ಮೊನ್ನೆ ಮೊನ್ನೆವರೆಗೂ ಕಲರ್ಸ್ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಷೋ ನ ಬಾಸ್ ಆಗಿ ಬೇರೆಯವರು ಯಾರೋ ಬರುತ್ತಾರೆ ಎಂದೆಲ್ಲ ಸುದ್ದಿ ಹರಡಿತ್ತು. ಈ ಹೊಸಬರು ಕೋಟ್ ಹೊಲೆಸಿಕೊಂಡರು, ಹಾಕಿಕೊಂಡರು, ಇನ್ನೇನು ಕೂಲ್ ಕನ್ನಡಕ ಹಾಕಿಕೊಂಡು ಬರುತ್ತಾರೆ ಎನ್ನುವಷ್ಟರಲ್ಲಿ ಎಲ್ಲವೂ ಬದಲಾಗಿದೆ. ಇನ್ನೂ ಸ್ವಲ್ಪ ವಿನೋದದ ಧಾಟಿಯಲ್ಲಿ ಹೇಳುವುದಾದರೆ ಬ್ಯಾಕ್ ಟು ಸ್ಕಯರ್. ಊರೆಲ್ಲ ಸುತ್ತಾಡಿ ಮತ್ತೆ ಅದೇ ಮನೆಯ ಅಂಗಳಕ್ಕೆ ಬಂದು ನಿಂತಂತಾಗಿದೆ.
ಬಿಗ್ ಬಾಸ್ ಸೀಸನ್ 11 ರ ಆರಂಭ ಸೆ. 29 ರಂದು ಸಂಜೆ 6 ಗಂಟೆಗಂತೆ. ಅದೇನೂ ವಿಶೇಷವಲ್ಲ. ಆದರೆ ಈ ಬಾರಿಯೂ ಅಂದರೆ ಈ ಸೀಸನ್ ಗೂ ಬಿಗ್ ಬಾಸ್ ನಟ ಸುದೀಪರಂತೆ.
ಹಾಗಾಗಿ ಮತ್ತೆ ಈ ಶೋನ ಸೂತ್ರಧಾರರಾಗಿ ಸುದೀಪ ಕಂಗೊಳಿಸಲಿದ್ದಾರೆ. ಹತ್ತರ ಸರಣಿ ಹನ್ನೊಂದಕ್ಕೆ ಸುದೀಪರೇ ಕೊಂಡೊಯ್ಯುತ್ತಿದ್ದಾರೆ. ಈ ವರ್ಷ ಇಡೀ ತಂಡದ ಮೇಲೆ (ಸುದೀಪರನ್ನೂ ಸೇರಿ) ಹೆಚ್ಚಿನ ಹೊಣೆಗಾರಿಕೆ. ಯಾಕೆಂದರೆ ಹಿಂದಿನ ಬಾರಿ ಯಶಸ್ಸು ಸಿಕ್ಕಿತಲ್ಲ, ಅದಕ್ಕೆ. ಕಳೆದ ಸೀಸನ್ ಗಿಂತ ವಿಶಿಷ್ಟವಾದ ಟಾಸ್ಕ್ ಗಳು, ಸ್ಪರ್ಧಿಗಳು ಎಲ್ಲವನ್ನೂ ಒಪ್ಪ ಓರಣವಾಗಿ ಜೋಡಿಸಬೇಕಲ್ಲ. ಆ ಜವಾಬ್ದಾರಿ.
ಶನಿವಾರವೇ ಯಾರ್ಯಾರು ಈ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬುದು ತಿಳಿಯುವುದಂತೆ. ಈ ಬಾರಿಯ ಪರಿಕಲ್ಪನೆ ಸ್ವರ್ಗ ಮತ್ತು ನರಕವಂತೆ. ಹೆಲ್ ಹೆವನ್ ಗೆ ಸುದೀಪರೇ ಯಮೇಂದ್ರ. ನರಕಕ್ಕೆ ಯಮರಾಜ, ಸ್ವರ್ಗಕ್ಕೆ ಇಂದ್ರ ರಾಜ. ಹಾಗಾಗಿ ಯಮೇಂದ್ರ.
ಆಸ್ಕರ್: ನಾಮನಿರ್ದೇಶನದ ಪಟ್ಟಿಯಲ್ಲಿ ಒಂದೂ ಕನ್ನಡ ಚಿತ್ರವಿಲ್ಲ
ಶನಿವಾರ ರಾಜಾರಾಣಿ ರಿಯಾಲಿಟಿ ಷೋನ ಫೈನಲ್ ನಲ್ಲಿ ಹೊಸ ಬಿಗ್ ಬಾಸ್ ಅವತಾರದ ಕೆಲವು ದೃಶ್ಯಗಳನ್ನು ತೋರಿಸಲಾಗುತ್ತದಂತೆ. ಆಗ ವೀಕ್ಷಕರೇ ಈ ಬಾರಿ ಯಾರು ಯಾರು ಬಿಗ್ ಬಾಸ್ ಮನೆಗೆ ಹೋಗಬೇಕು ಎಂಬುದನ್ನು ವೋಟಿಂಗ್ ಮೂಲಕ ಆಯ್ಕೆ ಮಾಡಬಹುದಂತೆ.
ಈ ಬಾರಿ ಬೇರೆಯವರನ್ನು ಬಿಗ್ ಬಾಸ್ ಮಾಡಿ ಎಂದಿದ್ದರಂತೆ ಸುದೀಪರು ಈ ಹಿಂದೆಯೇ. ಹಾಗಾಗಿ ಈ ಬಾರಿ ಬೇರೆ ಬಾಸ್ ಬರುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಹತ್ತು ವರ್ಷಗಳಿಂದ ನಾನೇ ಬಾಸ್ ಆಗಿದ್ದೇನೆ, ಬೇರೆ ಯಾರಾದರೂ ಆಗಲಿ ಎಂದಿದ್ದರಂತೆ ಸುದೀಪ್.
ವೆನಿಸ್ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರಿಗೆ ಪುರಸ್ಕಾರ
ಈಗ ಅದೆಲ್ಲ ಮುಗಿದು ಸುದೀಪರು ಹನ್ನೊಂದನೇ ಅವತಾರಕ್ಕೆ ಹೊಸ ಕೋಟ್ ಹೊಲೆಸಿದ್ದಾರೆ.
ಇನ್ನು ಬಿಗ್ ಬಾಸ್ ನ ಹೊಸ ಟಾಸ್ಕ್ ಗಳೇನು, ಸ್ಪರ್ಧಿಗಳು ಯಾರು ಯಾರು ಎಂಬ ಕುತೂಹಲ ಇದ್ದೇ ಇದೆ. ಶನಿವಾರ ತೆಂಗಿನಕಾಯಿ ಒಡೆದೆ ಮೇಲೆ ಒಳಗೆ ಕೊಬ್ಬರಿಯೋ, ಬರೀ ಎಳಸೋ ಗೊತ್ತಾಗಲಿದೆ.