Monday, December 23, 2024
spot_img
More

    Latest Posts

    “ಅರ್ಥ” ಸಿನಿಮಾ : ಒಂದು ಒಳ್ಳೆಯ ನಿರೂಪಣೆ

    ಬಿ. ಸುರೇಶ ನಿರ್ದೇಶಿಸಿದ “ಅರ್ಥ” ಸಿನಿಮಾ ಇತ್ತೀಚೆಗೆ ಸಮುದಾಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಈ ಚಿತ್ರದ ಬಗ್ಗೆ ವಿನುತಾ ಅವರು ಬರೆದ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.

    ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ “ಅರ್ಥ”. – ಇದು “ಅರ್ಥ” ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ – 2009) ನೀಡಿರುವ ಒಕ್ಕಣೆ.

    “ಅರ್ಥ” – ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

    ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ.

    ಚಿತ್ರ ರೂಪಿಸಿರುವ ಎಳೆಯ ಹಿನ್ನೆಲೆಯಲ್ಲಿ ಇದರ ಸಮರ್ಥನೆ ಸರಿಯಾಗಿ ಮೂಡಿಬಂದಿಲ್ಲವೆನ್ನಬಹುದು. ಹೊರಗಡೆ ತನ್ನ ಸ್ನೇಹಿತರೊಂದಿಗೆ, ವೇಶ್ಯೆಯಾದರೂ ರಾಣಿಯಮ್ಮ (ಅರುಂಧತಿ ಜತ್ಕರ್) ನೊಡನೆ ಶುದ್ಧ ಸ್ನೇಹದಿಂದಿರುವ ಸೀನಪ್ಪ, ಮನೆಗೆ ಬಂದೊಡನೆ ಉಗ್ರಪ್ಪನಾಗುತ್ತಾನೆ. ಏನೋ ನೆವ ತೆಗೆದು ರಂಪ ಮಾಡುತ್ತಾನೆ. ಹೆಂಡತಿಯನ್ನು ಹೊಡೆದು ಹಿಂಸಿಸುತ್ತಾನೆ. ಮಕ್ಕಳು ಮೂಕಪ್ರೇಕ್ಷಕರಾಗುತ್ತಾರೆ (ಸೀನಪ್ಪನ ಮಗ ಶ್ರೀಕಾಂತನ ದು:ಖ, ಅಸಹಾಯಕತೆ, ಹಾಗೂ ಗೊಂದಲಗಳ ನಿರ್ಭಾವುಕ ಅಭಿನಯ ಒಂದು ಕ್ಯಾಚ್). ಇಲ್ಲಿ ಆರ್ಥಿಕ ಬಿಕ್ಕಟ್ಟಿಗಿಂತಲೂ ಸೀನಪ್ಪನ ಮನಸ್ಥಿತಿಯೇ ಸಮಸ್ಯೆಗೆ ಕಾರಣವೇನೋ ಅನಿಸುತ್ತದೆ (ಮತ್ತೊಮ್ಮೆ ಬೀchi ಯವರ ಹುಚ್ಚು-ಹುರುಳಿನ ಹೆಂಡತಿಯನ್ನೇಕೆ ಹೊಡೆಯಬೇಕು? ನೆನಪಾಗುತ್ತದೆ). ನಾಲ್ಕು ಗೋಡೆಗಳ ನಡುವೆ ಇರುವ ಹೆಣ್ಣು, ಹೊರಗೆ ಹೋಗಿ ದುಡಿದುಕೊಂಡು ಬರುವ ಗಂಡನನ್ನೇನು ಪ್ರಶ್ನಿಸುವುದು ಎನ್ನುವ ಹಮ್ಮಿರಬಹುದು. ಅಷ್ಟೆಲ್ಲ ಹಿಂಸೆಯನ್ನು ಅನುಭವಿಸಿದ್ಯಾಗ್ಯೂ, ಮಗಳು “ಅಪ್ಪನ ಜೊತೆ ಟೂ ಬಿಡಮ್ಮ” ಎಂದು ಮುಗ್ಧವಾಗಿ ನುಡಿದಾಗ, “ನನ್ನ ಗಂಡನೊಡನೆಯೇ ಟೂ ಬಿಡಲು ಹೇಳುತ್ತೀಯೇನೆ?” ಎಂದು ಮಗಳಿಗೇ ಹೊಡೆಯುತ್ತಾಳೆ ಸೀನಪ್ಪನ ಹೆಂಡತಿ!! ಎಲ್ಲಿಯವರೆಗೂ, ಗಂಡನ ಎಲ್ಲ ಹಸಿವುಗಳನ್ನು ತೀರಿಸುವುದೇ ತಮ್ಮ ಜೀವನದ ಪರಮೋಚ್ಛ ಕರ್ತವ್ಯವೆಂದು ತಿಳಿದಿರುವ ಹೆಂಗಸರಿರುತ್ತಾರೋ, ಹೆಣ್ಣು ಸಹನಾಮೂರ್ತಿ, ಕ್ಷಮಯಾಧರಿತ್ರೀ ಎಲ್ಲವನ್ನೂ ಸೈರಿಸಿಕೊಂಡು ಹೋಗಬೇಕು ಆಗಲೇ ಸಂಸಾರ ಉಧ್ಧಾರವಾಗುವುದು ಎಂದು ಕಿವಿಯೂದುವವರು ಇರುತ್ತಾರೋ, ಅಲ್ಲಿಯವರೆಗೂ ಈ ನರಕದಿಂದವರಿಗೆ ಬಿಡುಗಡೆಯಿಲ್ಲ.

    ಬಾಡಿಗೆ ಆಟೋ ಓಡಿಸುವ ದೈನಂದಿನ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಂತ ಆಟೋದ ಕಡೆ ಸೀನಪ್ಪನ ಮನಸ್ಸು ವಾಲುತ್ತದೆ (ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರೂ ಸ್ವಂತಕ್ಕೊಂದು ಸೂರು ಮಾಡಿಕೊಳ್ಳಲು ಹಪಹಪಿಸುವಂತೆ!). ಶ್ಯೂರಿಟಿ ಇದ್ದರೆ ಮಾತ್ರ ಸಾಲ ನೀಡುವ ಭಾರತೀಯ ಬ್ಯಾಂಕುಗಳ “ಅರ್ಥ” ವ್ಯವಸ್ಥೆ, ಕೊಡಿಸಿದ ಸಾಲದಲ್ಲಿ “ಪರ್ಸೆ೦ಟೇಜ್” ಕೇಳುವ ನಮ್ಮ ಭ್ರಷ್ಟಾಚಾರ ವ್ಯವಸ್ಥೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಅಜ್ಜಿಯ ಹೆಸರಿನಲ್ಲಿರುವ ಮನೆಯನ್ನು ಶ್ಯೂರಿಟಿಗಾಗಿ ನೀಡುವಲ್ಲಿನ ತೊಡಕಿನ ಬಗ್ಗೆ ಮುಂದಾಲೋಚಿಸಿ ಮಾತನಾಡುವ ಪತ್ನಿ ಮತ್ತೊಮ್ಮೆ ದೂಷಣೆಗೊಳಗಾಗುತ್ತಾಳೆ! ಶೇಕಡಾ 14 ರಷ್ಟು ಬಡ್ಡಿ, ಸಾಲ ತೀರುವವರೆಗೆ ಬ್ಯಾಂಕಿನವರ ವಶದಲ್ಲಿಯೇ ಆಟೋ ಎನ್ನುವ ನಿಭಂದನೆಗಳ ನಡುವೆಯೂ, ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ ಎನ್ನುವ ಸಂಗತಿಯೊಂದೇ ಸೀನಪ್ಪನನ್ನು ವಿದೇಶೀ ಬ್ಯಾಂಕಿನ ಸಾಲದ ತೆಕ್ಕೆಗೆ ತಳ್ಳುತ್ತದೆ. “ತಿಮ್ಮಯ್ಯನಿಗೆ ಹಣ ಕಟ್ಟದೆ ಇದ್ರೆ, ಹಣ ಬಿಟ್ಟು ಬರೀ ಆಟೋ ಎತ್ಕೊಂಡು ಹೋಗ್ತಾನ, ಆದ್ರೆ ಈ ಪರದೇಶಿ ಬ್ಯಾಂಕಿನವ್ರು ಆಟೋ ಜೊತಿಗೆ ನಿನ್ನೂ ಎಳ್ಕೊಂಡು ಹೋದ್ರೇನ್ಮಾಡ್ತೀ?” ಎನ್ನುವ ರಾಣಿಯಮ್ಮನ ಮಾತುಗಳು ನಿಜಕ್ಕೂ ಯೋಚನಾರ್ಹವೆನಿಸುತ್ತವೆ. ಲಾಭವಿಲ್ಲದೇ ಯಾರೂ business ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ. ನಮಗೆ ಪುಕ್ಕಟೆಯಾಗಿ ಅಥವಾ ಕಡಿಮೆ ದರಕ್ಕೆ ಕೊಡಲು ಅವರು ಮಾಡುತ್ತಿರುವುದೇನೂ ದಾನವಲ್ಲ, ಸೇವೆಯಲ್ಲ; ವ್ಯಾಪಾರ. ಆದ್ದರಿಂದ ಅವರ “*” ಮಾರ್ಕುಗಳನ್ನು ಸರಿಯಾಗಿ “ಅರ್ಥ” ಮಾಡಿಕೊಂಡು ವ್ಯವಹರಿಸುವುದು ಕ್ಷೇಮ. ಸಾಲ ಕೇಳಲು ಬಂದಾಗ, ಕೊಡಿಸುವವ, ಒಮ್ಮೆ ಕಾರ್ಡ್ಸ್, ಮತ್ತೊಮ್ಮೆ ಚದುರಂಗ ಆಡುತ್ತಿರುವುದು ಮಾರ್ಮಿಕವಾಗಿದೆ.

    ಸೀನಪ್ಪ ತನ್ನ ಸ್ನೇಹಿತರ ಜೊತೆಯಲ್ಲಿ “ಬಾರ್” ನಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಿರುವಾಗ “ನಾವು ಇಲ್ಲಿರಬಾರದಾಗಿತ್ತು, ಫಾರಿನ್ ನಲ್ಲಿರಬೇಕಾಗಿತ್ತು. ಆರಾಮಾಗಿರಬಹುದಾಗಿತ್ತು” ಅಂದುಕೊಳ್ಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ “ನಿನ್ನ ಮನೆಯವರ ಜೊತೆ ಫಾರಿನ್ನಾಗೆ ಮಾಡ್ತಾರಂತಲ್ಲ ಹಂಗೆ ವೀಕೆಂಡ್ ಮಾಡು, ನೆಮ್ಮದಿಯಾಗಿರ್ತೀಯ” ಅನ್ನೋ ಸಲಹೆ ಬರುತ್ತದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಮ್ಮ ಜನರಲ್ಲಿ “ಫಾರಿನ್” ಕುರಿತಾಗಿ ಇರುವ ತಪ್ಪು ಅಭಿಪ್ರಾಯಗಳನ್ನು ಕುರಿತು ಅಚ್ಚರಿಯಾಗುತ್ತದೆ! ಅಲ್ಲಿಯೂ ಭಿಕ್ಷುಕರಿದ್ದಾರೆ, ಕಳ್ಳರಿದ್ದಾರೆ, ಕೊಲೆಗಾರರಿದ್ದಾರೆ, ಅಕ್ರಮ ನಿವಾಸಿಗಳಿದ್ದಾರೆ, ವಲಸಿಗರಿದ್ದಾರೆ, ಹುಚ್ಚರಿದ್ದಾರೆ! ವರ್ಣಬೇಧದ ಸಣ್ಣ under current ಇನ್ನೂ ಹರಿಯುತ್ತಿದೆ! ಅಲ್ಲಿಯೂ ವಿವಿಧ ಜಾತಿಗಳಿವೆ, ಅಪ್ಪಟ ಲಂಪಟ “ಧರ್ಮ”ಗುರುಗಳಿದ್ದಾರೆ! ಒಂದು ಜಾತಿಯವರು ಇನ್ನೊಂದು ಜಾತಿಯ ಆರಾಧನಾ ಸ್ಥಳಕ್ಕೆ ಹೋಗುವುದಿಲ್ಲ, ಅದೇನೋ ಅಸಡ್ಡೆ, ಅಗೌರವ! ನಾವೆಲ್ಲ ಒಬಾಮನ ದೀಪಾವಳಿ ನೋಡಿ ಮರುಳಾದದ್ದೇ ಹೆಚ್ಚು! ಅದೇಕೋ ನಮ್ಮ ಮಾಧ್ಯಮಗಳಿಗೆ ನಮ್ಮ ಹುಳುಕುಗಳನ್ನು ವೈಭವೀಕರಿಸುವಲ್ಲಿ ಇರುವ ಉತ್ಸುಕತೆ ಅಲ್ಲಿನ ಮಾಧ್ಯಮಗಳಲ್ಲಿಲ್ಲ. ಅದೇಕೋ ನಮ್ಮ ಜನಕ್ಕೆ ಆದಾಯ ಡಾಲರುಗಳಲ್ಲಿರುವುದು ಕಾಣುತ್ತದೆಯೇ ಹೊರತು ವೆಚ್ಚವೂ ಡಾಲರ್ ಗಳಲ್ಲಿಯೇ ಎನ್ನುವುದು ಕಾಣುವುದಿಲ್ಲ! ಅಲ್ಲಿ ಹೋಗಿ ಪೆಟ್ರೋಲ್ ಬಂಕುಗಳಲ್ಲಿ, ಮಾಲ್ ಗಳ ರೆಸ್ಟ್ ರೂಮ್ ಗಳಲ್ಲಿ ಕ್ಲೀನರ್ ಗಳಾಗಿ ಕೆಲಸಮಾಡಿದರೂ ಸರಿಯೇ, ಫಾರಿನ್ ಕೆಲಸವೇ ಆಗಬೇಕು! ಅದೇ ಕೆಲಸ ಇಲ್ಲಿ ಮಾಡಿದರೆ, dignity of labour! ಅದೇಕೋ ಅಲ್ಲಿನ ಐಷಾರಾಮ ಜೀವನವನ್ನು ನೋಡುವ ನಾವು, ಅಲ್ಲಿನ ಶಿಸ್ತು ಶುಚಿತ್ವವನ್ನು, ಗಂಡ ಹೆಂಡತಿಯನ್ನು ವಿನಾಕಾರಣ ಹೊಡೆಯುವುದಿಲ್ಲ ಎನ್ನುವುದನ್ನು, ದಂಪತಿಗಳು ಮಕ್ಕಳ ಮುಂದೆ ಜಗಳವಾಡುವುದಿಲ್ಲ ಎನ್ನುವುದನ್ನು, ವೃತ್ತಿ-ಸಂಸಾರವನ್ನು ಬೆರೆಸಿ ಕಿಚಡಿಯನ್ನು ಅವರು ಮಾಡುವುದಿಲ್ಲ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ! ಇಷ್ಟೆಲ್ಲದರ ನಡುವೆಯೂ ಮನೆಯವರೊಡನೆ ಸಮಯ ಕಳೆಯಬೇಕೆಂಬುದನ್ನು ಪಾಶ್ಚಿಮಾತ್ಯರ ವೀಕೆಂಡೇ ನಮಗೆ ಕಲಿಸಬೇಕಾಯಿತೇ? ವಿಪರ್ಯಾಸ!!

    ಮನೆಯಲ್ಲಿ ದಿನನಿತ್ಯ ನಡೆಯುವ ಪ್ರಹಸನದಿಂದ ದೂರವಾಗಲು, ಜಂಜಡಗಳಿಂದ ಬಿಡಿಸಿಕೊಳ್ಳಲು, ಹೊತ್ತು ಕಳೆಯಲು, ಸೀನಪ್ಪನ ಮಗ ಶ್ರೀಕಾಂತ ಯಾವುದೋ ಮೂಲಭೂತವಾದಿ ಸಂಘಟನೆಗೆ ಸೇರಿರುತ್ತಾನೆ. ಅಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿ ಅಪ್ಪನ ವಿದೇಶಿ ಆಚರಣೆಗಳ ವಿರುಧ್ಧ ಮಾತನಾಡುತ್ತಾನೆ; ರಾಣಿಯಮ್ಮನನ್ನು ಬದಲಾಯಿಸುತ್ತಾನೆ. ಮಹಾನ್ ದೇಶಭಕ್ತ, ಕ್ರಾಂತಿಕಾರಿ ನಾಯಕ, ಸಂಸ್ಕೃತಿಯ ಪರಿಪಾಲಕನಂತೆ ತಂದೆಗೆ ಕಾಣುತ್ತಾನೆ. ಮಗ ಹೇಳಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಮಗ ಏನನ್ನೋ ಮಹತ್ತರವಾದದ್ದನ್ನು ಹೇಳುತ್ತಿದ್ದಾನೆ ಎಂದುಕೊಳ್ಳುವ ಸೀನಪ್ಪನಲ್ಲಿ ನಿಜವಾದ ಅರ್ಥದಲ್ಲಿ ಮುಗ್ಧ ಶ್ರೀಸಾಮಾನ್ಯ ಪ್ರತಿಬಿಂಬಿಸುತ್ತಾನೆ. ಒಂದೊಮ್ಮೆ, ಮಗ ಡ್ರಗ್ಸ್ ಎನ್ನುವ ದುಶ್ಚಟಕ್ಕೆಲ್ಲಿ ಬಲಿಯಾಗುವನೋ ಎಂದು ಕಳವಳಪಟ್ಟು ಅವುಗಳಿಂದ ದೂರವಿರಲು ತಾಕೀತು ಮಾಡುವ ಸೀನಪ್ಪನಿಗೆ, ಈಗ ಮಗನಿಗಂಟಿಕೊಂಡಿರುವ “ಚಟ” ಯಾವುದೇ ಗಾಂಜಾ, ಅಫೀಮಿಗಿಂತಲೂ ಅಪಾಯಕಾರಿ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಆತನನ್ನಷ್ಟೇ ಅಲ್ಲ, ಅನೇಕಾನೇಕ ಅಮಾಯಕರನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು “ಅರ್ಥ”ವಾಗುವುದೇ ಇಲ್ಲ. ಕಾಡುವ ವಿಷಯವೆಂದರೆ, ಯಾವನೋ ತಲೆಮಾಸಿದವನ ಹಳಸಲು ಆದರ್ಶಗಳಿಗೆ, ಕೊಳೆತ ಸಿಧ್ಧಾಂತಗಳಿಗೆ, ಕೆಟ್ಟ ರಾಜಕೀಯಕ್ಕೆ ಇರುವ ಪ್ರಭಾವ, ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುವ ಸಾಮಾನ್ಯರ ಆಲೋಚನೆಗಳಿಗಿಲ್ಲವಲ್ಲ! ಸಾಮಾನ್ಯ ಜನರಲ್ಲಿರುವ ಜಾತಿ ಪಂಗಡಗಳನ್ನು ಮೀರಿದ ಸ್ನೇಹ ಪ್ರೀತ್ಯಾದರಗಳು ಅದೇಕೋ “ಬುಧ್ಧಿವಂತ” ಜನರಲ್ಲಿ ಕಾಣೆಯಾಗಿವೆ! ಇಷ್ಟಾದರೂ ಅಂತದೊಂದು ಪ್ರಭಾವಳಿಗೆ ಬಲಿಯಾಗುವವರು ಸಾಮಾನ್ಯರೇ! ಸ್ವಾತಂತ್ರ್ಯದ ಜೊತೆಜೊತೆಗೆ ಬಂದ ದೇಶವಿಭಜನೆಯ ಗಲಭೆಯಿಂದ ಪ್ರಾರಂಭವಾಗಿ, ಸಿಖ್ ಹತ್ಯಾಕಾಂಡ, ಅಯೋಧ್ಯಾ ವಿವಾದ, ಗೋಧ್ರಾ ಪ್ರಕರಣ, ಈದ್ಗಾ ಪ್ರಕರಣ….. ಇಲ್ಲೆಲ್ಲೂ ಯಾವೊಬ್ಬ ನಾಯಕನ ಒಂದು ಕೂದಲೂ ಕದಲಲಿಲ್ಲ. ಬಲಿಯಾದವರೆಲ್ಲ ಶ್ರೀಸಾಮಾನ್ಯರು! ಇಂತದೊಂದು ಸಂದೇಶ, ಚಿತ್ರದಲ್ಲಿ ಸೀನಪ್ಪನ ಮಗ ಹಾಗೂ ಮುಸ್ಲಿಂ ಸ್ನೇಹಿತ ಕೋಮುಗಲಭೆಯಲ್ಲಿ ಸತ್ತಾಗ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೇಶದ ಅರ್ಥವ್ಯವಸ್ಥೆಗೊಂದು ಹೊಸದಿಕ್ಕನ್ನು ತೋರಿಸಬೇಕಾಗಿರುವ ದೇಶೀಯತೆ ಎನ್ನುವುದು ಮೂಲಭೂತವಾದಿಗಳ ಹಾಗೂ ಜ್ಯಾತ್ಯಾತೀತವಾದಿಗಳ ನಡುವೆ ಅಪಭ್ರಂಶುವಾಗಿ ನಲುಗುತ್ತಿರುವುದು ನಿಜಕ್ಕೂ ದುರಂತ…

    ಅರ್ಥಕ್ಕೊಂದು ಹೊಸ ಅರ್ಥ ಕೊಡುವಲ್ಲಿ ಚಿತ್ರ ಸಾರ್ಥಕತೆ ಪಡೆದಿದೆ. ನಡುನಡುವೆ ಬರುವ ವಚನಗಳು, ನಾಗೇಂದ್ರ ಶಾ ರವರ ಚುಟುಕುಗಳು ಸರಿಯಾಗಿ ಕುಟುಕುತ್ತವೆ. ಆ ಪಾತ್ರವಂತೂ ನಿಜಕ್ಕೂ a treat to watch. ಕೊನೆಯಲ್ಲಿ, ಕೋಮುಗಲಭೆಯ ದಳ್ಳುರಿಯಲ್ಲಿ ಸೀನಪ್ಪನ ಆಟೋ, ವಿದೇಶಿ ಬ್ಯಾಂಕಿನ ಎತ್ತರದ ಹೋರ್ಡಿ೦ಗ್ ನ ಕೆಳಗೆ ಹತ್ತಿ ಉರಿಯುತ್ತಿರುತ್ತದೆ. “ಮನೆಯೊಳಗೆ ಕತ್ತಲಾಗಿದೆ ದೀಪ ಹಚ್ರೋ” ಎಂದು ಅಜ್ಜಿ ನುಡಿಯುತ್ತಾರೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?‌ (ಲೇಖನ ಕೃಪೆ : ಸಾಂಗತ್ಯ ಬ್ಲಾಗ್)

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]