‘ಮಾನವೀಯ ಸಂಬಂಧಗಳನ್ನು ಬಿಡಿಬಿಡಿಯಾಗಿ ಹೇಳುತ್ತಾ ಪ್ರೇಕ್ಷಕರನ್ನು ಒಳಗೊಳ್ಳುವ ಈ ಚಿತ್ರದ ಪ್ರತಿ ಪಾತ್ರಗಳೂ ನಮ್ಮೊಳಗೆ ಬೆಳೆದುಕೊಳ್ಳುತ್ತವೆ. ಅದರಲ್ಲೂ ಮಧ್ಯ ವಯಸ್ಸನ್ನು ಮೀರಿದ ಹಾಗೆಂದು ಇನ್ನೂ ನಿವೃತ್ತಿಗೆ ದೂರ ಇರುವ ರೈಲ್ವೆ ಚಾಲಕ ಸದಾ ಕಾಡುತ್ತಾನೆ’.
ಟ್ರೈನ್ ಡ್ರೈವರ್ಸ್ ಡೈರಿ. ಇದೊಂದು ವಿಶಿಷ್ಟವಾದ ಚಿತ್ರ. ಸೆರ್ಬಿಯಾ ಭಾಷೆಯಲ್ಲಿ ರೂಪಿತಗೊಂಡ ಚಲನಚಿತ್ರ ಬಿಡುಗಡೆಗೊಂಡಿದ್ದು 2016 ರಲ್ಲಿ. ಹಲವಾರು ಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದಲ್ಲದೇ ಪ್ರಶಸ್ತಿಯನ್ನೂ ಗಳಿಸಿದೆ. ಬಹಳ ಮುಖ್ಯವಾಗಿ ಸೆರ್ಬಿಯಾದಿಂದ ವಿಶ್ವ ಭಾಷೆ [ವಿದೇಶಿ]ಯಿಂದ 89 ನೇ ಅಕಾಡೆಮಿ ಅವಾರ್ಡ್ ಗೆ 2017 ರಲ್ಲಿ ನಾಮಕರಣಗೊಂಡ ಚಿತ್ರವಿದು. ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿಯಲಿಲ್ಲವೆಂಬುದು ಬೇರೆ ಮಾತು. ಸೆರ್ಬಿಯಾ ಮತ್ತು ಕ್ರೋಶಿಯಾ ದೇಶದ ಸಿನಿಮಾವಾಗಿ ಗುರುತಿಸಿಕೊಂಡಿದೆ.
ಕಥಾಚಿತ್ರದ ವಸ್ತು ಬಹಳ ಸರಳ ಹಾಗೂ ನೇರ. ರೈಲ್ವೆ ಚಾಲಕನ ಬದುಕಿನ ಕೆಲವು ಪುಟಗಳನ್ನುಇಲ್ಲಿ ಕಟ್ಟಿ ಕೊಡಲಾಗಿದೆ. ಸಾಮಾನ್ಯವಾಗಿ ರೈಲಿನ ವೇಗ ಎಲ್ಲರಿಗೂ ಗೊತ್ತಿದ್ದದ್ದೇ. ಬಸ್ಸಿನ ಹಾಗೆ ತತ್‌ಕ್ಷಣ ಬ್ರೇಕ್ ಹಾಕಲಾಗದು, ಬ್ರೇಕ್ ಹಾಕಿದರೂ ಒಂದಿಷ್ಟು ದೂರ ಚಲಿಸಿದ ಮೇಲೆ ರೈಲು ನಿಲ್ಲುವಂಥದ್ದು. ಒಂದು ವರದಿ ಪ್ರಕಾರ ಪ್ರತಿ ರೈಲ್ವೆ ಚಾಲಕನೂ ತನ್ನ ವೃತ್ತಿ ಜೀವನದಲ್ಲಿ ತಾನು ಕಾರಣನಾಗದೇ ಸುಮಾರು 15 ರಿಂದ 20 ಮಂದಿಯನ್ನು ಕೊಂದಿರುತ್ತಾನೆ. ಅಂದರೆ ಅಪಘಾತದ ಮೂಲಕ. ಅವನಿಗೆ ಗೊತ್ತಿಲ್ಲದೇ ಘಟಿಸುವಂಥದ್ದು. ಈ ಅಮಾಯಕತೆ ಮತ್ತು ಅವರ ಬದುಕಿನ ಕುರಿತಾದದ್ದೇ ಈ ಚಿತ್ರ.
ಇಂಥದ್ದೇ ಒಂದು ಸಂದರ್ಭದಲ್ಲಿ ಹತ್ತು ವರ್ಷದ ಒಬ್ಬ ಬಾಲಕ (ಸಿಮಾ] ಒಮ್ಮೆ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿಂತಿರುತ್ತಾನೆ. ಅವನ ಬೇಸರವೆಂದರೆ, ಯಾರೂ ತನ್ನನ್ನು ಪ್ರೀತಿಸುವುದಿಲ್ಲ ಎಂಬುದು. ಕಥಾ ನಾಯಕ [ರೈಲ್ವೆ ಚಾಲಕ ಇಲಿಜಾ] ಇದನ್ನು ದೂರದಿಂದಲೇ ಗಮನಿಸಿ, ರೈಲನ್ನು ನಿಲ್ಲಿಸುತ್ತಾನೆ. ಆ ಬಳಿಕ ಅವನನ್ನು ಕರೆದೊಯ್ದು ಆತ್ಮಹತ್ಯೆಗೆ ಕಾರಣ ಕೇಳಿ, ಸಮಾಧಾನಗೊಳಿಸಿ ತನ್ನ ಮಗನಾಗಿ ಸಾಕತೊಡಗುತ್ತಾನೆ. ಕಥಾನಾಯಕನ ದೃಷ್ಟಿಯಲ್ಲಿ ತನ್ನ ಮಗನೂ ರೈಲಿನ ಚಾಲಕನಾಗಬಾರದೆಂಬುದು. ಆದರೆ ಅಪ್ಪನ ಬದುಕಿನ ಕಥೆ ಕೇಳಿ ಪ್ರೇರಣೆಗೊಳ್ಳುವ ಆ ಬಾಲಕನಿಗೆ ರೈಲಿನ ಚಾಲಕನೇ ಆಗಬೇಕೆಂಬ ಆಸೆ. ಕೊನೆಗೂ ಗೆಳೆಯರು ಇತ್ಯಾದಿ ಕಾರಣಗಳಿಂದ ಅಪ್ಪನನ್ನು ಮನವೊಲಿಸುವಲ್ಲಿ ಗೆಲ್ಲುತ್ತಾನೆ. ಅದರಂತೆಯೇ ಆ ಬಾಲಕ ಒಂದು ದಿನ ರೈಲು ಚಾಲಕನಾಗುತ್ತಾನೆ.
ಮೋಡ ಮುಸುಕಿದ ಬಾನಿನಲ್ಲಿ ತಾರೆಗಳು ತೋರುತ್ತಿರಲಿಲ್ಲ; ಎಲ್ಲವೂ ಭೂಮಿ ಮೇಲೆ ಮಿಂಚುತ್ತಿದ್ದವು !
ಆದರೆ, ಆ ಬಾಲಕನಿಗೆ ಒಂದು ಅವ್ಯಕ್ತವಾದ ಭಯ ಕಾಡುತ್ತಿರುತ್ತದೆ. ಅದನ್ನು ಹೋಗಲಾಡಿಸಲು ಏನೆಲ್ಲಾ ಪ್ರಯತ್ನಿಸಿದರೂ ಅದು ಅಪ್ಪನಿಂದ ಸಾಧ್ಯವಾಗದು. ಕೊನೆಗೆ ಅದರ ಕಾರಣ ಹುಡುಕುತ್ತಾನೆ. ಯಾರಾದರೂ ಒಬ್ಬರು ಇವನಿಂದ ಸತ್ತರೆ [ರೈಲಿಗೆ ಸಿಕ್ಕು] ಇವನ ಅವ್ಯಕ್ತವಾದ ಭಯ [ವಿಷಣ್ಣತೆಯೆನ್ನಲೂ ಬಹುದು] ಕೊನೆಗೊಳ್ಳಬಹುದೆಂದು ನಿರ್ಧರಿಸಿ, ತಾನೇ ತನ್ನ ಮಗನು ಬರುವ ರೈಲಿನ ಸಮಯಕ್ಕೆ ಹಳಿಯ ಮೇಲೆ ನಿಲ್ಲುತ್ತಾನೆ. ಆದರೆ ಸಿಮಾ ಮತ್ತೊಬ್ಬ ವ್ಯಕ್ತಿಯ ಮೇಲೆ ರೈಲನ್ನು ಹರಿಸುತ್ತಾನೆ. ಕೊನೆಯಲ್ಲಿ ಸಿಮಾ ಓಡಿಸುತ್ತಿರುವ ರೈಲಿನಲ್ಲಿ ಇಲಿಜಾ ಪ್ರಯಾಣಿಕನಾಗಿ ಕುಳಿತು ಸಾಗುತ್ತಾನೆ.
Happy old Year movie : ನೆನಪಿನ ಪೆಟ್ಟಿಗೆಯ ಖಾಲಿ ಮಾಡುವುದು ಹೇಗೆ?
ಇಲಿಜಾ ಆಗಿ ಅಭಿನಯಿಸಿರುವ ಲಾಜರ್ ರಸ್ತೊವಿಸ್ಕಿ ಮನಸ್ಸಿನಲ್ಲಿ ಉಳಿದುಬಿಡುತ್ತಾನೆ. ಬದುಕಿನ ದುಃಖ ಹಾಗೂ ಸಂತಸಮಯ ಘಳಿಗೆಗಳನ್ನು ಎಲ್ಲೂ ಭಾವೋದ್ರೇಕವಿಲ್ಲದೇ ತೀರಾ ಸಹಜವೆನ್ನುವಂತೆ ಅನುಭವಿಸುವ ಪರಿಯೇ ವಿಶೇಷ ಎನಿಸುವಂಥದ್ದು. ಒಬ್ಬ ನಟನಾಗಿ ಪಾತ್ರದೊಳಗೆ ಹೊಕ್ಕು ಇಡೀ ಪಾತ್ರವನ್ನು ಪ್ರಸ್ತುತಪಡಿಸುವ ಬಗೆಯೂ ವಿಶಿಷ್ಟವೇ. ತನ್ನ ಬದುಕಿನ ಹಳೆಯ ನೆನಪುಗಳನ್ನೇ ಹೊದ್ದುಕೊಂಡು ಬದುಕನ್ನು ಒಂದು ಆಶೋತ್ತರ ನೆಲೆಗೆ ಕೊಂಡೊಯ್ಯಲು ಪ್ರಯತ್ನಿಸುವ ಇಲಿಜಾ, ತನ್ನ ಮಗನಾಗಿ ಆಯ್ದುಕೊಳ್ಳುವ ಸಿಮಾನಿಗೂ ಕಲಿಸುವುದು ಅದನ್ನೇ. ಸಿಮಾನಾಗಿ ಅಭಿನಯಿಸಿರುವ ಪೀಟರ್ ಕೊರೊಕ್ ಸಹ ಇಷ್ಟವಾಗುತ್ತಾನೆ. ಇಲಿಜಾನ ಪ್ರೇಯಸಿಯಾಗಿ ಕಾಣಸಿಗುವ ಮರ್ಜಾನ ಕರನೊವಿಕ್ ಳ ಅಭಿನಯ ಕೂಡ ಇಷ್ಟವಾಗುತ್ತದೆ.
ಇದನ್ನು ಮಿಲೊಸ್ ರಡೊವಿಕ್ ನಿರ್ದೇಶಿಸಿ, ಸೆರ್ಬಿಯನ್ ಫಿಲ್ಮ್ ಸ್ಟರ್ ಲಜರ್ ರಸ್ತೊವಿಸ್ಕಿ ನಿರ್ಮಿಸಿದ್ದಾರೆ. ಲಜರ್ ರಸ್ತೊವಿಸ್ಕಿ ಈ ಚಿತ್ರದ ಪ್ರಧಾನ ಪಾತ್ರದಲ್ಲಿಯೂ ನಟಿಸಿದ್ದಾರೆ.
ಇಡೀ ಚಿತ್ರ ಕೊಂಚ ಲಘು ಧಾಟಿಯಲ್ಲಿ ಸಾಗಿದರೂ ಒಂದು ಗಂಭೀರವಾದ ಕಥನವನ್ನು ತೆರೆದಿಡುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾನೆ. ಪೀಟರ್ ಕೊರಾಕ್ ಸಹ ಸಿಮಾನಾಗಿ ಅತ್ಯಂತ ಕರಾರುವಕ್ಕಾಗಿ ಅಭಿನಯಿಸಿದ್ದಾನೆ. ಮೂಲತಃ ಅವನು ನಟನಲ್ಲ.
ನಿರ್ದೇಶಕ ಮಿಲೊಸ್ ರಡೊವಿಕ್ ಫಿನ್‌ಲ್ಯಾಂಡ್‌ನನಿರ್ದೇಶಕ ಅಕಿ ಕರಿಸ್ಮಕಿಯಿಂದ ಪ್ರಭಾವಿತನಾದವನು. ಹಾಗಾಗಿ ಸೌಮ್ಯ ದನಿಯಲ್ಲಿ ಎಲ್ಲವನ್ನೂ ಹೇಳಲು ಪ್ರಯತ್ನಿಸಿದ್ದಾನೆ. ಪ್ರೀತಿ, ಸಾವು ಹಾಗೂ ಗಮ್ಯದ ಕುರಿತು ಒಂದು ಚರ್ಚೆಯ ಧಾಟಿಯಲ್ಲಿ ಸಿನಿಮಾವನ್ನು ಕಟ್ಟಿಕೊಡುತ್ಗಾನೆ. ಮಾನವೀಯ ನೆಲೆಯಿಂದ ಆರಂಭವಾಗಿ ಮತ್ತೆ ಮಾನವೀಯ ನೆಲೆಯಲ್ಲೇ ಪೂರ್ಣಗೊಳ್ಳುವ ಚಿತ್ರದ ಕೆಲವು ಸನ್ನಿವೇಶಗಳು ನಮ್ಮನ್ನು ಸದಾ ಕಾಡುವಂಥದ್ದು.
ವಿವರಗಳು : ಚಿತ್ರ ನಿರ್ಮಾಣ : 2016
ಸಿನಿಮಾ ಅವಧಿ : 85 ನಿಮಿಷಗಳು
ದೇಶ : ಸೆರ್ಬಿಯಾ/ಕ್ರೋಶಿಯಾ
ಭಾಷೆ : ಸೆರ್ಬಿಯನ್
ನಿರ್ದೇಶನ : ಮಿಲೊಸ್ ರಡೋವಿಕ್
ಪ್ರಮುಖ ಭೂಮಿಕೆ
ಇಲಿಜಾ – ಲಜರ್ ರಸ್ತೊವಿಸ್ಕಿ
ತರುಣ ಸಿಮಾ – ಪೀಟರ್ ಕೊರಕ್
ಬಾಲಕ ಸಿಮಾ- ಪೇವಲ್ ಎರಿಕ್
ಜಗೋಡಾ – ಮಿರ್ಜಾನಾ ಕರನೊವಿಕ್
ಸಿದಾ- ಜಸ್ನಾ ಜೂರಿಕ್
ಪ್ರಶಸ್ತಿಗಳು :
ಅರ್ಪ ಅಂತಾರಾಷ್ಟ್ರೀಯ ಚಿತ್ರೋತ್ಸವ-ಅತ್ಯುತ್ತಮ ಚಿತ್ರ ಹಾಗು ಅತ್ಯುತ್ತಮ ಚಿತ್ರಕಥೆ.
ಬ್ರಸೆಲ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವ-ಗ್ರ್ಯಾಂಡ್ ಫಿಕ್ಸ್ ಪ್ರಶಸ್ತಿ
ಫೆಸ್ಟ್ ಅಂತಾರಾಷ್ಟ್ರೀಯ ಚಿತ್ರೋತ್ಸವ-ಅತ್ಯುತ್ತಮ ಚಿತ್ರ [ಫೆಡೆರೊ ಜೂರಿ ಪ್ರಶಸ್ತಿ2017)
ಅತ್ಯುತ್ತಮ ನಟ- ಲಜರ್ ರಸ್ತೊವಿಸ್ಕಿ
ಫಿಲ್ಮ್ಸ್ ಇನ್‌ಫೆಸ್ಟ್ 2017ಚ- ಅತ್ಯುತ್ತಮ ಅಂತಾರಾಷ್ಟ್ರೀಯ ನಟ ಲಜರ್ ರಸ್ತೊವಿಸ್ಕಿ
ಜೈಪುರ್ ಅಂತಾರಾಷ್ಟ್ರೀಯ ಸಿನಿಮೋತ್ಸವ – ಅತ್ಯುತ್ತಮ ನಿರ್ದೇಶನ ಪ್ರಶಸ್ತಿ [ಗೋಲ್ಡನ್ ಕ್ಯಾಮೆಲ್]
ಮನ್‌ಹೆಮ್-ಹೆಡಲ್‌ಬರ್ಗ್ ಅಂತಾರಾಷ್ಟ್ರೀಯ ಸಿನಿಮೋತ್ಸವ- ಅತ್ಯುತ್ತಮ ಪ್ರೇಕ್ಷಕರ ಪ್ರಶಸ್ತಿ
ತೀರ್ಪುಗಾರರ ಪ್ರಶಸ್ತಿ- ಅತ್ಯುತ್ತಮ ನಿರ್ದೇಶನ
ಸಿನಿಮಾ ಮಾಲಕರ ಶಿಫಾರಸು ಪ್ರಶಸ್ತಿ
ಗ್ರ್ಯಾಂಡ್ ನ್ಯೂಕಮರ್ ಪ್ರಶಸ್ತಿ
ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ
ಪಲಿಕ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ
ಪೋರ್ಟ್‌ಲ್ಯಾಂಡ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ
ಪ್ರಾಗ್ ಸ್ವತಂತ್ರ ಸಿನಿಮೋತ್ಸವ ಪ್ರಶಸ್ತಿ
ಸರಜಿವೊ ಸಿನಿಮೋತ್ಸವ ಪ್ರಶಸ್ತಿ
ವಾರ್ಸಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ
ವಿಂಟರ್ ಫಿಲ್ಮ್ ಪ್ರಶಸ್ತಿ