Sunday, December 22, 2024
spot_img
More

    Latest Posts

    ಡಾ. ರಾಜಕುಮಾರ್‌ : ಜನ್ಮದಿನಾಚರಣೆಯ ಮುನ್ನ ಧ್ರುವ ತಾರೆಯ ನೆನಪು

    ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರರ 96 ನೇ ಜನ್ಮ ದಿನಾಚರಣೆ ಏಪ್ರಿಲ್‌ 24 ರಂದು(1929 ರ ಎಪ್ರಿಲ್‌ 24 ರಂದು ಜನನ). ಇನ್ನು ನಾಲ್ಕು ವರ್ಷಗಳಿಗೆ ಅಣ್ಣಾವ್ರ ಜನ್ಮ ಶತಮಾನೋತ್ಸವವನ್ನು ಭರ್ಜರಿಯಾಗಿ, ಅರ್ಥ ಪೂರ್ಣವಾಗಿ ಆಚರಿಸಿ ಸಂಭ್ರಮಿಸಬೇಕಿದೆ. ಅರ್ಥಪೂರ್ಣ ಎನ್ನುವುದಕ್ಕೆ ಹತ್ತಾರು ಅರ್ಥಗಳಿವೆ. ಅದರ ಮಧ್ಯೆಯೂ ಇನ್ನು ನಾಲ್ಕು ವರ್ಷಗಳಿಗೆ ಈ ಕನ್ನಡ ಸಿನಿಮಾ, ಚಿತ್ರಮಂದಿರಗಳು, ಹೀರೋಯಿಸಂ ಇತ್ಯಾದಿಗಳು ಇರುತ್ತವೆಯೇ ಅಥವಾ 30 ವರ್ಷಗಳ ಹಿಂದೆ ಬಂದ ಮಾತಾಡುವ ಪೆಟ್ಟಿಗೆಯಂತೆಯೇ ಈಗಿನ ಮಾಯಾ ಪೆಟ್ಟಿಗೆ (ಒಟಿಟಿ) ಯಲ್ಲಿ ಇಡೀ ಸಿನಿಮಾ ರಂಗ ಮುಳುಗಿರುತ್ತದೆಯೋ? ಗೊತ್ತಿಲ್ಲ. ಆದರೆ ಬಹುತೇಕರ ಅಭಿಪ್ರಾಯದಲ್ಲಿ ಎಲ್ಲವೂ ಬದಲಾಗಿರುತ್ತದೆ. ಕೆಲವೇ ಜನರ ಬಾಯಲ್ಲಿ ಇಲ್ಲ, ಒಂದಿಷ್ಟು ಸ್ವರೂಪ ಬದಲಾವಣೆ ಆಗಬಹುದು, ಆದರೆ ಮೂಲದಲ್ಲಿ ಬದಲಾಗದು.

    ಎರಡೂ ಅವಕಾಶಗಳೇ. ಮಾಯಾ ಪೆಟ್ಟಿಗೆಯೂ ಅವಕಾಶವೇ. ಚಿತ್ರಮಂದಿರವೂ ಅವವಕಾಶವೇ. ಒಂದು ಚಿತ್ರ ನೋಡುವಾಗ ಸಿಗುವ ಒಟ್ಟೂ ಅನುಭವದ ನೆಲೆಯಲ್ಲಿ ನೋಡುವುದಾದರೆ ಚಿತ್ರಮಂದಿರ ಚೆಂದ. ಏಕಾಂಗಿತನದಲ್ಲಿ ಸಿಗುವ ಸುಖವನ್ನು ದೊಡ್ಡದು ಅಂದುಕೊಂಡರರೆ ಒಟಿಟಿ ಆಗಬಹುದು. ಡಾ. ರಾಜಕುಮಾರ್‌ ಖಂಡಿತಾ ಚಿತ್ರಮಂದಿರ ಕಾಲದವರು. ಹಾಗಾಗಿ ಅಲ್ಲಿಗೆ ವಾಪಸು ಹೋಗೋಣ.

    1985 ರಲ್ಲಿ ಡಾ.ರಾಜಕುಮಾರ್‌ ಅವರ ಮೂರು ಸಿನಿಮಾಗಳು ಬಿಡುಗಡೆಯಾಗಿದ್ದವು. ಅದೇ ಕಣ್ಣು, ಜ್ವಾಲಾಮುಖಿ ಹಾಗೂ ಧ್ರುವತಾರೆ. ಪಟ್ಟಣಕ್ಕಿಂತ ತುಸು ದೊಡ್ಡ ಪಟ್ಟಣದಲ್ಲಿ ಇದ್ದದ್ದೇ ನಾಲ್ಕು ಚಿತ್ರಮಂದಿರಗಳು. ಅದರಲ್ಲಿ ಒಂದು ಡಬಲ್‌ ಡೆಕ್ಕರ್‌ ಬಸ್ಸು ಇದ್ದಂತೆ. ಮೇಲೊಂದು, ಕೆಳಗೊಂದು. ಕೆಳಗಿನ ಚಿತ್ರಮಂದಿರದಲ್ಲಿ ಸಾಮಾನ್ಯವಾಗಿ ದೇವರು, ಪೌರಾಣಿಕ ಸಿನಿಮಾಗಳು ಹೆಚ್ಚಾಗಿ ತೆರೆ ಕಾಣುತ್ತಿದ್ದರೆ, ಮೇಲಿನ ಥಿಯೇಟರ್‌ ನಲ್ಲಿ ಡಾ. ರಾಜಕುಮಾರ್‌ ಸಿನಿಮಾಗಳೇ. ಅದು ಬಿಟ್ಟರೆ ಸಾಮಾಜಿಕ ಸಿನಿಮಾಗಳು.

    ಅಂದು ‍ಧ್ರುವತಾರೆ ಬಿಡುಗಡೆಯಾದ ದಿನ. ಆಗ ನಮ್ಮ ಅಣ್ಣಾವ್ರು ಸಿನಿಮಾ ಎಂದರೆ ಫಸ್ಟ್‌ ಡೇ ಫಸ್ಟ್‌ ಷೋ ನೋಡಿ ಮುಗಿಸಬೇಕು. ಅದಕ್ಕಾಗಿ ಬೆಳಗ್ಗೆ 4 ಗಂಟೆಗೇ ಹೋಗಿ ಥಿಯೇಟರ್‌ ಎದುರು ಕಾದದ್ದು ಇದೆ. ಅದರಂತೆಯೇ ನಾನೂ ಮತ್ತು ನನ್ನ ಗೆಳೆಯ ಇಬ್ಬರದ್ದು ಫಸ್ಟ್‌ ಡೇ ಫಸ್ಟ್‌ ಷೋ ಗೆ ಒಂದು ವಾರದ ಮೊದಲೇ ತಯಾರಾಯಿತು. ಅಗ ಬಾಲ್ಕನಿಗೆ 15 ರೂ. ಎಂಬ ನೆನಪು. ಗಾಂಧಿ ಕ್ಲಾಸ್‌ ಗೆ 10 ರೂ. (ಸ್ಪಷ್ಟ ನೆನಪಿಲ್ಲ). ನಾವು ಯಾವಾಗಲೂ ಗಾಂಧಿ ಕ್ಲಾಸ ಗೆ ಹೋಗುತ್ತಿದ್ದೆವೆನ್ನಿ. ನಾವೇನು? ನಮ್ಮ ರೀತಿ ಬಹುತೇಕರೆಲ್ಲರ ಮೊದಲ ಆಯ್ಕೆ ಗಾಂಧಿ ಕ್ಲಾಸ್.‌ ಅದು ಮುಗಿದುಬಿಟ್ಟರೆ ಮಾತ್ರ ಫಸ್ಟ್‌ ಕ್ಲಾಸ್‌, ಬಾಲ್ಕನಿ. ನಾನು ಮೊದಲ ಬಾರಿಗೆ ಬಾಲ್ಕನಿ ಸೀಟಿನಲ್ಲಿ ಕುಳಿತದ್ದೇ ಶ್ರುತಿ ಸೇರಿದಾಗ ಚಿತ್ರದಲ್ಲಿ.

    ಆಗೆಲ್ಲ ಡಾ. ರಾಜಕುಮಾರ್‌ ರ ಹೊಸ ಚಿತ್ರ ಬಿಡುಗಡೆಯ ದಿನ ಐದು ಪ್ರದರ್ಶನಗಳಿರುತ್ತಿದ್ದವು. ಅರ್ಲಿ ಮಾರ್ನಿಂಗ್‌ ಷೋ, ಮಾರ್ನಿಂಗ್‌ ಷೋ, ಮ್ಯಾಟ್ನಿ, ಫಸ್ಟ್‌ ಷೋ ಹಾಗೂ ಸೆಕೆಂಡ್‌ ಷೋ. ನಮ್ಮದು ಎರಡೇ ಗುರಿ ಇರುತ್ತಿತ್ತು. ಬೆಳಗ್ಗೆ 7 ಕ್ಕೆ ಸಿನಿಮಾ ಮಂದಿರದ ಟಿಕೆಟ್‌ ಸಾಲಿನಲ್ಲಿ ನಿಂತರೆ ಮ್ಯಾಟ್ನಿಯೊಳಗಾದರೂ ಸಿನಿಮಾ ನೋಡಿಯೇ ಮನೆಗೆ ಹೋಗಬೇಕು. ನಂತರದ ಎರಡು ಷೋ ಗಳಾದರೆ ಮನೆಯಲ್ಲಿ ಸಿನಿಮಾಕ್ಕೆ ಹೋಗಿದ್ದೇವೆ ಎಂಬುದು ತಿಳಿಯುತ್ತಿತ್ತು.

    ಹಾಗಾಗಿ ಬೆಳಗ್ಗೆ 7 ಕ್ಕೇ ಚಿತ್ರಮಂದಿರದ ಎದುರು ಬಂದೆವು. ಅಗಲೇ ದೊಡ್ಡ ಕ್ಯೂ. ಏನು ಮಾಡುವುದು ತೋಚಲಿಲ್ಲ. ಗಾಂಧಿ ಕ್ಲಾಸ್‌ ಗಿದ್ದ ಸಾಲು ನೋಡಿ ಟಿಕೆಟ್‌ ಸಿಗುವುದು ಕಷ್ಟ ಎನಿಸಿತು. ಇನ್ನೊಂದು ಸಂಗತಿಯೆಂದರೆ ಆಗ ಇದ್ದ ಇನ್ನೂ ಒಂದು ಪದ್ಧತಿ ಯೆಂದರೆ ಮೊದಲ ದಿನ, ಸರತಿ ಸಾಲಿನಲ್ಲಿದ್ದವರಿಗೆ ಒಂದುವೇಳೆ ಅರ್ಲಿ ಮಾರ್ನಿಂಗ್‌ ಷೋ ಟಿಕೆಟ್‌ ಮುಗಿಯಿತೆಂದರೆ ಕೂಡಲೇ ನಂತರದ ಷೋಗಳಿಗೆ ಟಿಕೆಟ್‌ ನೀಡುತ್ತಿದ್ದರು. ನಾವು ಟಿಕೆಟ್‌ ಪಡೆದು ಎಲ್ಲಾದರೂ ತಿರುಗಲಿಕ್ಕೆ ಹೋಗಬೇಕಿತ್ತು.

    ಈ ನಂಬಿಕೆಯ ಮೇಲೆ ನಾನು ಟಿಕೆಟ್‌ ಗೆ ನಿಂತೆ. ನನ್ನ ಗೆಳೆಯ ಪ್ಲ್ಯಾನ್‌ ಬಿ ಎನ್ನುವಂತೆ ಮತ್ತೊಂದು ಟಿಕೆಟ್‌ ಕೌಂಟರ್‌ ನಲ್ಲಿದ್ದ. ಏಳೂವರೆಗೆ ಬಂದ ಟಿಕೆಟ್‌ ಕೌಂಟರ್‌ ಬರುತ್ತಿದ್ದಂತೆ ಇಡೀ ಸಾಲಿನಲ್ಲಿ ʼಡಾ. ರಾಜಕುಮಾರ್‌ ಗೆ ಜೈ, ಧ್ರುವತಾರೆಗೆ ಜೈʼ ಎಂಬ ಘೋಷಣೆ ಮೊಳಗತೊಡಗಿತು. ಅದು ಸಾಲಿನಲ್ಲಿ ನಿಂತ ಎಲ್ಲರಿಗೂ ಟಕೆಟ್‌ ಕೊಡಲಿಕ್ಕೆ ಸಮಯ ಆಯಿತು, ರೆಡಿಯಾಗಿ ಎನ್ನುವ ಸಂಕೇತವೂ ಹೌದು. ಟಿಕೆಟ್‌ ನೀಡುವಾತ ಬಂದು ಎದುರಿನ ಡಬ್ಬದಲ್ಲಿನ ನಗದು ಎಣಿಸಿ, ಲೆಕ್ಕ ಬರೆದುಕೊಂಡು, ಚಿಲ್ಲರೆ ಉಂಟಾ ಎಂದು ಪರಿಶೀಲಿಸಿದ. ಕಡಿಮೆ ಇತ್ತು. ಯಾರೋ ಒಬ್ಬನನ್ನು ಕೂಗಿ ಚಿಲ್ಲರೆ ತರಲು ಹೇಳಿದ. ಎದುರಿನ ವೆಂಕಟೇಶ್ವರ ಫೋಟೋಕ್ಕೆ ದೀಪ ಹಚ್ಚಿದ. ಚಿತ್ರ ಅಭಿಮಾನಿಗಳು “ಹೋʼ ಎಂದು ಕೂಗ ತೊಡಗಿದರು. ಕೂಗು ಜೋರಾಗುತ್ತಿದ್ದಂತೆ ಪೊಲೀಸರು ಬಂದರು ಸಮಾಧಾನ ಮಾಡಲಿಕ್ಕೆ. ನಾಲ್ಕೈದು ಮಂದಿ ಪೊಲೀಸರ ಬಹು ಆಯಾಮದ ಕೆಲಸ ಆಗ ಏನು ಇತ್ತು ಗೊತ್ತೇ. ಮೊದಲಿನದು- ಸಾಲಿನಲ್ಲಿ ಗದ್ದಲ ಆಗಬಾರದು, ಎರಡನೆಯದು- ಸಾಲಿನಲ್ಲಿ ಯಾರೂ ಮಧ್ಯೆ ನುಗ್ಗದಂತೆ ನೋಡುವುದು, ಮೂರನೆಯದು- ಸ್ವಲ್ಪ ಹೊತ್ತಿಗೇ ಶುರುವಾಗುವ ಬ್ಲ್ಯಾಕ್‌ ಟಿಕೆಟ್ಸ್‌ ಹಾವಳಿಯನ್ನು ತಡೆಯುವುದು. ಇಷ್ಟರ ಮಧ್ಯೆ ಬರುವ ವಿಐಪಿ ಗಳನ್ನು ಕಂಡು ಅವರು ಸಾಲು ಮತ್ತು ಬಿಸಿಲಿನಲ್ಲಿ ಬೆವರು ಇಳಿಸುವುದನ್ನು ತಡೆದು ಚಿತ್ರಮಂದಿರದ ಒಳಗೆ ಹೋಗುವವರೆಗೆ ಕಾಯುವುದು. ಇಷ್ಟೂ ಕೆಲಸ ನಾಲ್ಕೈದು ಮಂದಿ ಮಾಡಬೇಕಿತ್ತು.

    ಅಮಿತಾಭ್‌ ಇನ್ನು ಅಶ್ವತ್ಥಾಮ !

    ಇತ್ತ ದೀಪವನೂ ಹಚ್ಚಿದ, ಹೂವೂ ಹಾಕಿದ, ಊದಿನಕಡ್ಡಿಯೂ ಹಚ್ಚಿ ಕೈ ಮುಗಿದು ಕುಳಿತ. ಇನ್ನೂ ಚಿಲ್ಲರೆ ಬರಲಿಲ್ಲ. ಟಿಕೆಟ್‌ ಕೌಂಟರ್‌ ಬಳಿ ಇದ್ದವರು “ನಮ್ಮಲ್ಲೇ ಚಿಲ್ಲರೆ ಇದೆ, ತಗೊಳ್ಳಿ, ಟಿಕೆಟ್‌ ಕೊಡಿ ಎನ್ನತೊಡಗಿದರು. ಇನ್ನುಕೆಲವರು ಐದು ಟಿಕೆಟ್‌, ಉಳಿದದ್ದು ನೀವೇ ಇಟ್ಟುಕೊಳ್ಳಿ, ಟಿಕೆಟ್‌ ಕೊಡಿ . ಆಮೇಲೆ ಸೀಟು ಸಿಗೋಲ್ಲ ಎಂದು ಕೂಗತೊಡಗಿದರು. ಜಪ್ಪಯ್ಯ ಎನ್ನಲಿಲ್ಲ ಟಿಕೆಟಿನವ. ಅಂತೂ ಚಿಲ್ಲರೆ ಬಂದ ಕೂಡಲೇ ಟಿಕೆಟ್‌ ನೀಡಲು ಶುರು.

    ಒಬ್ಬರಿಗೆ ಎಷ್ಟು ಬೇಕಾದರರೂ ಟಿಕೆಟ್‌ (ಕ್ರಮೇಣ ಅದು ಎರಡಾಯಿತು). ಇದರ ಮಧ್ಯೆ ಪೊಲೀಸರೇ ಯಾರೋ ವಿಐಪಿಗೋ, ತಮ್ಮ ಗೆಳೆಯರಿಗೋ ಕೌಂಟರ್‌ ನ ಮಧ್ಯೆ ಕೈ ಹಾಕಿ ಟಿಕೆಟ್‌ ತೆಗೆದುಕೊಳ್ಳುವುದೂ ಆಗುತ್ತಿತ್ತು. ನಾನು ಟಿಕೆಟ್‌ ಕೌಂಟರ್‌ ಗೆ ಹತ್ತಿರವಾಗುತ್ತಿದ್ದೆ. ಇನ್ನೇನು ಟಿಕೆಟ್‌ ಸಿಕ್ಕೇ ಬಿಟ್ಟಿತು ಎನ್ನುವಾಗ ಇದ್ದಕ್ಕಿದ್ದಂತೆ ಪೊಲೀಸ್‌ ಪೇದೆಗೂ ಮತ್ತೊಮ್ಮ ಸಿನಿಮಾ ಪ್ರೇಮಿಗೂ ಗಲಾಟೆ ಶುರುವಾಯಿತು. ನೀವೇ ಹತ್ತಾರು ಟಿಕೆಟ್‌ ಹೀಗೆ ಮಧ್ಯೆ ತೆಗೆದುಕೊಂಡರೆ ಉಳಿದವರಿಗೆ ಏನು ಸಿಗುತ್ತೆ ಎನ್ನುವುದು ಅವನ ವಾದ. ಅದೂ ಸರಿಯೇ ಇತ್ತು.

    ಗದ್ದಲ ಆರಂಭವಾಗುತ್ತಿದ್ದಂತೆಯೇ ಸಾಲು ಎಲ್ಲವೂ ಹಾಳಾಗಿ ಹೋಯಿತು. ಜನರೆಲ್ಲ ಟಿಕೆಟ್‌ ಕೌಂಟರ್‌ ಎದುರು ಮಧ್ಯೆ ಮಧ್ಯೆ ಕೈ ಹಾಕಿ ನನಗೆ ಎರಡು ಕೊಡಿ ನನಗೆ ಮೂರು ಕೊಡಿ ಎಂದು ಕೂಗತೊಡಗಿದರು. ನನಗೆ ಏನು ಮಾಡುವುದು ತೋಚಲಿಲ್ಲ. ಗೆಳೆಯನನ್ನು ಕೂಗಿ ಕರೆದೆ. ಅವನು ಓಡಿ ಬಂದ. ಹೇಗಾದರೂ ಟಿಕೆಟ್‌ ಪಡೆಯಲೇಬೇಕಾಗಿತ್ತು. ಅವನು ಗುಂಪಿನ ಮಧ್ಯೆಯೇ ಒಳ ನುಗ್ಗಿದ. ನಾನೂ ಹಿಂಬಾಲಿಸಿದೆ. ನಾವು ಚಿಕ್ಕವರಲ್ಲವೇ ಆಗ. ಒಳ ನುಗ್ಗಿ ಟಿಕೆಟ್‌ ಕೌಂಟರ್‌ ಗೆ ಕೈ ಹಾಕಿದ. ಟಿಕೆಟ್‌ ಕೊಡುವವನಿಗೂ ಯಾರಿಗೆ ಟಿಕೆಟ್‌ ಕೊಡುತ್ತಿದ್ದೇನೆ ಎಂದು ನೋಡುವಷ್ಟೂ ಪುರಸೊತ್ತೂ ಇರಲಿಲ್ಲ, ಸಾಧ್ಯವೂ ಇರಲಿಲ್ಲ. ದುಡ್ಡು ಕಂಡವನೇ ಟಿಕೆಟ್‌ ಕೊಟ್ಟ, ಗೆಳೆಯ ಹಿಡಿದುಕೊಂಡು ಕೂಗುತ್ತಾ ಗುಂಪಿನಿಂದ ಹೊರಗೆ ಬರುವಷ್ಟರಲ್ಲಿ ಟಿಕೆಟ್‌ ಹರಿದು ಹೋಗಿತ್ತು. ಇನ್ನೊಂದು ಪೀಸ್‌ ಎಲ್ಲಿದೆ ಎಂದು ಗುಂಪಿನೊಳಗೆ ಹುಡುಕಲು ಹೋದ. ನೂಕು ನುಗ್ಗಲಿನಲ್ಲಿ ಸಿಕ್ಕಿ ಬಿದ್ದೇವು ಎನಿಸಿ ಕೈಯಲ್ಲಿದ್ದ ಟಿಕೆಟ್‌ ತುಂಡನ್ನೇ ಹಿಡಿದುಕೊಂಡು ಬಾಗಿಲ ಬಳಿ ಓಡಿದೆವು. ಪುಣ್ಯಕ್ಕೆ ಒಳಬಿಡುವವ ಪರಿಸ್ಥಿತಿಯನ್ನು ಊಹಿಸಿಕೊಂಡ ಎನಿಸುತ್ತದೆ. ನಮ್ಮಿಬ್ಬರ ಉತ್ಸಾಹ ನೋಡಿ “ಮುಂದಕ್ಕೆ ಕುಳಿತುಕೊಳ್ಳಿʼ ಎಂದು ಕಳುಹಿಸಿದ. ನಾವು ಹೋಗುವಷ್ಟರಲ್ಲಿ ಮುಂದಿನ ಸೀಟುಗಳೆಲ್ಲ ಭರ್ತಿ.

    ಸಿಕ್ಕಿದ್ದೇ ಅದೃಷ್ಟ ಎಂದುಕೊಂಡು ನೆಲದ ಮೇಲೇ ಕುಳಿತೆವು. ಸುಮಾರು 9 ಗಂಟೆ ಹೊತ್ತಿಗೆ ಮೊದಲ ಪ್ರದರ್ಶನ ಆರಂಭಕ್ಕೆ ಸಜ್ಜಾಯಿತು. ಬೆಲ್‌ ಹೊಡೆಯಿತು, ಸ್ಕ್ರೀನ್‌ ಗಳೆಲ್ಲ ಬಿದ್ದವು. ಕತ್ತಲಾಯಿತು. ತೆರೆಯ ಮೇಲೆ ಸೆನ್ಸಾರ್‌ ಬೋರ್ಡ್‌ ನ ಕಾಪಿ ಬಂತು. ಅದು ಏನೆಂಬುದು ತಿಳಿದಿರಲಿಲ್ಲ. ಆದರೆ ಸಿನಿಮಾ ಶುರುವಾಯಿತೆಂದುಕೊಂಡು ಹೋ ಎಂದು ಕೂಗತೊಡಗಿದರು, ಸಿಳ್ಳೆಗಳು ಸೀಳಿ ಬಂದವು. ಡಾ. ರಾಜಕುಮಾರ್‌ ಅರ್ಪಿಸುವ ಎಂದು ಬಂದಾಗಲಂತೂ ಇನ್ನೂ ಜೋರು.

    ಕನ್ನಡ ಚಿತ್ರರಂಗದ ಸ್ಥಿತಿಗತಿ ಚೆನ್ನಾಗಿಯೇ ಇದೆಯಲ್ಲ :ಶೇಷಾದ್ರಿ

    ಈ ಸಿನಿಮಾದಲ್ಲಿ ಡಾ. ರಾಜಕುಮಾರ್‌ ಎಂಟ್ರಿಯೇ ಹಾಡಿನ ಮೂಲಕ. ಹೊಸ ರೀತಿ ಎನಿಸಿತ್ತು ಆಗ. ಕಾಲೇಜಿನ ಕ್ಲಾಸಿನಲ್ಲಿ ಹುಡುಗಿಯೊಬ್ಬಳು ಪಾಠದಲ್ಲಿನ ಅಂಶಗಳನ್ನು ನೆನಪಿಸಿಕೊಳ್ಳುತ್ತಾ ಕನಸಿಗೆ ಹೋಗುತ್ತಾಳೆ. ಅಲ್ಲಿ ಡಾ. ರಾಜಕುಮಾರ್‌ “ಆ ಮೋಡ ಬಾನಲ್ಲಿʼ ಎನ್ನುತ್ತಾ ಕುಣಿದು ಬರುತ್ತಾನೆ.

    ರಾಜಕುಮಾರ್‌ ಕಾಣುತ್ತಿದ್ದಂತೆ ಸೀಟಿ, ಚಪ್ಪಾಳೆ, ಘೋಷಣೆ ಎಲ್ಲವೂ ಮುಗಿಲು ಮುಟ್ಟಿತು. ಅಷ್ಟೇ ಅಲ್ಲ. ಒಂದಿಷ್ಟು ಅಭಿಮಾನಿಗಳು ಚಿಲ್ಲರೆ ಕಾಸು ಎಸೆಯತೊಡಗಿದರು. ನಾವೆಲ್ಲ ಅದು ಹೆಕ್ಕಿಕೊಳ್ಳುವುದರಲ್ಲಿ ಬ್ಯುಸಿ. ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಬರುತ್ತಿದ್ದವು. ಈ ಬಾರಿಯೂ ಬಿಡಲಿಲ್ಲ. ಅಷ್ಟರಲ್ಲಿ ನನ್ನ ಗೆಳೆಯ, ಏನ್‌ ಮಾರಾಯ, ಅಣ್ಣಾವ್ರು ಫೈಟಿಂಗ್‌ ನಲ್ಲೇ ಬರಬೇಕಿತ್ತಪ್ಪ ಎಂದು ಸಿಂಗಲ್‌ ಲೈನ್‌ ವಿಮರ್ಶೆ ಕೊಟ್ಟ. ನನಗೇನೋ ಹಾಡು ಖುಷಿ ಎನಿಸುತ್ತಿತ್ತು. ಇರಲಿ ಬಿಡಯ್ಯಾ ಎಂದು ಸಿನಿಮಾ ನೋಡುವಂತೆ ಹೇಳಿದೆ.

    ಮಧ್ಯಂತರ ವಿರಾಮ ಬಿಟ್ಟಾಗಲೂ ನನ್ನ ಗೆಳೆಯನಿಗೆ ಶುರು ಚೆನ್ನಾಗಿಲ್ಲ ಅಂದ. ಅಯಿತು ನೋಡೋಣ, ದುಡ್ಡು ಕೊಟ್ಟಿದ್ದೇವಲ್ಲ ಎಂದೆ. ಮತ್ತೆ ಸಿನಿಮಾ ಶುರುವಾಯಿತು. ಮುಗಿಯುವಾಗ ಹೊರಗೆ ಸೂರ್ಯ ನೆತ್ತಿಗೆ ಬಂದಿದ್ದ. ನನಗೆ ಸಿನಿಮಾ ಇಷ್ಟವಾಗಿತ್ತು. ನನ್ನ ಗೆಳೆಯನಿಗೆ ಉಳಿದೆಲ್ಲವೂ ಓಕೆ, ಆರಂಭ ಚೆನ್ನಾಗಿಲ್ಲ ಎನ್ನುವ ಅವನ ಅಭಿಪ್ರಾಯ ಬದಲಾಗಲಿಲ್ಲ.

    ಧ್ರುವ ತಾರೆ ಬಹಳ ಚೆನ್ನಾಗಿದ್ದ ಸಿನಿಮಾ. ಇವತ್ತು ಐದನೇ ದಿನ, ಆರನೇ ದಿನ ಅಂತಾ ಪೋಸ್ಟರ್‌ ಹಚ್ಚುವಾಗ ನಗು ಬರುತ್ತದೆ. ಅದು ನೂರು ದಿನ ಹಲವಾರು ಚಿತ್ರಮಂದಿರಗಳಲ್ಲಿ ಓಡಿತ್ತು. ಜನ ಗುಂಪು ಗುಂಪಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ವಾರ ಪೂರ್ತಿ ಅದರ ಬಗ್ಗೆಯೇ ಚರ್ಚೆ ಮಾಡುತ್ತಿದ್ದರು. ನೋಡಿದ ಮಂದಿ ಉಳಿದವರಿಗೆ “ತಪ್ಪಿಸಿಕೊಳ್ಳಬೇಡಿ, ಒಳ್ಳೆ ಸಿನಿಮಾ” ಎಂದು ಪ್ರೊಮೋಟ್‌ ಮಾಡುತ್ತಿದ್ದರು.
    ಆಗ ಪೋಸ್ಟರ್‌ ರಿಲೀಸ್‌, ಟೀಸರ್‌ ರಿಲೀಸ್‌, ಟ್ರೇಲರ್‌ ರಿಲೀಸ್‌ ಏನೂ ಇರಲಿಲ್ಲ. ಚಿತ್ರಮಂದಿರಗಳು ಸದಾ ಭರ್ತಿಯಾಗಿರುತ್ತಿದ್ದವು. ಚಿತ್ರ ಮಂದಿರ ಭರ್ತಿ ಫಲಕ ಸಾಮಾನ್ಯವಾಗಿರುತ್ತಿತ್ತು.

    ಆ ಸಿನಿಮಾಗಳಿಗೆ ಈಗಲೂ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಶಕ್ತಿ ಇದೆ. ಚಿತ್ರಮಂದಿರಗಳು ತಯಾರಾಗಬೇಕಷ್ಟೇ !

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]