ಕಾನ್ ಚಿತ್ರೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. 2024 ರ ಕಾನ್ ಉತ್ಸವದಲ್ಲಿ ಬಹಳ ವಿಶೇಷ ಎಂಬಂತೆ ಭಾರತೀಯ ಹಾಗೂ ಭಾರತೀಯರ ಒಟ್ಟು ಏಳು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಮಾರ್ಚ್ 14 ರಿಂದ 25 ರವರೆಗೆ ಫ್ರಾನ್ಸ್ ನ ಕಾನ್ ನಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಈ ಬಾರಿ ಕಾನ್ ನಲ್ಲಿ ಭಾರತೀಯರು, ಅದರಲ್ಲೂ ಕನ್ನಡಿಗರ ಹವಾ ಇರಲಿದೆ.
ಈ ಉತ್ಸವವಂತೂ ಕನ್ನಡಿಗರ ಪಾಲಿಗೆ ಬಹಳ ಸ್ಮರಣೀಯವಾದುದು. ಯಾಕೆಂದರೆ ಕನ್ನಡಿಗ ಹಾಗೂ ಮೈಸೂರಿನ ಚಿದಾನಂದ ನಾಯ್ಕ್ ಅವರ ಚಲನಚಿತ್ರವೂ ಕಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಹಾಗಾಗಿ ಕನ್ನಡದ ಪರಿಮಳವೂ ಕಾನ್ ಚಿತ್ರೋತ್ಸವದ ಕಂಪನ್ನು ಹೆಚ್ಚಿಸಲಿದೆ. ಇದರೊಂದಿಗೇ ಕರ್ನಾಟಕ ಮೂಲದ ಪ್ರಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿರ್ದೇಶಿಸಿದ ಮಂಥನ್ ಚಿತ್ರ ಸಹ ರೀಸ್ಟೋರ್ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕನ್ನಡಿಗರಾದ ಗಿರೀಶ್ ಕಾರ್ನಾಡ್ ಹಾಗೂ ಹಿರಿಯ ನಟ ಅನಂತನಾಗ್ ಅಭಿನಯಿಸಿದ್ದರು.
ಒಟ್ಟೂ ಏಳು ಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ. ಪಾಯಲ್ ಕಪಾಡಿಯ ಅವರ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಲನಚಿತ್ರ ಪ್ರತಿಷ್ಠಿತ ಪಾಲ್ಮೆದೋರ್ ಪ್ರಶಸ್ತಿಗೆ ಸೆಣಸುತ್ತಿದೆ. 30 ವರ್ಷಗಳ ಬಳಿಕ ಈ ವಿಭಾಗದಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಮೊದಲ ಭಾರತೀಯ ಚಲನಚಿತ್ರವಿದು. 1994 ರಲ್ಲಿ ಷಾಜಿ ಎಸ್ ಕರುಣ್ ಅವರ ಸ್ವಾಹಂ ಮಲಯಾಳಂ ಚಿತ್ರ ಪ್ರಶಸ್ತಿಗೆ ಸೆಣಸಿತ್ತು.
ಹಾಗಾಗಿ ಇದು ಬಹಳ ಪ್ರಮುಖವಾದ ಸಂದರ್ಭ. ಪಾಯಲ್ ಕಪಾಡಿಯಾ ಸಹ ಕಾನ್ ನಲ್ಲಿ ಭಾಗವಹಿಸುತ್ತಿರುವುದು ಎರಡನೇ ಬಾರಿ. ಈ ಹಿಂದೆ ಅವರ ಕಿರುಚಿತ್ರವೊಂದು ಕಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಈ ಬಾರಿ ಪ್ರಶಸ್ತಿಗೆ ನಿರೀಕ್ಷೆಯನ್ನು ಮೂಡಿಸಿದ್ದಾರೆ ಪಾಯಲ್ ಕಪಾಡಿಯ.
ಇವುಗಳನ್ನೂ ಓದಿ : ಕಾನ್ ಸಿನಿಮೋತ್ಸವದಲ್ಲಿ ಭಾರತೀಯರ ಚಿತ್ರಗಳು
ಸಂಧ್ಯಾ ಸೂರಿಯವರ ಸಂತೋಷ್ ಎಂಬ ಚಲನಚಿತ್ರವೂ ಅನ್ ಸರ್ಟೇನ್ ರಿಗಾರ್ಡ್ ಎಂಬ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ. ಸಾಕ್ಷ್ಯಚಿತ್ರ ಹಾಗೂ ಕಿರುಚಿತ್ರಗಳನ್ನು ಸಾಕಷ್ಟು ಮಾಡಿರುವ ಸಂಧ್ಯಾ ಸೂರಿಯವರು ಚಲನಚಿತ್ರ ರಂಗದಲ್ಲಿ ವಿಭಿನ್ನವಾದ ಸಾಧನೆ ಮಾಡಿದ್ದಾರೆ.
ಮತ್ತೊಂದು ಚಲನಚಿತ್ರ ಡೈರೆಕ್ಟರ್ಸ್ ಫೋರ್ಟ್ ನೈಟ್ ವಿಭಾಗದಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಕರಣ್ ಕಂಧಾರಿ ಎಂಬವರ ಚಲನಚಿತ್ರ ʼಸಿಸ್ಟರ್ ಮಿಡ್ ನೈಟ್ʼ. ಎಸಿಐಡಿ ವಿಭಾಗದಲ್ಲಿ ಪ್ರದರ್ಶಿತಗೊಳ್ಳುತ್ತಿರುವ ಮತ್ತೊಂದು ಚಲನಚಿತ್ರ ಇನ್ ರೀಟ್ರೀಟ್. ಮೈಸಾನ್ ಅಲಿ ಇದರ ನಿರ್ದೇಶಕರು.
ಬಲ್ಗೇರಿಯನ್ ನಿರ್ದೇಶಕ ಕೊಂಟಾಸ್ಟಿನ್ ಬಜನೋವ್ ನಿರ್ದೇಶಿಸಿದ ಚಲನಚಿತ್ರ ದಿ ಶೇಮ್ ಲೆಸ್ ಸಹ ಇಲ್ಲಿ ಪ್ರದರ್ಶಿತವಾಗುತ್ತಿದೆ. ಈ ಚಿತ್ರದಲ್ಲಿ ನಟಿಸಿರುವುದು ಭಾರತದ ನಟಿಯರಾದ ಒಮರ್ ಶೆಟ್ಟಿ ಹಾಗೂ ಅನಸೂಯಾ ಸೇನ್ ಗುಪ್ತಾ. ಹಾಗಾಗಿ ಇದೂ ಭಾರತೀಯರ ಚಿತ್ರ.
ಜಪಾನಿ ನಿರ್ದೇಶಕ ಅಕಿರಾ ಕುರಸೋವಾ ರ ಬಗ್ಗೆ ಇಲ್ಲಿ ಓದಿ
ಇದರೊಂದಿಗೆ ಶ್ಯಾಮ್ ಬೆನಗಲ್ ರ ಮಂಥನ್ ಪ್ರದರ್ಶಿತವಾಗುತ್ತಿದೆ. 2026 ಕ್ಕೆ ಆ ಚಿತ್ರ ನಿರ್ಮಾಣಗೊಂಡು 50 ವರ್ಷಗಳು ಆಗಲಿವೆ.
ಕೊನೆಯದಾಗಿ ಮೈಸೂರಿನ ಚಿದಾನಂದ ನಾಯ್ಕ್ ಅವರ “ಸನ್ ಫ್ಲವರ್ ವರ್ ದಿ ಫರ್ಸ್ಟ್ ಟು ನೋʼ ಚಲನಚಿತ್ರವು ಸಿನಿಮಾ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಈ ಬಾರಿ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರಗಳು ಸದ್ದು ಮಾಡಲಿದ್ದು, ಪ್ರತಿಷ್ಠಿತ ಪಾಲ್ಮೆದೋರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.