Multiflex Mania: ಮಲ್ಟಿಫ್ಲೆಕ್ಸ್‌ ಗಳು ಅನುಕೂಲಕ್ಕೆ; ಸಿಂಗಲ್‌ ಸ್ಕ್ರೀನ್‌ ಅನುಭವಕ್ಕೆ !

ಕಾಲದ ಲೆಕ್ಕಾಚಾರ ಹೇಗಿದೆ ನೋಡಿ. ಫೇಸ್ಬುಕ್‌ ನಲ್ಲಿ ಅಪೂರ್ವ ಡಿಸಿಲ್ವಾ ಎಂಬವರು ಬೆಂಗಳೂರಿನ ನಟರಾಜ್‌ ಥಿಯೇಟರಿನ ಚಿತ್ರ ಹಾಕಿ ಸಿಂಗಲ್‌ ಸ್ಕ್ರೀನ್‌ ಎಂಬ ಬೆಳ್ಳಿ ಪರದೆ ನಿಧಾನಕ್ಕೆ ತೆರೆಗೆ ಸರಿಯುತ್ತಿದೆ. ಕನ್ನಡ ಚಿತ್ರರಂಗದ ಘಟಾನುಘಟಿಗಳೆಲ್ಲ ನೋಡಿಯೂ ಸುಮ್ಮನಿದ್ದಾರೆಯೇ? ಕಾಲದ ನಡಿಗೆಯಲ್ಲಿ ಸಿಂಗಲ್‌ ಸ್ಕೀನ್‌ ಅನ್ನೋ ಮಾಯಾಜಾಲ ಬಿತ್ತಿದ ಮನರಂಜನೆ, ಅರಿವು, ಪ್ರೀತಿಯ ಪಾಠಗಳೆಲ್ಲ ಮಾರುಕಟ್ಟೆಯ ಎದುರು ನಜ್ಜುಗುಜ್ಜಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೇ ಚುಂಗು ಹಿಡಿದು ಬರೆದ ಲೇಖನವಿದು.

ಸತ್ಯ. ಮಲ್ಟಿಫ್ಲೆಕ್ಸ್‌ ನ ಮಾಯಾವಿಯ ಕಾಂಚಾನ ಕುಣಿತದ ಎದುರು ಉಳಿದೆಲ್ಲವೂ ಮಸುಕಾಗುತ್ತಿವೆ. ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾವೇರಿ ಥಿಯೇಟರ್‌ ಮುಚ್ಚಿದ ಸುದ್ದಿ ಬಂದಿತು. ಆದಕ್ಕಿಂತ ಮೊದಲು ಕಪಾಲಿ, ತ್ರಿಭುವನ್‌, ಕೆಂಪೇಗೌಡ..ಹೀಗೆ ಹತ್ತಾರು ಥಿಯೇಟರ್‌ ಗಳು ಕಾಲದ ಬಿರುಗಾಳಿಗೆ ಕುಸಿದು ಕುಳಿತವು. ಇದು ಬರೀ ಮೆಟ್ರೋ ನಗರದ ಕಥೆಯಲ್ಲಷ್ಟೇ ಅಲ್ಲ. ಪ್ರತಿ ತಾಲೂಕು ಕೇಂದ್ರಗಳಲ್ಲೂ ನಿಧಾನವಾಗಿ ಟಾಕೀಸುಗಳು ಬಾಗಿಲು ಹಾಕತೊಡಗಿವೆ. ಅದರ ಬೆನ್ನಿಗೇ ಹತ್ತಾರು ಗ್ರಾಮಗಳು ಸೇರಿದ ಒಂದು ಪಟ್ಟಣದಲ್ಲಿ ಮಲ್ಪಿಫ್ಲೆಕ್ಸ್‌ ಗಳು ಬರತೊಡಗಿವೆ. ಕೆಲವು ಕಡೆ ಹತ್ತು-ಇಪ್ಪತ್ತು ಕಿ.ಮೀ ಗಳ ವ್ಯಾಪ್ತಿಯ ಒಂದು ನಗರದಲ್ಲಿ (ಮಹಾ ನಗರವಲ್ಲ) ಹಿಂದೆ ನಾಲ್ಕೈದು ಟಾಕೀಸುಗಳು ಇದ್ದಂತೆ ಈಗ ಮಲ್ಟಿಫ್ಲೆಕ್ಸ್‌ ಗಳು ಬರತೊಡಗಿವೆ. ಈ ಮಧ್ಯೆಯೇ ಒಟಿಟಿ ಗಳು ಜನಪ್ರಿಯವಾಗ ತೊಡಗಿ ಮನೆಯಲ್ಲೇ, ಮೊಬೈಲ್‌ ನಲ್ಲೇ ಸಿನಿಮಾ ನೋಡಿ ಮುಗಿಸುವ ಪರಿಪಾಠ ಆರಂಭವಾಗಿದೆ. ಇಷ್ಟೆಲ್ಲದರ ನಡುವೆ ಸಿಂಗಲ್‌ ಸ್ಕೀನ್‌ ಉಳಿಸಿಕೊಳ್ಳುವುದು ಹೇಗೆ?

ಅಪೂರ್ವ ರ ಪೋಸ್ಟ್‌ ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಿಂಗಲ್‌ ಸ್ಕೀನ್‌ ನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಸಿಂಗಲ್‌ ಸ್ಕೀನ್‌ ಎನ್ನುವ ಪರಿಭಾಷೆಯೂ ಬಂದಿರುವುದು ಇತ್ತೀಚೆಗೆ. ಅದೂ ಮಲ್ಫಿಫ್ಲೆಕ್ಸ್‌ ಬಂದ ಮೇಲೆ. ಅದುವರೆಗೆ ಟಾಕೀಸೇ ಎಂದೇ ಜನಪ್ರಿಯವಾಗಿತ್ತು. ಈ ಟಾಕೀಸಿನಲ್ಲಿ ಹತ್ತಾರು ತಲೆಮಾರುಗಳ ಕನಸುಗಳಿದ್ದವು. ಮನರಂಜನೆಯ ಮಾಯಾಜಾಲವನ್ನು ಪರಿಚಯಿಸಿದ್ದೇ ಈ ಟಾಕೀಸುಗಳು.

ಡಾ. ರಾಜ್‌ ಕುಮಾರ್‌ ಅಣ್ನಾವ್ರ ಬಂಗಾರದ ಮನುಷ್ಯ ಇರಬಹುದು, ಜೀವನ ಚೈತ್ರ ಇರಬಹುದು, ವಿಷ್ಣುವರ್ಧನ್‌ ರ ನಾಗರಹಾವು ಇರಬಹುದು, ಬಂಧನ ಇರಬಹುದು, ಅಂಬರೀಷರ ಅಂತ ಇರಬಹುದು, ಶಂಕರನಾಗರ ಮಿಂಚಿನ ಓಟ ಇರಬಹುದು, ಸಾಂಗ್ಲಿಯಾನ ಇರಬಹುದು, ಅನಂತನಾಗ್‌ ಅವರ ಚಂದನದ ಗೊಂಬೆ ಇರಬಹುದು, ಬೆಳಂದಿಗಳ ಬಾಲೆ, ಗಣೇಶನ ಮದುವೆ ಇರಬಹುದು-ಕಲ್ಯಾಣಕುಮಾರ್‌, ರಾಜೇಶ್‌, ಬಾಲಕೃಷ್ಣ, ನರಸಿಂಹರಾಜು, ಅಶ್ವತ್ಥ್‌ ಹೀಗೆ, ಪಂಡರಿಬಾಯಿ, ಹರಿಣಿ, ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ ಹೀಗೆ ಎಲ್ಲರೂ ಪರಿಚಯವಾದದ್ದು ಈ ಟಾಕೀಸುಗಳಿಂದಲೇ.

ಮೋಡ ಮುಸುಕಿದ ಬಾನಿನಲ್ಲಿ ತಾರೆಗಳು ತೋರುತ್ತಿರಲಿಲ್ಲ; ಎಲ್ಲವೂ ಭೂಮಿ ಮೇಲೆ ಮಿಂಚುತ್ತಿದ್ದವು !

ರಾಮಕೃಷ್ಣ, ದೇವರಾಜ್‌, ಶಿವರಾಜ ಕುಮಾರ್‌, ಶಶಿಕುಮಾರ್‌, ಪುನೀತ್‌ ರಾಜಕುಮಾರ್‌, ಸುದೀಪ್‌, ಯಶ್‌, ದರ್ಶನ್‌ ಎಲ್ಲರೂ ಟಾಕೀಸಿನ ರುಚಿ ಕಂಡವರೇ. ಇತ್ತೀಚೆಗಷ್ಟೇ ಒಂದು ದಶಕದಿಂದ ಈ ಮಲ್ಟಿಫ್ಲೆಕ್ಸ್‌, ಒಟಿಟಿ ಎಂದೆಲ್ಲ ಹೊಸ ಬದಲಾವಣೆ ಹುಟ್ಟಿಕೊಂಡಿರುವುದು.

ಸುಮ್ಮನೆ ಹಳವಂಡ ಎಂದುಕೊಳ್ಳಬೇಡಿ. ಟಾಕೀಸಿನ ಖುಷಿಯೇ ಬೇರೆ. ಅದು ಮಲ್ಪಿಫ್ಲೆಕ್ಸ್‌ ನ ಸುಖವೇ ಬೇರೆ. ಎಂದಿಗೂ ಮಲ್ಟಿಫ್ಲೆಕ್ಸ್‌ ನದ್ದು ಖುಷಿ, ಸಂಭ್ರಮ ಎನ್ನಲಾಗದು. ಷೋಗಿಂತ ಒಂದು ಗಂಟೆ ಮೊದಲೇ (ಯಾವುದಾದರೂ ಜನಪ್ರಿಯ ನಟನ ಚಿತ್ರವಾದರೆ ಮೂರು-ನಾಲ್ಕು ಗಂಟೆ) ಟಾಕೀಸಿಗೆ ಹೋಗಿ ಸಾಲು ನಿಂತು, ಸಿಕ್ಕ ಪರಿಚಿತರಿಗೆ ಮುಗುಳ್ನಕ್ಕು, ಬಾಲ್ಕನಿ ಕೊನೇ (ಕೆಳಗಿಂದ ಮೇಲಕ್ಕೆ) ಸಾಲಿನ ಸೀಟು ಸಿಗಲಿ ಎಂದು ಹರಕೆ ಹೊತ್ತುಕೊಂಡು, ಟಿಕೆಟ್‌ ಕೌಂಟರಿನ ಒಳಗೆ ಕೈ ಹಾಕಿ ಟಿಕೇಟು ಪಡೆದು, ಚಿಲ್ಲರೆ ಇಲ್ಲದ್ದಕ್ಕೆ ಬೈಸಿಕೊಂಡು ಇಲ್ಲವೇ ಅವನು ಚಿಲ್ಲರೆಯ ಬದಲಿಗೆ ಕೊಟ್ಟದ್ದನ್ನು ಪಡೆದುಕೊಂಡು ರಾಜಗಾಂಭೀರ್ಯದಿಂದ ಬಾಲ್ಕನಿ ಬೋರ್ಡ್‌ ಓದಿಕೊಂಡು ಟಿಕೆಟ್‌ ಅರ್ಧ ಭಾಗವನ್ನು ಕಿಸಯಲ್ಲಿ ಇಟ್ಟುಕೊಂಡು ಒಳಗೆ ಕತ್ತಲೆಯ ಮನೆಯೊಳಗೆ (ಷೋ ಶುರುವಾಗಿದ್ದರೆ ಥಿಯೇಟರ್‌ ಬಾಯ್‌ ಬಳಿ ಟಾರ್ಚು ಬಿಡಲು ಹೇಳಿ) ಸೀಟು ಹಿಡಿದು ಕುಳಿತುಕೊಂಡರೆ ಹೊಸ ಲೋಕಕ್ಕೆ ಹೋದ ಅನುಭವ.

ಸಿನಿಮಾ ಶುರುವಾಗುವಾಗ ಪರದೆಯ ಎದುರು ತೂರಿ ಬರುವ ಕಾಯಿನ್‌ ಗಳು, ಹೀರೋವಿನ ಪ್ರವೇಶ (ಎಂಟ್ರಿ)ವಾಗುವಾಗ ಕೇಕೆಗಳು, ಘೋಷಣೆಗಳು..ಹೊಸದೇ ವಾತಾವರಣ. ಆ ಉತ್ಸಾಹದ ಮಳೆಯಲ್ಲಿ ಮೀಯದವರೇ ಇಲ್ಲ. ಮತ್ತೆ ಫೈಟ್‌ ಸೀನ್‌ ಆರಂಭವಾಗುವಾಗ, ಹೀರೋ ಹೊಡೆಯುವಾಗ ಹಾಕುತ್ತಿದ್ದ ಕೇಕೆ, ಮಧ್ಯಂತರ ಬಿಟ್ಟಾಗ ಪಪ್ಸ್‌, ಬನ್‌ ಇತ್ಯಾದಿ ತಿಂದು ಅರ್ಧ ಕಥೆಯನ್ನು ಗೆಳೆಯರೊಂದಿಗೆ ವಿಮರ್ಶಿಸುವುದು..ಎಲ್ಲದರ ಮಧ್ಯೆಯೂ ನಮಗೆ ಮುಖ್ಯವಾಗುತ್ತಿದ್ದುದು ಹೀರೋವಿನ ನಟನೆ ಮಾತ್ರ. ಕೊನೆಗೆ ಸಿನಿಮಾ ಮುಗಿದ ಮೇಲೂ ಚರ್ಚೆ ಮಾಡುತ್ತಾ ಮನೆಗೆ ಬರುತ್ತಿದ್ದುದು, ಪ್ರತಿ ಶುಕ್ರವಾರ, ಯುಗಾದಿ, ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಪತ್ರಿಕೆಗಳ ಸಿನಿಮಾಗಳ ಪುಟಗಳಲ್ಲಿನ ಪ್ರೊಡಕ್ಷನ್‌ ನಂಬರ್‌ ಗಳನ್ನು ಲೆಕ್ಕ ಹಾಕುತ್ತಿದ್ದುದು, ನಮ್ಮ ಹೀರೋಗಳ ಹೊಸ ಚಿತ್ರಗಳ ನಂಬರ್‌ ಗಳನ್ನು ಪಟ್ಟಿ ಮಾಡುವುದು..ಟಾಕೀಸು ಎಂಬುದು ಬರೀ ನಾಲ್ಕು ಗೋಡೆಗಳ ಒಳಗೆ ಮುಗಿದು ಹೋಗುತ್ತಿರಲಿಲ್ಲ. ಒಂದು ಅನುಭವವಾಗಿ ಕಾಡುತ್ತಿತ್ತು, ನಮ್ಮೊಡನೆ ಸಾಗಿ ಬರುತ್ತಿತ್ತು.

Train Drivers Dairy: ಸಾಮಾನ್ಯ ಕಥೆಯ ಅಸಾಮಾನ್ಯ ಚಿತ್ರಗಳು

ಈಗ ನಾವು ಗಜ ಗಾಂಭೀರ್ಯರಾಗಿದ್ದೇವೆ. ಮಲ್ಪಿಫ್ಲೆಕ್ಸ್‌ ಗೆ ಹೋಗುವುದೂ ಸಹ ಆಸ್ಪತ್ರೆಯಲ್ಲಿ ಯಾವುದೋ ಎಮರ್ಜೆನ್ಸಿ ಕೇಸು ನೋಡಲು ಹೋಗುವಂಥ ಸೀರಿಯಸ್‌ ನೆಸ್‌ ನಲ್ಲಿ. ಈಗಲಂತೂ ಟಿಕೆಟ್‌ ಆನ್‌ ಲೈನ್‌ ಬುಕ್ಕಿಂಗ್.‌ ಹೋಗಿ ಟಿಕೆಟ್‌ ಕೌಂಟರ್‌ ಎದುರು ನಿಂತು ಎರಡು ಕ್ಷಣದಲ್ಲಿ ಬುಕ್‌ ಮಾಡಿದ ಟಿಕೆಟ್‌ ತೆಗೆದುಕೊಂಡು ನೇರವಾಗಿ ಸೀಟಿನಲ್ಲಿ ಕುಳಿತರೆ ಮುಗಿಯಿತು. ಈ ಟಿಕೆಟ್‌ ಪಡೆಯುವವ, ಹರಿಯುವುದು ಯಾವುದೂ ಇಲ್ಲ ಬಿಡಿ. ಸಿನಿಮಾ ಮುಗಿಯುವಾಗಲೂ ಅದೇ ಗಾಂಭೀರ್ಯ ಉಳಿಸಿಕೊಂಡು ಸಿನಿಮಾದಲ್ಲಿ ಬರುವ ರಸಘಳಿಗೆಗೂ ಗಂಭೀರವಾಗಿಯೇ ಮುಖವಗಲಿಸಿ ಎಲ್ಲ ಮುಗಿದ ಮೇಲೆ ಪಾರ್ಕಿಂಗ್‌ ಲಾಟ್‌ ನಲ್ಲಿ ನಿಂತ ಕಾರು ಮಗುವಿನಂತೆ ಅಳುತ್ತಿರಬಹುದೆಂದುಕೊಂಡು ದೌಡಾಯಿಸುವುದು..ಕಾರನ್ನು ಹತ್ತಿ ರಸ್ತೆ ಹಿಡಿಯುವುದು…ಎಲ್ಲ ಕಡೆಯೂ ಗಾಂಭೀರ್ಯವೇ. ಅಲ್ಲಿಗೆ ನಮ್ಮ ಸಿನಿಮಾ ಅನುಭವ ಮುಗಿಯಿತು.

ಬಿಡಿ ನಮಗೆ ಮನೆಯಿಂದ ಹೊರಡುವಾಗಲೂ ಸಿನಿಮಾ ನೋಡಲು ಹೋಗುತ್ತಿದ್ದೇವೆ ಎಂದೆನಿಸುವುದೇ ಇಲ್ಲ. ಅಲ್ಲಿಗೆ ಹೋದ ಮೇಲೂ ಹಾಗೆ ತೋರುವುದೂ ಇಲ್ಲ. ದೊಡ್ಡ ಕಾಂಪ್ಲೆಕ್ಸ್‌ ನಡುವೆ ಪಿಜ್ಜಾ, ಬರ್ಗರ್‌ಗಳು, ಬಟ್ಟೆ, ಷೂಗಳ ಬ್ರ್ಯಾಂಡ್‌ ಗಳ ದೊಡ್ಡ ದೊಡ್ಡ ಅಕ್ಷರಗಳ ಮಧ್ಯೆ ಎಲ್ಲೋ ಸಣ್ಣದಾಗಿ ತೋರುವಂತೆ, ಇಲ್ಲವೇ ಲಿಫ್ಟ್‌ ಬಳಿ ಮಲ್ಪಿಫ್ಲೆಕ್ಸ್‌ ಹೆಸರು ಇರುವುದುಂಟು. ಇಡೀ ಕಾಂಪ್ಲೆಕ್ಸ್‌ ನಲ್ಲಿ ಕಾಲು ಮುದುಡಿಕೊಂಡು ಕುಳಿತ ವಯಸ್ಸಾದವರಂತೆ ಕಾಣುತ್ತದೆ ಈ ಮಲ್ಪಿಫ್ಲೆಕ್ಸ್‌ ಗಳು. ಅದರಲ್ಲಿ ಆರಾಮಾಗಿ ಕುಳಿತು ಸಿನಿಮಾ ನೋಡಿ ಬರಬೇಕು !

ಅಕಿರಾ ಕುರಸೋವಾ: ವಿಶ್ವ ಚಿತ್ರ ಜಗತ್ತಿನ ಪ್ರಖರ ಸೂರ್ಯ

ಇವುಗಳನ್ನೆಲ್ಲ ನೋಡುವಾಗ ನಮ್ಮ ಟಾಕೀಸುಗಳು ಇನ್ನಷ್ಟು ವರ್ಷಗಳು ಇರಬೇಕೆನ್ನಿಸುತ್ತದೆ. ಸಿಂಗಲ್‌ ಸ್ಕ್ರೀನ್‌ ನ ಮಜಾ ಮತ್ತೊಂದಿಷ್ಟು ತಲೆಮಾರುಗಳಿಗೆ ಸಿಗಬೇಕು. ಬೆಂಗಳೂರಿನಂಥ ಮಹಾ ನಗರದಲ್ಲಿ ಇರುವ ಸಿಂಗಲ್‌ ಸ್ಕೀನ್‌ ಗಾದರೂ ನಮ್ಮ ಮಕ್ಕಳನ್ನು ಕರೆದೊಯ್ದು ಉಳಿದ ಪಳೆಯುಳಿಕೆಯನ್ನಾದರೂ ತೋರಿಸಬೇಕು. ಒಂದುವೇಳೆ ಬೆಂಗಳೂರು ಕಷ್ಟವೆನಿಸಿದರೆ, ನಮ್ಮ ನಮ್ಮ ಊರುಗಳಲ್ಲಿನ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳಿಗೆ ಕರೆದೊಯ್ಯಿರಿ. ಅವರಿಗೂ ಒಂದಿಷ್ಟು ಅನುಭವ ಸಿಗಲಿ. ಖುಷಿಯಾಗಲಿ.

ಅಂದಹಾಗೆ ಹೈದರಾಬಾದ್‌ ನಲ್ಲೂ ಇದೇ ಪರಿಸ್ಥಿತಿ ಇದೆ. ಅದಕ್ಕೇ ಅಲ್ಲಿ ಕೆಲವು ದಿನಗಳ ಕಾಲ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳನ್ನು ಬಂದ್‌ ಮಾಡುವ ಮೂಲಕ ಅವುಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯಗಳನ್ನು ಒತ್ತಿ ಹೇಳುವ ಪ್ರಯತ್ನ ಮಾಡಲಾಗುತ್ತದಂತೆ. ಇದು ಒಳ್ಳೆಯ ನಡಿಗೆ. ನಾವೂ ಇಂಥದೊಂದು ಚಳವಳಿ ಆರಂಭಿಸಬೇಕು. ಸರಕಾರವೂ ಸಿಂಗಲ್‌ ಸ್ಕ್ರೀನ್‌ ಗೆ ಬೆಂಬಲ ನೀಡಬೇಕು. ಮಹಾ ನಗರಗಳಲ್ಲಿ ಮಲ್ಫಿ ಫ್ಲೆಕ್ಸ್‌ ಕುಣಿಯಲಿ, ನಮ್ಮ ಪಟ್ಟಣಗಳಲ್ಲಿ ಸಿಂಗಲ್‌ ಸ್ಕ್ರೀನ್‌ ಕಂಗೊಳಿಸಲಿ, ರಾರಾಜಿಸಲಿ.

ಮಲ್ಟಿಫ್ಲೆಕ್ಸ್‌ ಗಳು ಯಾವಾಗಲೂ ಅನುಕೂಲವೆನಿಸಬಹುದು (ಕಂಫರ್ಟ್)‌, ಸಿಂಗಲ್‌ ಸ್ಕೀನ್‌ ಸದಾ ಅನುಭವವಾಗಿಯೇ (ಎಕ್ಸ್ ಪೀರಿಯೆನ್ಸ್)‌ ಇರುತ್ತವೆ.

(Nataraj Pic courtesy : Apurva Disliva FB page)

LEAVE A REPLY

Please enter your comment!
Please enter your name here

spot_img

More like this

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ...

Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !

ಶುಕ್ರವಾರ ಹೋಗಿ ಶನಿವಾರ ಬಂದಿತು. ಈ ವಾರ ಬಿಡುಗಡೆಯಾದ ಚಿತ್ರಗಳು ಒಟ್ಟು ಆರು. ಅದರಲ್ಲಿ ಮೂರು ವಿಭಿನ್ನ ನೆಲೆಯ ಕಥೆಗಳಾಗಿ ಕೇಳಿಬಂದಿತ್ತು. ಮೊದಲನೆಯದು...