Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಈಗ ಎಕ್ಸ್‌ ಪ್ರೆಸ್‌ ಹೈವೇಗಳ ಕಾಲ. ಎಲ್ಲಿ ನೋಡಿದರೂ ಅವುಗಳೇ. ಇತ್ತೀಚಿನ ಕೇಂದ್ರ ಸರಕಾರದ ಯೋಜನೆಯಿಂದ ಎಲ್ಲ ನಗರಗಳಲ್ಲೂ ಎಕ್ಸ್‌ ಪ್ರೆಸ್‌ ವೇಗಳು ರಾರಾಜಿಸುತ್ತಿವೆ. ಬಹಳ ಆಸಕ್ತಿಕರವಾಗಿರುವ ಮತ್ತೊಂದು ಸಂಗತಿಯೆಂದರೆ, ಇತ್ತೀಚಿನ ಎಕ್ಸ್‌ ಪ್ರೆಸ್‌ ವೇ ಗಳಲ್ಲಿ ಒಂದು ಒಳ್ಳೆಯ ಸಂಗತಿಯಿದೆ. ಅದೆಂದರೆ ವೇ ಅಕ್ಕಪಕ್ಕದ ಹಳೆಯ ಹೈವೇಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಎರಡೂ ಕಡೆ ಹೋದ ಅನುಭವಗಳನ್ನು ಅನುಭವಿಸಿದ್ದೇವೆ, ಕಂಡಿದ್ದೇವೆ, ಕೇಳಿದ್ದೇವೆ. ಒಂದು ಎಲಿವೇಟೆಡ್‌ ಎನ್ನೋ ರೀತಿಯಲ್ಲಿ. ನಾವು ಮತ್ತು ನಮ್ಮ ವಾಹನ, ಕೆಳಗೆ ಸಪಾಟಾಗಿರುವ ರಸ್ತೆ. ಮತ್ತೊಂದರಲ್ಲೂ ನಾವು ಮತ್ತು ನಮ್ಮ ವಾಹನ, ಸಪಾಟಾಗಿರುವ (ಅಲ್ಲಲ್ಲಿ ಸ್ವಲ್ಪ ಸಣ್ಣ ಗುಂಡಿಯಿರುವ) ರಸ್ತೆ ಹಾಗೂ ಒಂದಿಷ್ಟು, ಮನೆ, ಹಳ್ಳಿ, ಜನ, ಟ್ರಾಫಿಕ್ ಇತ್ಯಾದಿ.

ಎರಡೂ ಬಗೆಯನ್ನು ಬಯಸುವವರಿದ್ದಾರೆ. ಎರಡರಲ್ಲೂ ಅವರದ್ದೇ ಭಾವಕ್ಕೆ ತೆರನಾದ ಸುಖವಿದೆ. ಸಮಾಧಾನ ಮೊದಲ ಮಾದರಿಯಲ್ಲಿ ಖಂಡಿತಾ ಇಲ್ಲ (ಎಕ್ಸ್‌ ಪ್ರೆಸ್‌ ವೇ ನಲ್ಲಿ ಆಗುತ್ತಿರುವ ಅಪಘಾತಗಳ ಸಂಖ್ಯೆ ಗೊತ್ತೇ ಇದೆ), ಇನ್ನೊಂದರಲ್ಲಿ ಕೊಂಚ ಸಮಾಧಾನವಿದೆ (ಅಲ್ಲಿಯೂ ಅಪಘಾತಗಳಾಗುತ್ತವೆ, ಆದರೆ ಎಕ್ಸ್‌ ಪ್ರೆಸ್‌ ವೇನಲ್ಲಷ್ಟು ಇಲ್ಲ).

Movie Monsoon :ಜೂನ್‌ ನಲ್ಲಿ ಮುಂಗಾರು; ಕನ್ನಡ ಸಿನಿಮಾಗಳದ್ದೂ ಮುಂಗಾರೇ !

ಹಲವು ಬಾರಿ ಈ ಕನ್ನಡದ ನಟ ರಕ್ಷಿತ್‌ ಶೆಟ್ಟಿಯವರನ್ನು ಕಂಡಾಗ ಎರಡನೇ ಊರ ಬದಿಯ ರಸ್ತೆಯಂತೆ ನೆನಪಾಗುತ್ತಾರೆ. ರಕ್ಷಿತ್‌ ಶೆಟ್ಟಿಯವರ ಜನ್ಮದಿನ ನಿನ್ನೆ ಆಚರಿಸಲಾಯಿತು. ಸೋಷಿಯಲ್‌ ಮಾಧ್ಯಮಗಳಲ್ಲಿ ಶುಭಾಶಯಗಳು ಹರಿದು ಬಂದವು, ವಿವಿಧ ಭಾವಚಿತ್ರಗಳೂ ಕಂಡು ಬಂದವು. ಆಗ ಈ ಹೈವೇ, ಎಕ್ಸ್‌ ಪ್ರೆಸ್‌ ವೇ ಎಲ್ಲವೂ ನೆನಪಾಯಿತು. ಇದರ ಬೆನ್ನಿಗೇ ರಕ್ಷಿತ್‌ ಶೆಟ್ಟಿ ಸಹ ನೆನಪಾದರು. ಅವರನ್ನು ಅಭಿನಂದಿಸುವ, ಶುಭ ಹಾರೈಸುವ ಮೊದಲು ಒಮ್ಮೆ ಭೂತಕ್ಕೆ ಹೋಗಿ ಬರೋಣ.

ವಾಸ್ತವವಾಗಿ ಈ ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ, ರಾಜು ಶೆಟ್ಟಿಯವರೆಲ್ಲ ಕಳೆದ ದಶಕದ ಹುಡುಗರು. ಎಲ್ಲರೂ ಎಕ್ಸ್‌ ಪ್ರೆಸ್‌ ವೇ ನಲ್ಲಿ ಟೋಲ್‌ ಕೊಟ್ಟು ಆಕ್ಸಲೇಟರ್‌ ಮೇಲೆ ಕಾಲನ್ನು ಭರ್ರನೆ ಒತ್ತಿ ವೇಗಕ್ಕೆ ಮೊರೆ ಹೋಗುವಾಗ ಇವರೆಲ್ಲರೂ ಅದೇ ಹಾದಿಯನ್ನು ಹಿಡಿದು ಊರ ಹಾದಿಯನ್ನು ಹಿಡಿದು ಸಾಗಿದವರು. ಹಸಿರು, ಕೆಂಪು, ಹಳದಿ ಎಂದೆಲ್ಲ ಬಣ್ಣವನ್ನು ಕಣ್ಣಿಗೆ ತುಂಬಿಕೊಂಡು ಬಂದವರು. ಆ ಬಣ್ಣದ ಹುರುಪು, ಉತ್ಸಾಹ ಹಾಗೂ ಅವುಗಳ ಬಗೆಗಿನ ಬೆರಗೇ ಇಂದಿಗೂ ಚಿತ್ರರಂಗದ ರಂಗಿನ ಲೋಕದಲ್ಲಿ ಏಕಬಣ್ಣಕ್ಕೆ ಮೊರೆ ಹೋಗದಂತೆ ಮಾಡಿದೆ ಎನಿಸುವುದುಂಟು.

ರಕ್ಷಿತ್‌ ಶೆಟ್ಟಿ ಬೆಳ್ಳಿ ಪರದೆಗೆ ಬಂದಾಗ 2010. ನಮ್‌ ಏರಿಯಾಲ್‌ ಒಂದು ದಿನ ಒಂದು ಸಿನಿಮಾ. ಅರವಿಂದ್‌ ಕೌಶಿಕ್‌ ನಿರ್ದೇಶನದ ಸಿನಿಮಾ. ಅದರಲ್ಲಿ ಅರವಿಂದ್‌ ಆಗಿ ಬಣ್ಣ ಹಚ್ಚಿಕೊಂಡು ಪಾತ್ರದೊಳಕ್ಕೆ ಹೊಕ್ಕವನು. ನಾಯಕನಲ್ಲ, ಮರಿ ನಾಯಕ ಎಂದುಕೊಳ್ಳೋಣ (ನಾಯಕ ಒಬ್ಬಳನ್ನು ಪ್ರೀತಿಸುತ್ತಿರುತ್ತಾನೆ. ಅವಳು ಈ ಮರಿ ನಾಯಕನನ್ನು (ಅರವಿಂದ್‌) ಪ್ರೀತಿಸುತ್ತಿರುತ್ತಾಳೆ). ಸರ್ವೇ ಸಾಮಾನ್ಯವಾಗಿ ನಾಯಕನಿಗೆ ಹೆಚ್ಚು ಫ್ರೇಮುಗಳು. ಆದರೂ ಸಿಕ್ಕಲ್ಲಿ ಪಂಚರಂಗಿ ಸಿನಿಮಾದಲ್ಲಿ ಜಯಂತ್‌ ಕಾಯ್ಕಿಣಿ ಅವರ ಒಂದು ಸಂಭಾಷಣೆ ಇದೆಯಲ್ಲವೇ? ಹಾಗೆಯೇ ರಕ್ಷಿತ್‌ ಶೆಟ್ಟಿ ತನ್ನಲ್ಲಿ ಇದ್ದ ಕಿಡಿಯನ್ನು ಪ್ರದರ್ಶಿಸಿದವರು.

Shivamma: ರಿಷಭ್‌ ನಿರ್ಮಾಣದ ಶಿವಮ್ಮ ಜೂನ್‌ 14 ರಂದು ಬಿಡುಗಡೆ : ಒಳ್ಳೆಯ ಚಿತ್ರಗಳ ಸಂತತಿ ಸಾವಿರವಾಗಲಿ

ಉಡುಪಿಯಿಂದ ಬಂದ ಹುಡುಗನ ಹೆಸರು ಮೆಲ್ಲಗೆ ಚಂದನವನದಲ್ಲಿ ಚರ್ಚೆಯ ಟೇಬಲುಗಳಿಗೆ ಬಂದಿದ್ದು ನಿಜ. ಆದರೆ ಕಿಡಿ ಬೆಂಕಿ ಎನಿಸಿದ್ದು ಯಾವಾಗ ಎಂದರೆ ಉಳಿದವರು ಕಂಡಂತೆ ಸಿನಿಮಾ ಬಿಡುಗಡೆಯಾದಾಗ. ಇದಕ್ಕೆ ಮುನ್ನ ಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿ ಬಂದಿತ್ತು. ಅದೂ ಸಹ ಪರವಾಗಿಲ್ಲ ಕಣ್ರೀ ಹುಡುಗ ಎಂದಿತ್ತು. ಸುನಿ ನಿರ್ದೇಶಿಸಿದ ಸಿನಿಮಾ. ರಕ್ಷಿತ್‌ ಶೆಟ್ಟಿ ಹಾಗೂ ಶ್ವೇತಾ ಶ್ರೀ ವಾಸ್ತವ್‌ ಪ್ರಧಾನ ಪಾತ್ರದಲ್ಲಿದ್ದರು.

ಉಳಿದವರು ಕಂಡಂತೆ ವಿಭಿನ್ನವಾದ ನಿರೂಪಣೆ ಇರುವ ಸಿನಿಮಾ. ಅದು ರಕ್ಷಿತ್‌ ರನ್ನು ನೇರವಾಗಿ ಕಾಲು ಹಾದಿಯಿಂದ ಊರ ಹಾದಿಯ ಹೈವೇಗೆ ಸಂಪರ್ಕ ಕಲ್ಪಿಸಿತು. ರಕ್ಷಿತ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ಸಿನಿಮಾ. ತಾವೇ ಕಥೆ ಬರೆದು, ಚಿತ್ರಕಥೆ ಪೋಣಿಸಿ, ಸಂಭಾಷಣೆ ಹೆಣೆದು, ತಾವೇ ನಟಿಸಿ, ಹಾಡು ಹಾಡಿ, ಕುಣಿದು- ಒಂದೇ ಸಾಲಿನಲ್ಲಿ ಎಲ್ಲವೂ ಅವರೇ ಮಾಡಿರುವ ಸಿನಿಮಾಗಳು ನಮ್ಮ ಚಿತ್ರರಂಗದಲ್ಲಿ ಬೇಕಾದಷ್ಟಿವೆ. ಆದರೆ ಉಳಿದದ್ದು ಕಂಡಂತೆ ಸಿನಿಮಾ ಹಾಗೆ ಆಗಲಿಲ್ಲ ಎನ್ನುವುದೇ ಇಲ್ಲಿ ಪ್ರಸ್ತಾಪಿಸಲು ಕಾರಣ.

Indian cinema : ಹೊಂದಿಕೆಯೋ? ಹೊಂದಾಣಿಕೆಯೋ? ಆಂಖೋನ್‌ ದೇಖಿ ನೋಡಿ

ಒಂದು ಸಣ್ಣ ಕಥೆಯ ಎಳೆಯನ್ನು ಇಟ್ಟುಕೊಂಡು ಐದು ಭಿನ್ನ ನೆಲೆ, ವ್ಯಕ್ತಿಗಳ ದೃಷ್ಟಿಯಲ್ಲಿ ಹೇಳುವ ಮಾದರಿ (ಜಪಾನಿನ ನಿರ್ದೇಶಕ ಅಕಿರಾ ಕುರಸೋವಾ ನ ರೊಷೊಮನ್‌ ಇದೇ ಧಾಟಿಯಲ್ಲಿದೆ)ಯನ್ನು ಪ್ರಸ್ತುತಪಡಿಸಿದಾಗ ಒಮ್ಮೆಲೆ ಎಲ್ಲರೂ ಅಚ್ಚರಿ ಪಟ್ಟರು. ತನ್ನೂರಿನ ಕಥೆಯನ್ನೇ ಹೇಳಿದ ರೀತಿ, ಹುಲಿ ವೇಷ ಹಾಕಿ ಕುಣಿದ ರೀತಿ ಕಂಡು ಹರ್ಷ ಪಟ್ಟರು. ಇಂದಿಗೂ ರಕ್ಷಿತ್‌ ಶೆಟ್ಟಿ ಎಂದರೆ ಕರಾವಳಿಯ ಹುಲಿ ಕುಣಿತವನ್ನೇ ನೆನಪಿಸಿಕೊಳ್ಳುವುದುಂಟು. ಹೀಗೆ ಕಿಡಿ ಬೆಂಕಿಯಾಯಿತು.

2010 ರಿಂದ ಇಂದಿನವರೆಗೆ ರಕ್ಷಿತ್‌ ಶೆಟ್ಟಿ ಮಾಡಿರುವ ಸಿನಿಮಾ 15-16 ಸಿನಿಮಾಗಳು. ಆದರೆ ವಿಭಿನ್ನ ಕಥಾವಸ್ತುವಿನ ವಿಭಿನ್ನ ಪಾತ್ರಗಳಿಗೆ ಜೀವವಾದರು. ವಾಸ್ತು ಪ್ರಕಾರದ ಕುಬೇರ, ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಶಿವ, ಕಿರಿಕ್‌ ಪಾರ್ಟಿಯ ಕರ್ಣ, ಅವನೇ ಶ್ರೀ ಮನ್ನಾರಾಯಣದ ಇನ್ಸ್‌ ಪೆಕ್ಟರ್‌ ನಾರಾಯಣ, 777 ಚಾರ್ಲಿಯ  ಧರ್ಮ, ಸಪ್ತಸಾಗರದಾಚೆ ಎಲ್ಲೋ ವಿನ ಮನು ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.

ಈಗ ಈ ಮಾತು ಆರಂಭಿಸಿದ ನೆಲೆಗೆ ಬರೋಣ. ಎಕ್ಸ್‌ ಪ್ರೆಸ್‌ ವೇ ಮತ್ತು ಊರ ಹಾದಿಯ ಹೈವೇಗಳ ಕಥೆ. ಈ ರಕ್ಷಿತ್‌ ಶೆಟ್ಟಿ ಕಾಲು ಹಾದಿ ಹಿಡಿದು ನಡೆಯಲು ಶುರುವಾದಾಗ ಈ ಎಕ್ಸ್‌ ಪ್ರೆಸ್‌ ಹೈವೇಯಲ್ಲಿ ಲಾಂಗು,ಮಚ್ಚುಗಳು ಝಳಪಿಸುತ್ತಿದ್ದ ಸದ್ದು ಕೇಳುತ್ತಿದ್ದವು. ಅವಘಡ, ಅಪಘಾತ, ಕೊಲೆ ಎಲ್ಲವೂ ನಡೆಯುತ್ತಿದ್ದವು. ಒಂದಿಷ್ಟು ಜನ ಕೇಕೆ ಹಾಕುತ್ತಿದ್ದುದು, ಅಳುತ್ತಿದ್ದುದು ಎಲ್ಲವೂ ಕೇಳಿಸುತ್ತಿತ್ತು. ಜೊತೆ ಜೊತೆಗೇ ಈ ದಾರಿ ಹೋಕರೂ ಸಹ ಮೆಲ್ಲಗೆ ಎಕ್ಸ್‌ ಪ್ರೆಸ್‌ ವೇ ಬಿಟ್ಟು ಊರ ಹಾದಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದುದೂ ಕಾಣುತ್ತಿತ್ತು. ಅಬ್ಬರ ಜೋರೇ ಆಯಿತು. ಸದ್ದೂ ಸಹ ಜೋರಾಯಿತು. ಅವುಗಳ ಮಧ್ಯೆ ನಾವು ಕಳೆದು ಹೋದದ್ದು ಕಾಣಲೇ ಇಲ್ಲ. ಹೀಗೆ ಹಲವರು ಈ ರಸ್ತೆಯಲ್ಲಿ, ವೇಗದ ಭರದಲ್ಲಿ ಸಿಲುಕಿಕೊಂಡಿದ್ದಾರೆ. ವಾಪಸು ಬರಲಿಕ್ಕೆ ನಾಲ್ಕು ಕಿ.ಮೀ ಹೋಗಬೇಕಲ್ಲ ಎಂದು ಮುನ್ನುಗ್ಗುತ್ತಿದ್ದಾರೆ. ವಿಪರ್ಯಾಸವೆಂದರೆ ತಿರುಗಲು ತಿರುವ ಸಿಗುವ ಸಂದರ್ಭದಲ್ಲಿ ಇವರ ಕಾಲು ಅಕ್ಸಲೇಟರ್‌ ಮೇಲಿರುತ್ತದೆ. ಅಂದರೆ ಗೊತ್ತಲ್ಲ. ಅವರು ಮುಂದಕ್ಕೆ ಜಿಗಿಯುತ್ತಾರೆ, ಅದೇ ಆಗುತ್ತಿರುವುದು.

ನಿಮಗೆ ಎಕ್ಸ್‌ ಪ್ರೆಸ್‌ ವೇ ಹೇಗೆಂದರೆ ಒಳಬರುವ ಆಯ್ಕೆಗಳು ಸಾಕಷ್ಟಿರುತ್ತವೆ, ಹೊರಗೆ ಹೋಗಲು ಕಡಿಮೆ. ಎಲ್ಲೋ ಬಂದೂ ಸೇರಿಕೊಳ್ಳಬಹುದು. ಆದರೆ ವಾಪಸು ಹೋಗುವ ಎಂದರೆ ಮತ್ತೆಷ್ಟೋ ದೂರ ಕ್ರಮಿಸಿ ಯೂ ಟರ್ನ್‌ ಪಡೆದುಕೊಂಡು ವಾಪಸು ಬರಬೇಕು. ಊರ ಹಾದಿಯ ಹೈವೇಯಲ್ಲಿ ಅದಕ್ಕೆ ಕೊಂಚ ಸ್ವಾತಂತ್ರ್ಯ ಹೆಚ್ಚು. ಇಷ್ಟೆಲ್ಲ ಇದ್ದರೂ ಊರ ಹಾದಿಯನ್ನು ಹಿಡಿದೇ ಗುರಿ ತಲುಪುವ ದಾರಿ ಹೋಕರಂತೆಯೇ ರಕ್ಷಿತ್‌ ಸಾಗಿದರು. ಎಲ್ಲಿಯೂ ಎಕ್ಸ್‌ ಪ್ರೆಸ್‌ ವೇಗೆ ಹೋಗುವ ಮನಸ್ಸು ಮಾಡಲಿಲ್ಲ. ಇದುವರೆಗೂ. ಮುಂದೆಯೂ ಊರ ಹಾದಿಯಲ್ಲೇ ಸಾಗುವ ವಿಶ್ವಾಸವಿದೆ.

ದಿ ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌: ಸಂತಸದ ಶೋಧನೆಯ ಹಾದಿ

ಕಿರಿಕ್‌ ಪಾರ್ಟಿಯಲ್ಲಿ ಕಾಗದದ ದೋಣಿಯಲಿ ಎಂದುಕೊಂಡು ಬೈಕಿನಲ್ಲಿ ಬಿಮ್ಮನೆ ಹೊರಟು ನಿಂತಾಗ ದೂರ ಹೋಗಿಬಿಟ್ಟನೋ ಎನಿಸುತ್ತಿತ್ತು. ಸಿನಿಮಾದಲ್ಲಿ ವಾಪಸು ಬಂದ ಹಾಗೆ ಬಂದು ಚಾರ್ಲಿ ಹೊತ್ತುಕೊಂಡು ಬಂದಾಗ ಅರೆರೆ ನಾಯಿ ಹೊತ್ತುಕೊಂಡು ಬಂದನಲ್ಲಾಎಂದೆನಿಸಿತ್ತು. ಸಪ್ತ ಸಾಗರದಾಚೆ ಎಲ್ಲೋ ಮತ್ತೊಂದು ನೆಲೆಯದ್ದು.

ಈ ಲಾಂಗು, ಮಚ್ಚು, ರಕ್ತ, ಹಡಾಹುಡಿ, ದಂಗೆ- ಎಲ್ಲದರಿಂದಲೂ ಎಕ್ಸ್‌ಪ್ರೆಸ್‌ ವೇ ತುಂಬಿ ಹೋಗಿದೆ. ಸಿನಿಮಾ ಪರದೆಯಂತೂ ಈ ಲಾಂಗು, ರಕ್ತಗಳಿಂದ ತೊಯ್ದುಹೋಗಿದೆ, ಹರಿದು ಹೋಗಿದೆ. ಈ ತೊಯ್ದ ಪರದೆ ಒಣಗುವಷ್ಟರಲ್ಲಿ ಮತ್ತೊಂದು ಲಾಂಗು, ಮತ್ತೊಂದಿಷ್ಟು ಬಕೀಟು ರಕ್ತ ಚೆಲ್ಲಿ ಬಿಡುತ್ತದೆ. ಅಲ್ಲಿಗೆ ಮತ್ತೆ ತೊಯ್ಯುವುದು. ರಕ್ತದಲ್ಲಿ ತೊಯ್ಯುವುದೆಂದರೆ ಮಳೆಯಲ್ಲಿ ತೊಯ್ದದಂತೆ ಅಲ್ಲವಲ್ಲ!

ಇನ್ನು ಕಿಡಿ, ಬೆಂಕಿಯಾಗಿ ಬೆಳಕಾಗುವ ಕಾಲ. ಅದಾಗುತ್ತಿದೆ. ಪರಂವಃ ಸ್ಟುಡಿಯೋಸ್‌ ಮೂಲಕ ಸಿನಿಮಾಗಳನ್ನು ನಿರ್ಮಿಸುವ, ವಿತರಿಸುವ ಕೆಲಸವನ್ನೂ ನಿರ್ವಹಿಸತೊಡಗಿದರು. ಒಂದಿಷ್ಟು ಹೊಸಬರ ಬೆನ್ನಿಗೆ ನಿಲ್ಲುವ ಕೆಲಸವೂ ನಡೆಯುತ್ತಿದೆ. ಚಿತ್ರರಂಗದಲ್ಲಿ ಹೊಸ ಬೆಳೆ ಬರಲು ಇದೂ ಸಹ ಮುಖ್ಯ. ರಕ್ಷಿತ್‌ ಹೀಗೆ ಊರ ಹಾದಿಯನು ಹಿಡಿವ ಹುಡುಗನಾಗಿಯೇ ಸಾಗಲಿ. ಗುರಿ ಎಲ್ಲೂ ಹೋಗುವುದಿಲ್ಲ, ಒಟ್ಟಿಗೇ ಮುಟ್ಟುತ್ತೇವೆ. ಎರಡು ನಿಮಿಷ ತಡವಾಗಬಹುದು ಎಂದುಕೊಳ್ಳೋಣ. ಪರವಾಗಿಲ್ಲ, ಅದು ಮಳೆ ಸುರಿಯಲು ಶುರುವಾದಾಗ ಕೆಲವು ಕ್ಷಣ ಮಳೆ ನಿಲ್ಲಲೆಂದು ಮರದ ಬುಡಕ್ಕೋ, ಅಂಗಡಿಯ ಮಾಡಿನ ಕೆಳಗೋ ಓಡಿ ಹೋಗುವುದಿಲ್ಲವೇ? ಹಾಗೆ. ಎಕ್ಸ್‌ ಪ್ರೆಸ್‌ ವೇಗೆ ಹೋದರೆ ತಿರುಗಿ ಬರಲಾಗುವುದಿಲ್ಲ, ನೆನಪಿರಲಿ.

ವರ್ತಮಾನದಲ್ಲಿ ಸಪ್ತಸಾಗರದಾಚೆ ಎಲ್ಲೋ ಎರಡನೇ ಭಾಗದ ಆಲೋಚನೆಯಲ್ಲಿದ್ದಾರೆ. ರಿಚರ್ಡ್‌ ಅಂತೋನಿ ತಲೆಯಲ್ಲಿ ಗುನುಗುತ್ತಿದ್ದಾನೆ. ಪ್ರಿಯ ರಕ್ಷಿತ್ ಶೆಟ್ಟಿಯವರಿಗೆ ಶುಭವಾಗಲಿ,‌ ಒಳ್ಳೆಯದಾಗಲಿ. ಮತ್ತಷ್ಟು ನಿಮಗೊಪ್ಪುವ ಪಾತ್ರಗಳು, ನಿಮ್ಮದೇ ಕಥೆಗಳೊಂದಿಗೆ ಬನ್ನಿ.

ನಾವು ಕಾಯುತ್ತೇವೆ , ದೋಣಿಯಲಿ ಹೋದವರು ವಾಪಸು ಬರುವವರೆಗೂ. ಕಾಗದದ ದೋಣಿ ಪುಟ್ಟ ಪುಟ್ಟ ಕನಸುಗಳನ್ನು ಕೊಂಡೊಯ್ಯುವ ಹಾಯಿದೋಣಿಯೂ ಸಹ. ರಾಬರ್‌ ಫ್ರಾಸ್ಟ್‌ ನ ಪದ್ಯ ನೆನಪಾಯಿತು. ದಿ ರೋಡ್‌ ನಾಟ್‌ ಟೇಕನ್..ಸವೆಯದ ಹಾದಿಯಲಿ ಕನಸುಗಳಿರುತ್ತವೆ !

LEAVE A REPLY

Please enter your comment!
Please enter your name here

spot_img

More like this

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ...

Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !

ಶುಕ್ರವಾರ ಹೋಗಿ ಶನಿವಾರ ಬಂದಿತು. ಈ ವಾರ ಬಿಡುಗಡೆಯಾದ ಚಿತ್ರಗಳು ಒಟ್ಟು ಆರು. ಅದರಲ್ಲಿ ಮೂರು ವಿಭಿನ್ನ ನೆಲೆಯ ಕಥೆಗಳಾಗಿ ಕೇಳಿಬಂದಿತ್ತು. ಮೊದಲನೆಯದು...