ಈ ಹಬ್ಬಗಳಲ್ಲಿ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರವನ್ನು ನೋಡುವ ಕಾಲ ಮುಗಿಯಿತು ಎಂದೆನ್ನಿಸುತ್ತದೆ. ಈ ಹಿಂದೆ ಇಂಥದೊಂದು ಅಲೆ ಇತ್ತು. ಹಾಗಾಗಿ ಹೊಸ ಸಿನಿಮಾಗಳು, ಅದರಲ್ಲೂ ಹೀರೋ ಸಿನಿಮಾಗಳೆಲ್ಲ ವರ್ಷದ ಮೂರ್ನಾಲ್ಕು ಪ್ರಮುಖ ಹಬ್ಬಗಳ ಸುತ್ತಮುತ್ತ ಬಿಡುಗಡೆಯಾಗುತ್ತಿತ್ತು.
ಈಗ ಒಟಿಟಿ, ಟಿವಿ, ಸಾಮಾಜಿಕ ಮಾಧ್ಯಮಗಳು ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಮಾತ್ರ ಎಂಬಂಥ ವಾತಾವರಣ ನಿರ್ಮಾಣವಾಗಿರುವುದರಿಂದ ಜನರೂ ಚಿತ್ರಮಂದಿರದತ್ತ ಪಾದಯಾತ್ರೆ ಬೆಳೆಸುವುದನ್ನು ಸ್ಥಗಿತಗೊಳಿಸಿದ್ದಾರೆ. ಈ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲಿ ಬಹುಪಾಲು ಸಿನಿಮಾ ಮಂದಿಯದ್ದೇ ಕೊಡುಗೆ ಇದೆ. ಜೊತೆಗೆ ಚಿತ್ರಮಂದಿರಕ್ಕೆ ಹೋಗಿ ನೋಡುವಂಥ ಉತ್ಸಾಹ, ಹಬ್ಬ ದಿನಗಳ ಆಚರಣೆಯ ಕ್ರಮ ಹಾಗೂ ರಜೆದಿನಗಳೆಂದರ ಪ್ರವಾಸದ್ದು- ಎಂದಿನ ಜಂಜಡಗಳಿಂದ ದೂರವಿದ್ದು ನಿಟ್ಟುಸಿರು ಬಿಡುವಂಥದ್ದು ಎಂಬ ವ್ಯಾಖ್ಯೆಯೂ ಬಂದಿರುವ ಕಾರಣ ಕುರಿತು ಮತ್ತೊಮ್ಮೆ ಎಂದಾದರೂ ಚರ್ಚಿಸೋಣ.
ಮುಂದಿನ ವಾರ ಗಣೇಶ ಚತುರ್ಥಿ. ಮತ್ತೆಇಪ್ಪತ್ತು ದಿನಗಳಲ್ಲಿ ನಾಡಹಬ್ಬ ದಸರಾ ಹತ್ತಿರಕ್ಕೆ ಬರುತ್ತದೆ. ಅದಾದ 25 ದಿನಗಳಲ್ಲಿ ದೀಪಾವಳಿ ಬಂದು ರಾರಾಜಿಸುತ್ತದೆ. ಹಾಗಾಗಿ ಮೂರು ತಿಂಗಳು ಹಬ್ಬಗಳದ್ದೇ ವಾತಾವರಣ. ಇದಕ್ಕೇ ಏನೋ ಅಳೆದೂ ತೂಗಿ ನಟ ಶಿವರಾಜಕುಮಾರ್‌ರ ಭೈರತಿ ರಣಗಲ್ ಸಿನಿಮಾದ ಬಿಡುಗಡೆಯ ದಿನಾಂಕ ಪ್ರಕಟಿಸಿದೆ. ದೀಪಾವಳಿ ಮುಗಿದ ಹತ್ತು ದಿನಕ್ಕೆ ಅಂದರೆ ನವೆಂಬರ್ 15 ರಂದು ಈ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದಕ್ಕಾಗಿ ಭರದ ಸಿದ್ಧತೆಯೂ ಆರಂಭವಾಗಿದೆ.
ಸದ್ಯದ ಲೆಕ್ಕದಲ್ಲಿ ಭೈರತಿ ರಣಗಲ್ ಸ್ವಲ್ಪ ಕುತೂಹಲ ಮೂಡಿಸಿರುವ ಸಿನಿಮಾ. ಒಂದು ಲೆಕ್ಕದಲ್ಲಿ ಸ್ವಾತಂತ್ರ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದರೆ ಅ ದಿನ ಬಿಡುಗಡೆಯಾಗಿದ್ದರೇ ಇದು ಸೂಪರ್ ಹಿಟ್ ಆಗಿರುತ್ತಿತ್ತೇನೋ? ಅಂದು ಬಿಡುಗಡೆಯಾದ ಎರಡೂ ಸಿನಿಮಾಗಳೂ (ನಟ ಗಣೇಶರ ಕೃಷ್ಣ ಪ್ರಣಯ ಸಖಿ ಹಾಗೂ ನಟ ವಿಜಯ್ ಅವರ ಭೀಮ) ಯಶಸ್ಸು ಕಂಡಿವೆ ಎಂಬುದು ಚಿತ್ರನಗರಿಯವರ ಮಾತು.
ಎರಡು ಅನುಕೂಲಗಳೂ ಇವೆ ಈ ನಿರ್ಧಾರದಲ್ಲಿ ಅಂದುಕೊಳ್ಳೋಣ. ಭೈರತಿ ರಣಗಲ್ ಒಂದುವೇಳೆ ಅಂದೇ ಬಿಡುಗಡೆಯಾಗಿದ್ದರೆ ಉಳಿದ ಎರಡೂ ಸಿನಿಮಾಗಳಿಗೂ ಜನರು ಕಡಿಮೆಯಾಗುತ್ತಿದ್ದರೇನೋ? ಆಗ ಕನ್ನಡ ಚಿತ್ರರಂಘದ ಯಶಸ್ಸಿನ ಪಟ್ಟಿಯಲ್ಲಿ ಸಿನಿಮಾಗಳ ಸಂಖ್ಯೆ ಕಡಿಮೆಯಾಗುವ ಸಂಭವವಿತ್ತು ಎನ್ನೋಣ.
ಅದೇ ರೀತಿಯಲ್ಲಿ ಎರಡೂ ಸಿನಿಮಾಗಳಿಗೆ ಪ್ರೇಕ್ಷಕರು ನುಗ್ಗಿ (ಇಬ್ಬರದ್ದೂ ಬಹಳ ದಿನಗಳಾಗಿತ್ತು ಸಿನಿಮಾ ಬಂದು) ಭೈರತಿ ರಣಗಲ್ ಗೆ ಸ್ವಲ್ಪ ಪ್ರೇಕ್ಷಕರು ಕಡಿಮೆಯಾಗಿದ್ದಿದ್ದರೆ? ಈ ಚಿತ್ರತಂಡದ ಉತ್ಸಾಹವನ್ನೂ ಕುಗ್ಗಿಸಿತ್ತು. ಹಾಗೆ ನೋಡುವುದಾದರೆ ಇದು ಸುರಕ್ಷಿತವಾದ ಆಟ ಎನ್ನಬಹುದು.
ಇದೂ ಇಷ್ಟವಾಗಬಹುದು, ಓದಿ : Ibbani:ಕಥೆಯು ಹಳೆಯದಾದರೇನಂತೆ, ನಿರೂಪಣೆ ನವ ನವೀನವಂತೆ!
ಈ ಸಿನಿಮಾವನ್ನು ನಿರ್ಮಿಸಿರುವವರು ಗೀತಾ ಶಿವರಾಜಕುಮಾರ್. ನಿರ್ದೇಶಿಸಿರುವವರು ನರ್ತನ್. ಗೀತಾ ಶಿವರಾಜಕುಮಾರ್ ರ ಗೀತಾ ಪಿಕ್ಚರ್ಸ್ ನ ಎರಡನೇ ಚಿತ್ರವಿದು. ಈ ಹಿಂದೆ ವೇದ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಭೈರತಿ ರಣಗಲ್ ಮಫ್ತಿ ಚಿತ್ರದ ಪ್ರಥಮ ಭಾಗ ಎನ್ನಲಾಗಿದೆ.
ತಾರಾಗಣದಲ್ಲಿ ಶಿವರಾಜಕುಮಾರ್ ಜೊತೆ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಬಾಬು ಹಿರಣ್ಣಯ್ಯ ಮತ್ತಿತರಿದ್ದಾರೆ. ಸಂಗೀತ ರವಿ ಬಸ್ರೂರ್ ರದ್ದು. ಛಾಯಾಗ್ರಹಣದ ಹೊಣೆ ನವೀನ್ ಕುಮಾರ್ ಅವರಿಗೆ.
ಇದೂ ಇಷ್ಟವಾಗಬಹುದು, ಓದಿ : New Movie: ಅನ್ನದಾತನ ಹೆಸರಿನಲ್ಲಲ್ಲ; ಬದುಕಿನ ಬಗೆಗಿನ ಸಿನಿಮಾವಂತೆ ಇದು !
ನೋಡುವ, ದೀಪಾವಳಿ ಮುಗಿದು ತುಳಸಿ ಪೂಜೆಯೂ ಮುಗಿದ ಎರಡು ದಿನಗಳಿಗೆ ಭೈರತಿ ರಣಗಲ್ ಸಿನಿಮಾ ಮಂದಿರಗಳಲ್ಲಿ ಲಭ್ಯವಾಗಲಿದೆ. ಕಾರ್ತಿಕ ಮಾಸ ಡಿಸೆಂಬರ್ 1 ನೇ ತಾರೀಖಿನವರೆಗೂ ಇರುತ್ತದೆ. ಅಂದರೆ ದೀಪೋತ್ಸವ, ಪಟಾಕಿ ಸದ್ದು ಎಲ್ಲ ಇದ್ದೇ ಇರುತ್ತದೆ. ಭೈರತಿ ರಣಗಲ್ ಪಟಾಕಿ ಸದ್ದು ಮಾಡುತ್ತಾ ಇಲ್ಲವೋ ಕಾದುನೋಡೋಣ.