Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !

ಶುಕ್ರವಾರ ಹೋಗಿ ಶನಿವಾರ ಬಂದಿತು. ಈ ವಾರ ಬಿಡುಗಡೆಯಾದ ಚಿತ್ರಗಳು ಒಟ್ಟು ಆರು. ಅದರಲ್ಲಿ ಮೂರು ವಿಭಿನ್ನ ನೆಲೆಯ ಕಥೆಗಳಾಗಿ ಕೇಳಿಬಂದಿತ್ತು. ಮೊದಲನೆಯದು ಶಿವಮ್ಮ, ಎರಡನೆಯದು ಕೋಟಿ ಹಾಗೂ ಮೂರನೆಯದು ಚೆಫ್‌ ಚಿದಂಬರ.

ಮೂರೂ ಕಥೆಗಳ ಎಳೆ ಗೊತ್ತೇ ಇದೆ. ಶಿವಮ್ಮ ಎನ್ನುವುದನ್ನು ಬ್ರಿಡ್ಜ್‌ ಸಿನಿಮಾ ಎನ್ನೋಣ. ಉಳಿದವೆರಡೂ ಮನರಂಜನಾತ್ಮಕ ಚಿತ್ರಗಳು. ಶುದ್ಧವೋ, ಅಶುದ್ಧವೋ ಅದನ್ನು ಹೇಳಲಾಗದು.

Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಶುಕ್ರವಾರದ ಹಲವು ವೀಕ್ಷಕರ ಅಭಿಪ್ರಾಯಗಳನ್ನು, ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಬಹುಮುಖ್ಯವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳನ್ನೆಲ್ಲ ಒಟ್ಟುಗೂಡಿ ಹಾಕಿ ಗುಣಿಸಿ, ಕೂಡಿಸಿ, ಕಳೆದು, ಭಾಗಾಕಾರ ಮಾಡಿದರೆ ಸಿಗುವ ಶೇಷವೆಂದರೆ ʼಶಿವಮ್ಮ ನೋಡಬಹುದು, ಕೋಟಿ ಆಗಬಹುದುʼ. ಚೆಫ್‌ ಚಿದಂಬರ ಕುರಿತು ಇಂಥ ಸ್ಪಷ್ಟ ಅಭಿಪ್ರಾಯ ಕಂಡು ಬಂದಿದ್ದು ಕಡಿಮೆ.

ಶಿವಮ್ಮ ಕಥೆಯ ಎಳೆಯೇ ಸಂಪೂರ್ಣ ಭಿನ್ನವಾಗಿದ್ದದ್ದು. ಅದರೊಂದಿಗೆ ವೃತ್ತಿಪರವಲ್ಲದ,ಹವ್ಯಾಸಿಯೂ ಅಲ್ಲದ ಶರಣಮ್ಮ ಶಿವಮ್ಮಳಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಹಳಷ್ಟು ಕಡೆ ವ್ಯಕ್ತವಾಗಿರುವ ಧನಾತ್ಮಕ ಅಭಿಪ್ರಾಯವೆಂದರೆ ದಂಡಿಯಾಗಿ ವೃತ್ತಿಪರವಲ್ಲದವರನ್ನು ಹಾಕಿಕೊಂಡು ಅಭಿನಯವನ್ನು ಸಾಧ್ಯವಾಗಿಸಿರುವುದು. ಹಾಗೆಯೇ ಅಭಿನಯ ಹಾಗೂ ಬದುಕಿನ ನಿತ್ಯದ ಬದುಕುವ ಕ್ರಮದ ನಡುವೆ ಒಂದು ಸಾತತ್ಯ ಹುಡುಕುವ ಪ್ರಯತ್ನ ಮಾಡಿರುವುದಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಶಿವಮ್ಮ ಆಕ್ಟ್‌ ಮಾಡಿದಂತೆಯೇ ಅನಿಸುವುದಿಲ್ಲ. ಅಷ್ಟೊಂದು ಸಹಜವಾಗಿದೆ ಅಭಿನಯ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕಾಗಿಯಾದರೂ ಶಿವಮ್ಮಳನ್ನು ಒಮ್ಮೆ ನೋಡಬೇಕು. ಹಾಡು, ಡ್ಯಾನ್ಸ್‌, ಫೈಟಿಂಗ್‌ ಇಲ್ಲದೆಯೂ ಪ್ರೇಕ್ಷಕರನ್ನು ಸಿನಿಮಾದೊಳಗೆ ತೊಡಗಿಸಿಕೊಳ್ಳುವ ಶಕ್ತಿ ಇದಕ್ಕಿದೆ ಎಂಬುದು ಮತ್ತೊಂದು ಧನಾತ್ಮಕ ಅಭಿಪ್ರಾಯ.

ರಿಷಭ್‌ ಶೆಟ್ಟಿಯವರ ಸಂಸ್ಥೆ ರಿಷಭ್‌ ಫಿಲಂಸ್‌ ನಿರ್ಮಿಸಿರುವ ಚಿತ್ರವನ್ನುಜೈಶಂಕರ್‌ ಆರ್ಯರ್‌ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ಈ ಬ್ರಿಡ್ಜ್‌ ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ಬಿಡುಗಡೆ ಮಾಡುವುದೇ ಕಡಿಮೆ. ಯಾವುದಾದರೂ ಚಿತ್ರೋತ್ಸವಗಳಲ್ಲಿ ಕಾಣ ಸಿಗುವುದೇ ಹೆಚ್ಚು. ಅಂಥದ್ದರಲ್ಲಿ ಶಿವಮ್ಮ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಒಮ್ಮೆ ನೋಡಿ, ಬೆಂಬಲಿಸಿ. ಯಾಕೆಂದರೆ ಒಳ್ಳೆಯ ಚಿತ್ರಗಳ ಸಂತತಿ ಸಾವಿರವಾಗಬೇಕು.

Movie Monsoon: ಈ ಶುಕ್ರವಾರದ ಮೂರು ಸಿನಿಮಾಗಳ ಕಥೆ

ಇನ್ನು ಕೋಟಿ ಸಿನಿಮಾ. ಈ ವರ್ಷದ ಅತ್ಯಂತ ನಿರೀಕ್ಷೆ ಹುಟ್ಟಿಸಿದ ಚಿತ್ರ. ಡಾಲಿ ಧನಂಜಯರ ಸಿನಿಮಾ. ಮೊದಲನೇ ದಿನದ ಒಟ್ಟೂ ಅಭಿಪ್ರಾಯವೆಂದರೆ ಧನಂಜಯರ ಹೊಸ ಸ್ವರೂಪ ಇಲ್ಲಿ ಕಾಣಲು ಸಾಧ್ಯವಾಗಿದೆ. ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಬಹುತೇಕರ ಅಭಿಪ್ರಾಯ ಇದೇ. ಧನಂಜಯರ ನಟನೆ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಒಟ್ಟೂ ಚಿತ್ರದ ಬಗ್ಗೆ ಪರವಾಗಿಲ್ಲ, ನೋಡಬಹುದು. ಆದರೆ ಕೊಂಚ ದೀರ್ಘವಾಯಿತು ಎಂಬ ಅಭಿಪ್ರಾಯವಿದೆ.

ಇನ್ನು ಕೆಲವರು, ಸಿನಿಮಾದ ಲೆಂಥ್‌ ಸ್ವಲ್ಪ ಕಡಿಮೆಯಾಗಬೇಕಿತ್ತು. ಪೂರ್ವಾರ್ಧ ಹಾಗೂ ಕ್ಲೈಮ್ಯಾಕ್ಸ್‌ ಭಾಗದ ಉತ್ತರಾರ್ಧ ದೂರದ ಸಂಬಂಧಿ ಎನ್ನುವಂತಿದೆ. ಇದು ಸ್ವಲ್ಪ ಪ್ರೇಕ್ಷಕನಿಗೆ ಗೊಂದಲ ಮೂಡಿಸಬಹುದು, ಸಿನಿಮಾ ಯಾವಾಗ ಮುಗಿಯುತ್ತೆ ಎನಿಸಬಹುದು, ಎಲ್ಲೋ ಕಳೆದು ಹೋಯಿತಲ್ಲ ಎನಿಸಲೂ ಬಹುದು ಎನ್ನುತ್ತಿದ್ದಾರೆ. ಬಹಳ ಮುಖ್ಯವಾದ ಧನಾತ್ಮಕ ಅಂಶವೆಂದರೆ ಇದರಲ್ಲೂ ಧನಂಜಯರು ಗೆದ್ದಿದ್ದಾರೆ. ಅವರ ನಟನೆಯನ್ನು ಇಷ್ಟಪಡುವವರಿಗೆ ಇದು ಮತ್ತೊಂದು ದರ್ಶನ. ಅದರಲ್ಲಿ ಎರಡು ಮಾತಿಲ್ಲ.

MIFF: 59 ದೇಶಗಳು,61 ಭಾಷೆಗಳು, 314 ಚಿತ್ರ ಕೃತಿಗಳ ಪ್ರದರ್ಶನ

ಚೆಫ್‌ ಚಿದಂಬರ ಕುರಿತು ಅಭಿಪ್ರಾಯ ಪರವಾಗಿಲ್ಲ ಎಂದು ಕೇಳಿಬರುತ್ತಿದೆ. ಕಥೆಯೊಳಗೆ ಇರುವ ಅಡುಗೆಗೆ ಬೇಕಾದ ವಸ್ತುಗಳೆಲ್ಲಾ ಅದೇ. ಆಸ್ತಿ, ಮುತ್ತಿಕ್ಕುವ ಇರುವೆಗಳು, ಸಣ್ಣದೊಂದು ಪ್ರಣಯ, ಇರುವೆ ಓಡಿಸಲಿಕ್ಕೆ ಸಣ್ಣ ಫೈಟಿಂಗ್‌, ಮಧ್ಯೆ ಮಧ್ಯೆ  ತುಟಿ ಬಿಗಿದುಕೊಳ್ಳದಿರಲಿ ಎಂಬಂತೆ ಒಂದಿಷ್ಟು ಹಾಸ್ಯ..ಕೊನೆಗೇ ಚಿದಂಬರನ ಬಿರಿಯಾನಿ..ವಿಡಂಬನೆ, ಥ್ರಿಲ್ಲರ್…ಹೀಗೆ ಹಲವು ಅಂಶಗಳುಳ್ಳ ಹೊಸರುಚಿಯ ಪ್ರಯತ್ನ !

ಚಿತ್ರಮಂದಿರದೊಳಗೆ ಹೋದವನು ಹೊರಗೆ ಬರುವಾಗ “ಓಕೆ” ಎನ್ನುವಂತಿದೆ. ಈ ಓಕೆಯಲ್ಲಿನ ರಭಸ ಆಯಾ ಪ್ರೇಕ್ಷಕರ ಅಭಿರುಚಿಗೆ ದಕ್ಕಿದ್ದು. ಅನಿರುದ್ಧ, ನಿಧಿ ಸುಬ್ಬಯ್ಯ, ರಚೆಲ್‌ ಡೇವಿಡ್‌, ಶರತ್‌ ಲೋಹಿತಾಶ್ವರ ಅಭಿನಯದ ಬಗ್ಗೆ ಸದಭಿಪ್ರಾಯವೇ ಕೇಳಿಬರುತ್ತಿದೆ.

ಒಟ್ಟೂ ಮೂರೂ ಚಿತ್ರಗಳು ಒಂದಿಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಧ್ಯತೆಯನ್ನು ಹುಟ್ಟು ಹಾಕಿವೆ. ಆದರೆ ಮೂರೂ ಸಿನಿಮಾಗಳು ವಿಭಿನ್ನ ಮಾದರಿಯ ಪ್ರೇಕ್ಷಕರನ್ನೇ ಆಕರ್ಷಿಸುವ ಕಾರಣ, ಪರಸ್ಪರ ಪ್ರೇಕ್ಷಕರನ್ನು ಕಿತ್ತುಕೊಳ್ಳುವ ಪ್ರಮೇಯ ಉದ್ಭವಿಸದು.

LEAVE A REPLY

Please enter your comment!
Please enter your name here

spot_img

More like this

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ...

Movie Monsoon: ಈ ಶುಕ್ರವಾರದ ಮೂರು ಸಿನಿಮಾಗಳ ಕಥೆ

ಜೂನ್‌ 14 ಶುಕ್ರವಾರ. ಚಿತ್ರಮಂದಿರಗಳಲ್ಲಿ ಮೂರು ಕಾರಣಗಳಿಂದ ಜನರು ತುಂಬಬೇಕು. ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ. ಮೂರೂ ವಿಭಿನ್ನ ನೆಲೆಯ, ವಿಭಿನ್ನ ಕಥಾ ಹಂದರದ...