ಮಲಯಾಳಂ ಚಿತ್ರರಂಗ ಕಂಡಾಗಲೆಲ್ಲ ಖುಷಿಯಾಗುತ್ತಿದ್ದ ಒಂದು ಸಂಗತಿಯೆಂದರೆ ಅಲ್ಲಿರುವ ಸಿನಿಮಾ ಬಗೆಗಿನ ಪ್ರೀತಿ ಮತ್ತು ಜಾಗೃತಿ. ಸಿನಿ ಪ್ರೇಕ್ಷಕನಿಂದ ಹಿಡಿದು ಪ್ರಮುಖ ಕಲಾವಿದರು, ತಂತ್ರಜ್ಞರು ಎಲ್ಲರಿಗೂ ಸಿನಿಮಾದ ಮೇಲೆ ಅದಮ್ಯವಾದ ಪ್ರೀತಿ ಇದೆ. ಬಹುತೇಕರೆಲ್ಲ ಸಿನಿಮಾದ ಹುಚ್ಚಿನಿಂದಲೇ ಸಿನಿಮಾ ರಂಗಕ್ಕೆ ಬಂದದ್ದು. ಈ ಪ್ರಮಾಣ ಬೇರೆ ಭಾಷೆಗಳಲ್ಲಿ ಇಲ್ಲವೆಂದಲ್ಲ, ಇತ್ತೀಚಿನ ಯುವ ಸಮುದಾಯ ಹೆಚ್ಚಾಗಿ ಸಿನಿಮಾ ಕ್ಷೇತ್ರದ ಬಗೆಗಿನ ಬೆರಗು ಹಾಗೂ ಪ್ರೀತಿಯಿಂದ ಬರತೊಡಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಯುವಜನರ ಸದ್ದು ಜೋರಾಗಿದೆ.
ಆದರೂ ಇವೆಲ್ಲದರ ಮಧ್ಯೆ ಸುಮ್ಮನೆ ನಮ್ಮಪ್ಪ ಶ್ರೀಮಂತ. ಅವನಲ್ಲಿ ದುಡ್ಡಿದೆ ನಾನು ಹೀರೋ ಆಗಬೇಕು ಅಂತಲೋ, ನನ್ನಲ್ಲಿ ಕಪ್ಪು ಹಣವಿದೆ. ಅದನ್ನು ಬಿಳಿ ಮಾಡಬೇಕು ಎಂದು ನಾನೂ ಪ್ರೊಡ್ಯೂಷರ್ ಆಗ್ತೀನಿ ಅಂತಲೋ, ನನ್ನ ಮಗ ಅಥವಾ ಮಗಳು ಹೀರೋ/ಹೀರೋಯಿನ್ ಮೆಟೇರಿಯಲ್. ಹಾಗಾಗಿ ಲಾಂಚ್ ಮಾಡ್ತೀನಿ ಎಂಬ ಹುಂಬ ಪ್ರೊಡ್ಯೂಸರ್ ಗಳು ನಮ್ಮಲ್ಲಿ ಹೋಲಿಸಿದರೆ ಮಲಯಾಳಂದಲ್ಲಿ ಕಡಿಮೆ ಇರಬಹುದು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ನಟನೆ ಎನ್ನುವುದಕ್ಕಿಂತ ಹಣ, ಪ್ರಭಾವ ಎಲ್ಲವೂ ಯಾರನ್ನೋ ಎಲ್ಲಿಯೋ ತಂದು ನಿಲ್ಲಿಸುತ್ತದೆ.
ಇದೂ ಇಷ್ಟವಾಗಬಹುದು, ಓದಿ :Ibbani:ಕಥೆಯು ಹಳೆಯದಾದರೇನಂತೆ, ನಿರೂಪಣೆ ನವ ನವೀನವಂತೆ!
ವಾಸ್ತವ ಏನೆಂದರೆ ಯಾರೇ ಆಗಲಿ, ಯಾರನ್ನೇ ಒಂದು ದೂರದವರೆಗೆ ತಂದು ನಿಲ್ಲಿಸಬಹುದು. ಆದರೆ ಮುಂದೆ ನಡೆಯಬೇಕೆಂದರೆ ಅವನಲ್ಲಿ ಸಾಮರ್ಥ್ಯ ಇಲ್ಲದಿದ್ದರೆ ಒಂದ್ಹೆಜ್ಜೆಯನ್ನೂ ಮುಂದಿಡಲಾಗುವುದಿಲ್ಲ. ಇದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಈ ಬ್ರ್ಯಾಂಡ್ ಗಳ ಯುಗ ಮುಗಿಯುತ್ತಾ ಬಂದಿದೆ, ಈಗ ಏನಿದ್ದರೂ ಪ್ರೊಡಕ್ಟ್ ಗಳ ಯುಗ.
ಇಲ್ಲಿ ಒಂದು ಒಳ್ಳೆಯ ಸಿನಿಮಾ ಕೃತಿಯನ್ನು ನಾನು ಪ್ರೊಡಕ್ಟ್ ಎಂದುಕೊಳ್ಳಬಹುದು. ಇದೊಂದು ಹೋಲಿಕಯಷ್ಟೇ. ಒಂದು ಸೃಜನಶೀಲ ಕೃತಿ ಎಂದಿಗೂ ಸ್ಥಾವರವಲ್ಲ, ಜಂಗಮ.
ಮಲಯಾಳಂ ಇಷ್ಟವಾಗುತ್ತಿದ್ದುದೂ ಇದೇ ಕಾರಣಕ್ಕೆ. ಅಲ್ಲಿ ಒಳ್ಳೆಯ ಸಿನಿಮಾಗಳಿಗೆ ಜನ ಮರ್ಯಾದೆ ಕೊಡುತ್ತಾರೆ. ಆ ಒಳ್ಳೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ನಟರೂ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಇದೂ ಸುಳ್ಳಲ್ಲ. ಕಲಾತ್ಮಕ, ವಾಣಿಜ್ಯಾತ್ಮಕ ಎನ್ನುವ ಸುಳಿಯೊಳಗೆ ಬಿದ್ದು ನಟರು ಒದ್ದಾಡುವ ಬಗೆ ನಮ್ಮಲ್ಲಿ ಮಾತ್ರ ಎನಿಸುತ್ತದೆ. ಈ ಸಮಸ್ಯೆ ಮಲಯಾಳದಲ್ಲಿಲ್ಲ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಅಲ್ಲಿ ಕಥೆ ಚೆನ್ನಾಗಿದೆ ಎಂದರೆ ಮಹಾ ನಟರೂ ನಟಿಸಲು ಒಪ್ಪುತ್ತಾರೆ. ಇದಕ್ಕೆ 2022 ರ ಮಮ್ಮುಟ್ಟಿ ಅಭಿನಯದ ಕಾದಲ್ – ದಿ ಕೋರ್ ಸಿನಿಮಾವೇ ಸಾಕ್ಷಿ. ಅದು ಸಲಿಂಗ ಕಾಮಿಯ ಕಥೆ. ಆ ಪಾತ್ರವನ್ನು ಅಭಿನಯಿಸಿದ್ದು ಮಮ್ಮುಟ್ಟಿ. ಅವಳ ಪತ್ನಿಯಾಗಿ ನಟಿಸಿದ್ದು ಜ್ಯೋತಿಕಾ. ಈ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರಕಿದೆ.
ಇದೂ ಇಷ್ಟವಾಗಬಹುದು, ಓದಿ : New Movies:ಸಂಜು ವೆಡ್ಸ್ ಗೀತಾ: ಭಾಗ 2 ಬಿಡುಗಡೆಗೆ ಯಾವಾಗ ಮುಹೂರ್ತ?
ಇವೆಲ್ಲ ಸರಿ. ಆದರೆ ಇಷ್ಟೊಂದು ಪ್ರಜ್ಞಾವಂತ, ಬುದ್ಧಿಜೀವಿಗಳ ಚಿತ್ರರಂಗದಲ್ಲಿ ನ್ಯಾ. ಹೇಮಾ ಅವರ ಸಮಿತಿಯ ವರದಿ ಇಡೀ ಚಿತ್ರರಂಗವನ್ನು ತಲೆ ತಗ್ಗಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಉಳಿದ ಎಲ್ಲ ಚಿತ್ರರಂಗದಲ್ಲೂ ಅಪಾಯದ ಕರೆಗಂಟೆಯನ್ನುಒತ್ತಿದೆ. ಈ ಅಧ್ಯಾಯ ಎಲ್ಲ ಚಿತ್ರರಂಗಗಳ ವರ್ಣರಂಜಿತ ಪುಟಗಳಲ್ಲಿನ ಕರಾಳತೆಯ ಸಾಧ್ಯತೆಯನ್ನು ಎತ್ತಿ ತೋರಿಸಿದೆ. ದೊಡ್ಡ ಜನರ ವಿಕೃತತೆಯನ್ನೂ ಪ್ರದರ್ಶಿಸಿದೆ.
ಈಗಾಗಲೇ ಬಂಗಾಳಿ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳದ ಕೂಗು ಕೇಳಿಬರತೊಡಗಿದೆ. ಕನ್ನಡ ಚಿತ್ರರಂಗದಲ್ಲೂ 2018 ರಲ್ಲೀ ಇಂಥದ್ದೇ ಒಂದು ಆರೋಪ ಕೇಳಿಬಂದಿತ್ತು. ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಎಲ್ಲರೂ ವಿವಿಧ ಪ್ರಕರಣಗಳಲ್ಲಿ ಆರೋಪಕ್ಕೆ ಗುರಿಯಾಗಿದ್ದರು.
ಆಗ ಆಂತರಿಕ ದೂರು ಸಮಿತಿ ರಚಿಸಬೇಕೆಂಬ ಆಲೋಚನೆ ಇಂದಿಗೂ ಆಲೋಚನೆಯ ಹಂತದಲ್ಲೇ ಉಳಿದಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಈ ದಿಸೆಯಲ್ಲಿ ಪ್ರಯಾಣ ಆರಂಭಿಸಬೇಕಿತ್ತು, ಇನ್ನೂ ಬಸ್ಸಿನ ವೇಳಾಪಟ್ಟಿಯನ್ನು ಹುಡುಕುತ್ತಿದೆ !
ಪ್ರಸ್ತುತ 17 ಮಂದಿ ನಟರು, ನಿರ್ದೇಶಕರು ಸೇರಿದಂತೆ ವಿವಿಧ ಮಂದಿಯ ಮೇಲೆ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಹಲವಾರು ಮಂದಿಯ ವಿರುದ್ಧ ಈಗ (ಸಮಿತಿ ವರದಿ ಬಳಿಕ) ದೂರು ಸಹ ದಾಖಲಾಗಿದೆ. ರಾಜ್ಯ ಸರಕಾರವೂ ಈ ಪ್ರಕರಣಗಳಿಗೆ ಸಂಬಂಧಿಸಿ ಎಸ್ ಐ ಟಿ ಯನ್ನೂ ರಚಿಸಿದೆ. ಅಲ್ಲಿಯೂ ದೂರುಗಳು ದಾಖಲಾಗುತ್ತಿವೆ.
ಇದೂ ಇಷ್ಟವಾಗಬಹುದು, ಓದಿ :Rishab Shetty:ರಿಷಭ್ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ
ಇವೆಲ್ಲವನ್ನೂ ಕಂಡಾಗ ಅಂಥವರ ಬಗ್ಗೆ ಒಂದು ಹೇಸಿಗೆಯೇ ಹುಟ್ಟುತ್ತದೆ. ಯಾಕೋ, ಮಲಯಾಳಂ ಚಿತ್ರರಂಗದ ಬಗ್ಗೆಯೂ ಅಂಥದ್ದೇ ಒಂದು ಹೇಸಿಗೆ ಹುಟ್ಟಲಾರಂಭಿಸಿದೆ. ಬಹಳ ಪ್ರಗತಿಪರ ಎಂದು ಹೇಳಿಕೊಳ್ಳುವ ರಾಜ್ಯದಲ್ಲೇ ಇಂಥದೊಂದು ಅಧ್ಯಾಯವಿದ್ದರೆ ಮನಸ್ಸಿಗೆ ಬರೀ ಬೇಸರವಾಗುವುದಿಲ್ಲ, ನೋವಾಗುತ್ತದೆ. ಪ್ರತಿಭಾವಂತರು, ಪ್ರಭಾವಿಗಳೆಲ್ಲ ಸಿನಿಮಾ ರಂಗವನ್ನು ತಮ್ಮ ʼಅಗತ್ಯʼ ಗಳಿಗೆ ಬಳಸಲು ಆರಂಭಿಸಿದರೆ ಏನಾಗಬಹುದು ಎಂಬುದಕ್ಕೆ ಈಗ ಮಲಯಾಳಂ ಚಿತ್ರರಂಗ ಉದಾಹರಣೆಯಾಗಿದೆ.
ಆ ಪಂಥೀಯರು, ಈ ಪಂಥೀಯರು, ಬುದ್ಧಿಜೀವಿಗಳು, ಪ್ರಗತಿಪರರು ಎಂದು ಅಚಾರದಲ್ಲಿ ಇಲ್ಲದವರ ಗುಂಪೂ ಬಹಳ ದೊಡ್ವದಿದೆ. ಇಂಥವರದ್ದು ಹಿಂದೆ ಕೆಲವು ಸೃಜನಶೀಲ ಹರಿಕಾರರ ಲಾಲಸೆಗಳೆಲ್ಲ ಬಹಿರಂಗಗೊಂಡಾಗ ʼಕೃತಿಯೇ ಬೇರೆ, ಕೃತಿಕಾರನೇ ಬೇರೆ. ನಾವು ಅವನನ್ನು ಆರಾಧಿಸಬೇಕಿಲ್ಲ, ಅವನ ಸಾಹಿತ್ಯವನ್ನು ಆರಾಧಿಸಬೇಕುʼ ಎಂದು ಹೇಳುತ್ತಾರೆ.
ಹಾಗಾದರೆ ಆವರ ಕೆಟ್ಟ ಕೆಲಸವನ್ನು ರಸ್ತೆಯಲ್ಲಿ ಪ್ರತಿಭಟಿಸಿ ಎಂದರೆ, ʼಅವನೂ ಒಬ್ಬ ವ್ಯಕ್ತಿ. ದೋಷಗಳು ಇರಬಹುದು. ಆದರೆ ಅವನ ಸಾಹಿತ್ಯ ದೊಡ್ಡದುʼ ಎಂದು ತಲೆ ಮರೆಸಿಕೊಂಡಿದ್ದರು ಮತ್ತು ತಲೆಮರೆಸಿಕೊಳ್ಳುತ್ತಿದ್ದರು ಹಾಗೂ ತಲೆಮರೆಸಿ ಕೊಳ್ಳುತ್ತಿದ್ದಾರೆ ಇಂದಿಗೂ. ಸಮಾಜವನ್ನು ಇಕ್ಕಟ್ಟಿಗೆ, ಗೊಂದಲಕ್ಕೆ ಸಿಲುಕಿಸುವ ಆಪರಾಧ ಕೃತ್ಯ.ಅ ಮೂಲಕ ಒಂದು ಸಂಗತಿ ತಾರ್ಕಿಕ ಅಂತ್ಯಕ್ಕೆ ಹೋಗದಂತೆ ತಡೆದು, ಸಂಬಂಧಪಟ್ಟ ಅರೋಪಿಗಳ ಕೃಪಾಕಟಾಕ್ಷವನ್ನೂ ಪಡೆಯುತ್ತಾರೆ, ಇತ್ತ ಸ್ವಾತಂತ್ರ್ಯ ಪ್ರತಿಪಾದಕರಂತೆಯೂ ಬಿಂಬಿಸಿಕೊಳ್ಳುತ್ತಿರುತ್ತಾರೆ.
ಇದು ಹಲವು ಸೃಜನಶೀಲ ರಂಗಗಳಲ್ಲಿ ಇರುವ ಸಾಮಾನ್ಯ ಸಂಗತಿ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಈಗ ನಮಗೆ ಕೃತಿಯೂ ಚೆನ್ಸಾಗಿರಬೇಕು, ಕೃತಿಕಾರನೂ ಒಳ್ಳೆಯವನಾಗಿರಬೇಕು. ಈ ಪರಂಪರೆಗೆ ಹೆಚ್ಚು ಮೌಲ್ಯವೂ ಬರಬೇಕು. ನೈತಿಕತೆಯೇ ಇಲ್ಲದ ಯಾವುದೇ ಸೃಜನಶೀಲ ಪ್ರಯತ್ನಗಳಿಗೆ ಅರ್ಥವೇನು? ಇದಕ್ಕೆಲ್ಲ ಕೊನೆ ಹೇಳುವ ಕಾಲವಿದು.
ಈ ಮಾತು ಚಿತ್ರರಂಗಕ್ಕೂ ಅನ್ವಯವಾಗುತ್ತದೆ. ಹೆಚ್ಚೆಚ್ಚು ಆಧುನಿಕ ಕಥಾವಸ್ತುಗಳ ಬಗ್ಗೆ ಎಲ್ಲ ಸಿನಿಮಾ ಮಾಡುತ್ತಾ, ಆ ಮೂಲಕ ಚರ್ಚೆ ಮಾಡುತ್ತಾ, ಪರದೆಯ ಮೇಲೆ ಆಧುನಿಕ ಆಲೋಚನೆಗಳನ್ನು ಹರಿಬಿಡುತ್ತಲೇ ಎಲ್ಲ ಬಗೆಯ ಅನಾಚಾರಗಳನ್ನೂ ನಡೆಸುತ್ತಿದ್ದರೆ ಈ ದ್ವಂದ್ವಕ್ಕೆ ಕೊನೆ ಹೇಳಲೇಬೇಕು. ಮಲಯಾಳಂ ಚಿತ್ರರಂಗಕ್ಕೆ ಆ ದಿನ ಹತ್ತಿರವಾಗಿದೆ.
ಇದೂ ಇಷ್ಟವಾಗಬಹುದು, ಓದಿ : New Movie: ಅನ್ನದಾತನ ಹೆಸರಿನಲ್ಲಲ್ಲ; ಬದುಕಿನ ಬಗೆಗಿನ ಸಿನಿಮಾವಂತೆ ಇದು !
ನಟ ಮೋಹನಲಾಲ್ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್ (ಎಎಂಎಂಎ) ನ ಅಧ್ಯಕ್ಷರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಎಲ್ಲ ಪದಾಧಿಕಾರಿಗಳೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರಂತೆ. ಆದರೆ ಚಿತ್ರರಂಗ ಮತ್ತು ಕಲಾವಿದರು ಸಂಕಷ್ಟದಲ್ಲಿರುವಾಗ ಹೊರಬರುವ ದಾರಿಯನ್ನು ಹುಡುಕುವುದರಲ್ಲಿ ನಿರತವಾಗಬೇಕಾದ ಆಡಳಿತ ಮಂಡಳಿ ರಾಜೀನಾಮೆ ನೀಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿತೇ ಎಂಬ ಪ್ರಶ್ನೆಯೂ ಈಗ ಚರ್ಚಾ ವೇದಿಕೆಯ ಪಾಲಾಗಿದೆ.
ಇನ್ನು ಮುಂದೆ ಏನಾಗುತ್ತದೋ ಕಾದು ನೋಡಬೇಕು. ಸದ್ಯಕ್ಕಂತೂ ಮಲಯಾಳಂ ಚಿತ್ರರಂಗ ಈ ಪ್ರಕರಣದಿಂದ ತನ್ನ ಮುಖದ ಮೇಲೆಲ್ಲಕೆಸರು ಬಳಿದುಕೊಂಡಿದೆ. ಅದಂತೂ ಸತ್ಯ.
ಇನ್ನು ಬಾಲಿವುಡ್ ನಲ್ಲೂ ಇಂಥದೊಂದು ದೊಡ್ಡ ಬಲೂನಿದೆ. ಅದು ಯಾವಾಗ ಒಡೆಯುತ್ತದೋ ನೋಡಬೇಕು. ಈಗಾಗಲೇ ಹಲವು ಮಂದಿ ಬಲೂನಿಗೆ ಚುಚ್ಚಿ ಒಡೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ, ಅವರ ಸೂಜಿಗೆ ಮೊನೆಯಿದೆ, ಆದರೆ ಚೂಪಾಗಿಲ್ಲವೇನೋ? ಅದಕ್ಕೀಗ ದಬ್ಬಣ ತೆಗೆದುಕೊಂಡು ಚುಚ್ಚಬೇಕಿದೆ.
ಮಲಯಾಳಂ ಚಿತ್ರರಂಗ ದೊಡ್ಡ ಹೆಸರಾಗಿದ್ದು ಈಗ ಮುಖಕೆ ಕೆಸರು ಬಳಿದುಕೊಂಡಿತಲ್ಲ. ಏನು ದಾಹ, ಯಾವ ಮೋಹ ತಿಳಿಯದಾಗಿದೆ. ಉಳಿದವುಗಳ ಕಥೆ ಇನ್ನೂ ತಿಳಿಯಬೇಕಿದೆ !