೋವಿಗೆ ಒಂದಿಷ್ಟು ಮಾನವೀಯ ಗುಣ, ಸಾಹಸ ಗುಣ, ಅಂದ ಚೆಂದಗಳ ಬಣ್ಣ ಬಳಿದು, ಒಂದೆರಡು ಡ್ಯೂಯೆಟ್ ಗಳನ್ನೂ ಹಾಡಿಸಿ, ಅಭಿಮಾನಿಗಳೆಂಬವರಿಂದ ಸಿಳ್ಳೆ ಹಾಕಿಸಿ ಎಲ್ಲ ಮುಗಿಯುವಷ್ಟರಲ್ಲಿ ಧೋ ಎನ್ನುವ ಮಳೆ ಸುರಿಯುತ್ತದೆ. ಆ ಮಳೆ ರಭಸಕ್ಕೆ ಹೀರೋವಿಗೆ ಬಳಿದ ಬಣ್ಣವೆಲ್ಲ ಹೋಗಿ ನಿರ್ವಿಣ್ಣನಾಗುತ್ತಾನೆ.
ಅಲ್ಲಿಗೆ ಹೀರೋ ಕೈಗೆ ಒಂದು ದೊಡ್ಡ ಲಾಂಗು (ಹಿಂದಿನ ಸಿನಿಮಾಕ್ಕಿಂತ ಇದರಲ್ಲಿ ತುಸು ಉದ್ದ ಹೆಚ್ಚು-ಒಂದೇ ರೀತಿ ಆಗಬಾರದಲ್ಲ ಅದಕ್ಕೇ). ಝಳಪಿಸುವ ಧ್ವನಿ, ಆಮೇಲೆ ಕೇಡಿಗಳ ಚೀತ್ಕಾರ, ಛಿಲ್ಲನೆ ಹಾರುವ ರಕ್ತ, ನೆಲಕ್ಕುರುಳುವ ರುಂಡ-ಮುಂಡಗಳು, ಅದನ್ನು ಎಷ್ಟು ಸಾಧ್ಯವೋ ಅಷ್ಟು ಸೌಂದರ್ಯಪೂರ್ಣವಾಗಿ ಮಾನವನ ವಿಕಾರತೆಯನ್ನು ತೋರಿಸುತ್ತಾರೆ. ಅವರ ವೃತ್ತಿ ನೈಪುಣ್ಯವನ್ನು ಹೊಗಳಲೇಬೇಕು. ಹಾಗಾಗಿ ಯಾವುದೋ ಒಂದು ಸಿನಿಮಾ (ಯಾವ ಹೀರೋ ಹೆಚ್ಚು ಜೋರಾಗಿ, ವಿಚಿತ್ರ ಹಾಗೂ ವಿಕಾರವಾಗಿ ಲಾಂಗ್ ಬೀಸಿ ರುಂಡಗಳನ್ನು ಉರುಳಿಸಿರುತ್ತಾರೋ, ಹೆಚ್ಚು ಕೇಕೆ ಬಿದ್ದಿರುತ್ತದೋ ಆ ಸಿನಿಮಾ) ವಾರ ಕಾಲ ನಡೆದು ವಿವಿಧ ವಿಧಾನಗಳಿಂದ ದುಡ್ಡು ಮಾಡಿ ಅದೇ ಮುಂದಿನ ಸಿನಿಮಾ ಯಶಸ್ಸಿನ ಸೂತ್ರ ಎಂದು ಬಿಂಬಿತವಾಗಿ ಮತ್ತಷ್ಟು ಲಾಂಗುಗಳು ಸಿನಿಮಾ ರಂಗಕ್ಕೆ ನವ ಪರಿಚಯದಂತೆ ಪರಿಚಯವಾಗುತ್ತವೆ ಅಷ್ಟೇ. ಬಿಡುಗಡೆಯಾದ ಉಳಿದ ಸಿನಿಮಾಗಳ ಕಥೆ ಬೇಡ ಬಿಡಿ.
Movie Monsoon :ಜೂನ್ ನಲ್ಲಿ ಮುಂಗಾರು; ಕನ್ನಡ ಸಿನಿಮಾಗಳದ್ದೂ ಮುಂಗಾರೇ !
ಈ ವಾರ ಹಾಗೆ ನೋಡಿದರೆ ಸ್ವಲ್ಪ ವಿಭಿನ್ನ. ಅದಕ್ಕಾಗಿಯೇ ಮೂರೂ ಸಿನಿಮಾಗಳನ್ನು ನೋಡಿ ಬೆಂಬಲಿಸಿ.
ರಿಷಭ್ ರ ಸಿನಿಮಾ ಶಿವಮ್ಮ ಯರೇಹಂಚಿನಾಳ
ಮೊದಲನೆಯದು- ಶಿವಮ್ಮ. ರಿಷಭ್ ಶೆಟ್ಟಿ ಫಿಲಂಸ್ ನವರು ನಿರ್ಮಿಸಿ ಜೈಶಂಕರ್ ಆರ್ಯರ್ ನಿರ್ದೇಶಿಸಿರುವ ಸಿನಿಮಾ. ಇದುವರೆಗೆ ಬೆಂಗಳೂರು ಚಿತ್ರೋತ್ಸವವೂ ಸೇರಿದಂತೆ ಹಲವು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸಿನಿಮಾ ಇದು. ಬದುಕಿನ ಸರಳ ಸತ್ಯವನ್ನು ಅರಿಯುತ್ತಾ, ಜೀವಿಸುತ್ತಾ, ಸಂದರ್ಭಗಳನ್ನು ತನ್ನ ನೆಲೆಗೆ ಮರು ವ್ಯಾಖ್ಯಾನಿಸಿಕೊಳ್ಳುತ್ತಾ ಬದುಕನ್ನು ಗೆಲ್ಲುವ ಗುರಿ ಮುಟ್ಟುವ ಹಂಬಲದ ಸಿನಿಮಾ. ಗ್ರಾಮೀಣ ನೆಲೆಯಲ್ಲೇ ನಡೆಯುವ ಚಿತ್ರ. ಶಿವಮ್ಮ ಯರೇಹಂಚಿನಾಳ ಜೀವನೋತ್ಸಾಹಿಯ ಕಥೆ.
ಶಿವಮ್ಮ ವೃತ್ತಿ ನಿರತ ಕಲಾವಿದೆಯಲ್ಲ. ಹಳ್ಳಿಯ ಮಹಿಳೆ ಶರಣಮ್ಮ ಚೆಟ್ಟಿ, ಚೆನ್ನಮ್ಮ ಅಬ್ಬಿಗೆರೆ ಈ ಚಿತ್ರಕ್ಕಾಗಿ ಕಲಾವಿದರಾದದ್ದು. ಈಗಾಗಲೇ ತಮ್ಮದೇ ಅದ ವಿಭಿನ್ನ ರೀತಿಯ ಪ್ರೊಮೋಷನ್ ಗಳಿಂದ ಶಿವಮ್ಮ ಚಿತ್ರ ಸುದ್ದಿ ಮಾಡಿದೆ. ಟೀಸರ್, ಟ್ರೇಲರ್ ಹಾಗೂ ಪ್ರೊಮೋಷನ್ ಹಾಡುಗಳೆಲ್ಲವೂ ಜನಪ್ರಿಯವಾಗಿದೆ. ಊರವರೆಲ್ಲ ಬಂದು ಸಿನಿಮಾ ನೋಡಿ ಎನ್ನುವ ಗೀತೆ ಸಿನಿ ಪ್ರೇಕ್ಷಕರಿಗೆ ಆಹ್ವಾನವಾಗಿ ಬಿಡುಗಡೆಯಾಗಿದೆ. ಸೌಮ್ಯಾನಂದ್ ಸಾಹಿಯವರ ಸಿನೆಛಾಯಾಗ್ರಹಣವಿದೆ.
ಕೋಟಿ- ಡಾಲಿ ಧನಂಜಯರ ಹೊಸ ಅವತಾರ
ಎರಡನೇ ಸಿನಿಮಾ ಕೋಟಿ. ಕೋಟಿ ಎನ್ನುವ ಶೀರ್ಷಿಕೆಯಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಅದು ಹಾಗಲ್ಲ ಎಂದು ಚಿತ್ರತಂಡ ಹೇಳುತ್ತದೆ. ಜ್ಯೋತಿ ದೇಶಪಾಂಡೆ ನಿರ್ಮಿಸಿರುವ ಚಿತ್ರ. ಚಿತ್ರಕಥೆ ಬರೆದು ನಿರ್ದೇಶಿಸಿರುವವರು ಪರಮ್. ನಿರ್ದೇಶನ ಹೊಸದಾದರೂ ಕಥೆಗಾರ ಪರಮ್. ಹಲವು ಕಥೆಗಳನ್ನು ಟಿವಿ ಧಾರಾವಾಹಿ, ರಿಯಾಲಿಟಿ ಷೋಗಳ ಮೂಲಕ ಹೇಳಿದವರು.
ಧನಂಜಯ ಮೂಲತಃ ನಟ. ಹಾಗಾಗಿಯೇ ಪಾತ್ರಗಳಾಗಿ ವಿಜೃಂಭಿಸಲು ಗೊತ್ತಿದೆ. ಕೋಟಿಯಲ್ಲೂ ಧನಂಜಯ ಅಂಥದೊಂದು ಪ್ರಯತ್ನ ಮಾಡಿದ್ದಾರೆ. ಕಥೆ ಬಹಳ ಸರಳವಾದದ್ದು. ಕೋಟಿ ದುಡಿದರೆ ಬದುಕನ್ನು ಆರಾಮಾಗಿ ನಾವಂದುಕೊಂಡಂತೆ ಬದುಕಬಹುದು ಎನ್ನುವುದು ಎಲ್ಲರ ಲೆಕ್ಕಾಚಾರ. ಮಧ್ಯಮ ವರ್ಗದ ಒಬ್ಬ ಯುವಕ ಪ್ರಾಮಾಣಿಕವಾಗಿ ಆ ಕೋಟಿಯ ಕನಸನ್ನು ಗಳಿಸಲು ಹೊರಡುವವನ ಕಥೆಯಿದು. ಧನಂಜಯರೇ ಹೇಳುವಂತೆ ಎಲ್ಲರ ಮನೆಯಲ್ಲೂ ಇಂಥ ಕೋಟಿ ಇರುತ್ತಾನೆ. ಹೌದಲ್ಲ, ಅಂಥದೊಂದು ಕನಸು ಅಣ್ಣನೋ, ತಮ್ಮನೋ, ಅಕ್ಕನೋ, ಅಮ್ಮನೋ, ಅಪ್ಪನೋ ರೂಪದಲ್ಲಿ ಇರುತ್ತದಲ್ಲ.
ಈ ಸಿನಿಮಾದಲ್ಲಿ ಒಂದಿಷ್ಟು ಹಾಡು, ಫೈಟಿಂಗ್ ಗಳಿವೆ. ಅನಿರೀಕ್ಷಿತ ತಿರುವುಗಳಿಂದ ಕೂಡಿರುವ ಫ್ರಾಮಿಲಿ ಥ್ರಿಲ್ಲರ್ ಸಿನಿಮಾವಂತೆ. ಎಲ್ಲರಿಗೂ ಇಷ್ಟವಾಗಬಹುದು ಎನ್ನುವುದು ಚಿತ್ರತಂಡದ ನಿರೀಕ್ಷೆ. ಜೀ ಸ್ಟುಡಿಯೋ ಈ ಸಿನಿಮಾದ ಮೂಲಕ ಕನ್ನಡ ದ ಮಾರುಕಟ್ಟೆಗೂ ಬಂದಿದೆ. ಮೋಕ್ಷಾ ಕುಶಾಲ್ ಈ ಸಿನಿಮಾದಲ್ಲಿ ಡಾಲಿ ಧನಂಜಯರಿಗೆ ನಾಯಕಿ. ಮೋಕ್ಷಾ ಕೊಡಗಿನ ಮೂಲದವರು. ಹಾಗೆಯೇ ಸಪ್ತ ಸಾಗರದಾಚೆ ಸಿನಿಮಾದ ಬಳಿಕ ಹೆಚ್ಚು ಜನಪ್ರಿಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟರಾಗಿ ನಟಿಸಿದ್ದಾರೆ. ವಾಸುಕಿ ವೈಭವ್ ರ ಹಾಡುಗಳ ಸ್ವರ ಸಂಯೋಜನೆ, ಯೋಗರಾಜ ಭಟ್ಟರ ಹಾಡುಗಳು, ನೊಬಿನ್ ಪೌಲ್ ರ ಸಂಗೀತ ನಿರ್ದೇಶನವಿದೆ. ನೊಬಿನ್ ಪೌಲ್ 777 ಚಾರ್ಲಿ ಹಾಗೂ ಮಲಯಾಳಂನ 2018 ರ ಮೂಲಕ ಜನಪ್ರಿಯರಾದವರು.
ಅನಿರುದ್ಧರ ಚೆಫ್ ಚಿದಂಬರ
ಮೂರನೇ ಚಿತ್ರ ಚೆಫ್ ಚಿದಂಬರ. ಅನಿರುದ್ಧ ಜತ್ಕರ್ ಮೂರ್ನಾಲ್ಕು ವರ್ಷಗಳ ಬಳಿಕ ಕಿರುತೆರೆಯಿಂದ ಬಿಡುಗಡೆ ಮಾಡಿಕೊಂಡು ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ. ಒಬ್ಬ ಬಾಣಸಿಗನ ಕಥೆ. ರಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ಇಬ್ಬರು ಅನಿರುದ್ಧರೊಂದಿಗೆ ನಟಿಸಿದ್ದಾರೆ. ಶರತ್ ಲೋಹಿತಾಶ್ವ ಕೊಂಚ ವಿನೋದ, ಹಾಸ್ಯ, ವಿಡಂಬನೆ – ಈ ರೀತಿಯ ಗುಣವಿರುವ ಸಿನಿಮಾ ಎನ್ನುತ್ತದೆ ಚಿತ್ರತಂಡ. ಇದರಲ್ಲೂ ಹಾಡು ಇರಬಹುದು.
ಒಂದುವೇಳೆ ಫೈಟಿಂಗ್ ಇದ್ದರೂ ಲಾಂಗು, ಮಚ್ಚು ಎಲ್ಲ ಇರಲಾರದು. ಬಾಣಸಿಗನ ಕೈಯಲ್ಲಿ ಸೌಟು ಇದ್ದ ಪೋಸ್ಟರ್ ಗಳು ಬಿಡುಗಡೆಯಾಗಿವೆ (ಚಿತ್ರದ ಒಳಗೆ ಲಾಂಗಿದ್ದರೆ ಗೊತ್ತಿಲ್ಲ, ಇಲ್ಲವೆಂದುಕೊಳ್ಳೋಣ). ಟ್ರೇಲರ್ ಕೊಂಚ ನಿರೀಕ್ಷೆ ಹುಟ್ಟಿಸಿದೆ. ಎಂ ಆನಂದರಾಜ್ ನಿರ್ದೇಶಿಸಿರುವ ಚಿತ್ರವನ್ನು ರೂಪಾ ಡಿ ಎನ್ ನಿರ್ಮಿಸಿದ್ದಾರೆ. ಋತ್ವಿಕ್ ಮುರಳೀಧರರ ಸಂಗೀತ ನಿರ್ದೇಶನ, ಉದಯ್ ಲೀಲಾ ಅವರ ಸಿನೆಛಾಯಾಗ್ರಹಣವಿದೆ.
ನೋಡಬೇಕು, ಪ್ರೇಕ್ಷಕನ ನ್ಯಾಯ ತಕ್ಕಡಿಯಲ್ಲಿ ಯಾವುದು ಹೇಗೆ ತೂಗುವುದೋ ಕಾದು ನೋಡೋಣ.