“ನನ್ನ ಸಿನಿಮಾ ಸಂಬಂಧಗಳ ಕುರಿತೇ ಹೇಳುವಂಥದ್ದು. ಈ ಸಂಬಂಧ ಹೊಸ ಜಗತ್ತಿನದ್ದು. ಸ್ನೇಹ ಅಥವಾ ಗೆಳೆತನ ಎನ್ನುವುದರ ವೈಶಿಷ್ಟ್ಯವನ್ನು ಹೇಳುವ ಪ್ರಯತ್ನ ನಡೆಸಿದ್ದೇನೆ. ನನ್ನ ಇಡೀ ಸಿನಿಮಾ ಅದನ್ನೇ ಮತ್ತೆ ಮತ್ತೆ ಹೇಳುವಂತೆ ಭಾವ ಹೊಮ್ಮುತ್ತದೆ”. ಕಾನ್ಸ್ ೨೦೨೪ ರಲ್ಲಿ ಗ್ರಾಂಡ್ ಪ್ರಿಕ್ಸ್ ಪುರಸ್ಕಾರವನ್ನು ಸ್ವೀಕರಿಸಿ ಇತಿಹಾಸ ನಿರ್ಮಿಸಿದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಲನಚಿತ್ರದ ನಿರ್ದೇಶಕಿ ಪಾಯಲ್ ಕಪಾಡಿಯಾ.
ಪ್ರಶಸ್ತಿ ಪುರಸ್ಕೃತರಾದ ಬಳಿಕ ವಿವಿಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರಗಳಲ್ಲಿನ ವಿರೋಧಾಭಾಸಗಳನ್ನು ಹಾಗೂ ಸ್ನೇಹತನದ ಅನಿವಾರ್ಯತೆಯನ್ನು, ಅದರ ಸೊಗಸನ್ನು ಪ್ರಸ್ತುತಪಡಿಸುವುದೇ ನನ್ನ ಸಿನಿಮಾದ ಉದ್ದೇಶವಾಗಿತ್ತು. ಆ ನೆಲೆಯಲ್ಲಿ ಪ್ರಯತ್ನಿಸಿದ್ದೇನೆʼ ಎಂದಿದ್ದಾರೆ ಪಾಯಲ್.
ಹುಟ್ಟಿದ ಊರು ಹಾಗೂ ಅದರೊಂದಿಗಿನ ಸಂಬಂಧಗಳನ್ನು ಬದಿಗಿಟ್ಟು ಉದ್ಯೋಗಕ್ಕೋ, ಬದುಕಿಗೋ ಎಂದು ನಗರಕ್ಕೆ ಬರುತ್ತೇವೆ. ಅಲ್ಲಿ ಸಂಬಂಧವೆಂದರೆ ಇರುವುದು ಕೇವಲ ಗೆಳೆತನವಷ್ಟೇ. ಗೆಳೆಯರು, ಗೆಳತಿಯರೇ ನಮ್ಮ ಕುಟುಂಬವಾಗಿ ಬಿಡುತ್ತದೆ. ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ. ಆ ಇಡೀ ಪ್ರಕ್ರಿಯೆಯೇ ಸುಂದರವಾದದ್ದು. ಅದರೊಳಗೆ ನಾವು ನಮ್ಮೊಳಗೆ ಹೊಸ ಸಂಬಂಧದ ಎಳೆಯನ್ನು ಬಿಡಿಸಿಕೊಳ್ಳುತ್ತೇವೆ. ಇದು ನಗರದ ವಿಶಿಷ್ಟತೆ. ಇದೇ ನನಗೆ ಅಚ್ಚರಿಯಾಗಿರುವಂಥದ್ದುʼ ಎನ್ನುತ್ತಾರೆ ಪಾಯಲ್.
Cannes2024: ಅತ್ಯುತ್ತಮ ನಟಿ ಪ್ರಶಸ್ತಿಯೊಂದಿಗೆ ಇತಿಹಾಸ ನಿರ್ಮಿಸಿದ ಅನಸೂಯಾ ಗುಪ್ತ
ಎಷ್ಟೋ ಬಾರಿ ನನಗೆ ಅನ್ನಿಸಿದ್ದಿದೆ. ಗೆಳೆತನವೆಂದರೆ ಅದು ರಕ್ತ ಸಂಬಂಧಕ್ಕೆ ಸಂಬಂಧಿಸಿದ್ದಲ್ಲ. ಇದರರ್ಥ ನನ್ನ ತಂಗಿಯೋ, ಅಕ್ಕನೋ, ತಮ್ಮನೋ, ಅಣ್ಣನೋ ಮತ್ತ್ಯಾವುದೋ ಕೌಟುಂಬಿಕ ಸಂಬಂಧದ ಎಳೆಯಿಂದ ಮೂಡಿದಂಥದ್ದಲ್ಲ. ಆದರೆ ಅದಕ್ಕಿಂತಲೂ ವಿಶಿಷ್ಟವೆನಿಸುವಂಥದ್ದು. ಕೆಲವೊಮ್ಮೆ ನಮ್ಮ ಕೌಟುಂಬಿಕ ಅಥವಾ ರಕ್ತ ಸಂಬಂಧ ಕೆಲವು ಅನಿವಾರ್ಯತೆಗಳಿಗೆ ನಮ್ಮನ್ನು ಕಟ್ಟಿ ಹಾಕಬಹುದು. ಆದರೆ ಗೆಳೆತನ ಹಾಗಲ್ಲ. ಹಲವು ಬಾರಿ ಅಂಥ ಅನಿವಾರ್ಯತೆಗಳಿಂದ ಬಿಡುಗಡೆಯನ್ನೂ ನೀಡಬಲ್ಲದು. ಹಾಗಾಗಿಯೇ ವಿಶೇಷ ಎನಿಸಿದ್ದು. ನನ್ನ ಆ ಭಾವಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ನನ್ನ ಈ ಚಲನಚಿತ್ರ ಎಂಬುದು ಪಾಯಲ್ ಅವರ ಅಭಿಪ್ರಾಯ.
ಅದೇ ರೀತಿಯಲ್ಲಿ ನಗರವೂ ನನ್ನನ್ನು ಕಾಡಿದ್ದಿದೆ. ಇಲ್ಲಿನ ವಿರೋಧಾಭಾಸಗಳೇ ನನ್ನ ಮೊದಲ ಆಕರ್ಷಣೆ. ನಾನು ಹುಟ್ಟಿದವಳು ಮುಂಬಯಿಯಲ್ಲೇ. ಆದರೆ ಸಂಪೂರ್ಣ ಅಲ್ಲಿ ಬೆಳೆಯಲಿಲ್ಲ. ಆ ಊರು, ಈ ನಗರ ಎಂದೆಲ್ಲಾ ಬೆಳೆದಿದ್ದೇನೆ. ಒಮ್ಮೆ ಇರುವುದು, ಮತ್ತೊಮ್ಮೆ ಬಿಟ್ಟು ಬೇರೆಲ್ಲೋ ಹೋಗುವುದು, ಮತ್ತೆ ಬರುವುದು..ಈ ಬಂದು ಹೋಗುವ ಪ್ರಕ್ರಿಯೆಯಲ್ಲಿ ನಗರದಲ್ಲಾಗುವ ಬದಲಾವಣೆಗಳು ಕಣ್ಣಿಗೆ ಕಾಣುತ್ತವೆ, ಗುರುತಿಸಬಹುದು. ಮುಂಬಯಿ ಸದಾ ಬೆಳೆಯುತ್ತಲೇ ಇರುವಂಥ ನಗರ. ಹಾಗೆಂದು ಉದ್ಯೋಗ ಸಿಗಬಹುದು, ಬದುಕುವುದು ಎಂದುಕೊಂಡಷ್ಟು ಸುಲಭವಲ್ಲ. ಹಣವಿದ್ದರೆ ಪರವಾಗಿಲ್ಲ, ಹಣವಿಲ್ಲದಿದ್ದರೆ ತೀರಾ ಕಷ್ಟ. ಇಡೀ ಬದುಕನ್ನು ಅಲ್ಲಿ ನಡೆಸಿದರೂ ಒಂದು ಸ್ವಂತ ಸೂರು ಹೊಂದುವ ಕನಸು ಹಲವರಿಗೆ ಈಡೇರುವುದೇ ಇಲ್ಲ. ಇವೆಲ್ಲವೂ ನಗರದ ವಿರೋಧಾಭಾಸಗಳು. ಅದೇ ನನ್ನ ಚಿತ್ರದ ಕಥಾವಸ್ತುವಾಗಬಲ್ಲವು ಎನಿಸಿತು. ಅದಕ್ಕಾಗಿ ಆಯ್ಕೆ ಮಾಡಿಕೊಂಡೆ ಎಂಬುದು ಅವರ ಮಾತಿನ ಸಾರವಾಗಿತ್ತು.
cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್ ಚಿತ್ರೋತ್ಸವ ಪ್ರಶಸ್ತಿ
ನಗರದ ಬದುಕೇ ಹಾಗೆಯೇ. ಬರುವವರನ್ನೂ ಆಯಾಚಿತವಾಗಿ ಒಳಗೆ ಸೆಳೆದುಕೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಬಿಟ್ಟು ಹೋಗುವವರಿಗೆ (ದೂರ ಹೋಗುವವರನ್ನು) ಅಷ್ಟೇ ನಿರ್ಲಿಪ್ತತೆಯಿಂದ ವಿದಾಯ ಹೇಳುತ್ತದೆ. ಇವೆಲ್ಲವೂ ನನ್ನ ಚಿತ್ರದ ಭಾಗವಾಗಿದೆ. ದಾಖಲೆಗಳಿಲ್ಲದಿದ್ದರೆ ಅಸ್ತಿತ್ವವೇ ಇಲ್ಲವೆನ್ನುವಂಥ ನಗರದ ಅಲೋಚನ ಕ್ರಮವೂ ವಿಚಿತ್ರ ಎನಿಸುವುದುಂಟು. ಅಷ್ಟೆಲ್ಲ ವರ್ಷ ನಗರದಲ್ಲಿ ಬದುಕಿಯೂ ತಾನು ಇರುವ ಸ್ಥಳ ತನ್ನದೆಂದು ಹೇಳಲು ಸರಕಾರಿ ದಾಖಲೆಗಳಿಲ್ಲದೇ ಅಸ್ತಿತ್ವವೇ ಇಲ್ಲದಂತಾಗುವುದೂ ವಿಚಿತ್ರವೇ. ಇದೂ ನನ್ನ ಕಥೆಯ ಭಾಗವಾಗಿದೆ ಎಂದರು ಪಾಯಲ್.
ಈ ಸಿನಿಮಾ ಏಕಾಏಕಿ ರೂಪುಗೊಂಡಿದ್ದಲ್ಲ,ಬಹಳ ವರ್ಷಗಳ ಹಿಂದೆಯೇ ಮೊಳೆದಿತ್ತು. ನನ್ನೊಳಗೇ ಬೆಳೆದೂ ಬೆಳೆದೂ ಈಗ ಸಿನಿಮಾವಾಗಿ ಮೂಡಿ ಬಂದಿದೆ ಎಂಬುದು ಪಾಯಲ್ ಅವರ ವಿವರಣೆ.