Sunday, December 22, 2024
spot_img
More

    Latest Posts

    ದ ಸಿಕ್ಸ್ತ್ ಸೆನ್ಸ್ : ದ್ವಿಸಂಧಾನ ನಿರೂಪಣೆಯ ವಿಶಿಷ್ಟ ಚಿತ್ರ

    ಪರಮೇಶ್ವರ ಗುರುಸ್ವಾಮಿ

    ಬೇಲೂರಿನ ಚೆನ್ನಕೇಶವ ದೇವಸ್ಥಾನದಲ್ಲಿ ಪಕ್ಷಿಯ ಮೂರ್ತಿ ಒಂದಿದೆ. ಅದನ್ನು ಒಂದು ಕಡೆಯಿಂದ ನೋಡಿದರೆ ನವಿಲು, ಇನ್ನೊಂದು ಕಡೆಯಿಂದ ನೋಡಿದರೆ ಗಿಣಿ. ಈ ರೀತಿಯ ಚಮತ್ಕಾರದ ರಚನೆಗಳನ್ನು ನೀವು ಬೇರೆ ಕಡೆಗಳಲ್ಲೂ ನೋಡಿರಬಹುದು. ಸಾಮಾನ್ಯವಾಗಿ ದೇವಸ್ಥಾನಗಳ ಎತ್ತರದ ಪ್ರಾಕಾರಗೋಡೆಗಳು ಸೇರುವ ಮೂಲೆಗಳ ಮೇಲೆ ಹೊರಗೆ ಒಂದು ಗೋಡೆಯ ಮಗ್ಗುಲಿನಿಂದ ಒಂದು ಪ್ರಾಣಿ ಕಂಡು ಬಂದರೆ ಆ ಗೋಡೆಗೆ ಸೇರಿರುವ ಇನ್ನೊಂದು ಗೋಡೆಯ ಮಗ್ಗುಲಿನಿಂದ ಅದೇ ಪ್ರತಿಮೆಯ ಭಾಗ ಬೇರೆ ಪ್ರಾಣಿಯಾಗಿರುತ್ತದೆ. ಬಹಳ ವರ್ಷಗಳ ಹಿಂದೆ ಮೊದಲ ಸಾರಿ ಈ ರೀತಿ ನೋಡಿದಾಗ ಈಗ ತಾನೆ ಆ ಕಡೆಯಿಂದ ನೋಡಿದ್ದು ಸಿಂಹವೊ ಅಥವಾ ಈ ಕ್ಷಣ ನೋಡುತ್ತಿರುವ ಬಸವನ ಇನ್ನೊಂದು ಪಾರ್ಶ್ವವೋ ಎಂದು ಗಲಿಬಿಲಿಗೊಂಡು ಭ್ರಮೆಯೊ ಅಲ್ಲವೋ ಖಚಿತ ಪಡಿಸಿಕೊಳ್ಳುವುದಕ್ಕಾಗಿ ಹಿಂದಕ್ಕೆ ನಡೆದು ಪುನಃ ಮೊದಲಿನದನ್ನು ನೋಡಿದ್ದೆ. ಎರಡೂ ಬೇರೆ ಬೇರೆ ಪ್ರಾಣಿಗಳಾಗಿದ್ದು ಪುನಃ ಪುನಃ ನೋಡಿ ಅಚ್ಚರಿಗೊಂಡಿದ್ದೆ. ಗೋಡೆಯ ಹೊರ ಮೂಲೆಯ ಒಂದು ಬದಿಯಿಂದ ನೋಡುವಾಗ ಅದು ನಿಮಗೆ ಕಾಣಿಸುತ್ತಿರುವ ಪ್ರಾಣಿಯ ಫೂರ್ಣ ಪ್ರಮಾಣದ ಪ್ರತಿಮೆ ಎನಿಸಿ ಇನ್ನೊಂದು ಬದಿಯಿಂದ ಅದೇ ಪ್ರತಿಮೆ ಬೇರೆ ಪ್ರಾಣಿಯಾಗಿರಬಹುದೆಂಬ ಕಿಂಚಿತ್ ಗುಮಾನಿಯೂ ನಿಮಗೆ ಬರುವುದಿಲ್ಲ. ಈ ರೀತಿಯ ಎರಡು ಭಿನ್ನ ಕಣ್ನೆಲೆಗಳಲ್ಲಿ ಒಂದೇ ಆಕೃತಿಯಲ್ಲಿ ಬೇರೆ ಬೇರೆ ರೂಪಗಳನ್ನು ರಚಿಸುವ ಶಿಲ್ಪ ಚಮತ್ಕಾರಗಳು ಬಹಳ ದೇವಸ್ಥಾನಗಳಲ್ಲಿರುವುದನ್ನು ಆ ನಂತರ ಗಮನಿಸಿದ್ದೇನೆ.

    ಒಂದೇ ಕಣ್ನೆಲೆಯಲಿ, ನಿಂತಲ್ಲಿಯೇ ನಾವು ನೋಡುತ್ತಿರುವ ಮೂರ್ತಿಯ ವಿನ್ಯಾಸದಲ್ಲೇ ಅಗೋಚರವಾಗಿ ಇನ್ನೊಂದು ರೂಪ ಅಡಕವಾಗಿರುವ ಶಿಲ್ಪದ ಬಗ್ಗೆ ವಿಜ್ಞಾನಿ, ಸಾಂಸ್ಕೃತಿಕ ಸಂಶೋಧಕ ಹಾಗು ಕಥೆಗಾರರಾದ ಡಾ. ಕೆ.ಎನ್. ಗಣೇಶಯ್ಯನವರು ತಮ್ಮ “ಎದೆಯಾಳದಿಂದೆದ್ದ ಗೋವು” ಎಂಬ ಕಥೆಯಲ್ಲಿ ವರ್ಣಿಸಿದ್ದಾರೆ. ಅದನ್ನು ನಾನೂ ನೋಡಿದ್ದೇನೆ. ಮೈಸೂರಿನಿಂದ ಬನ್ನೂರು ಮಾರ್ಗವಾಗಿ ಟಿ.ನರಸಿಪುರಕ್ಕೆ ಹೋಗುವಾಗ ಸಿಗುವ ಪ್ರಸಿದ್ಧ ಸೋಮನಾಥಪುರದ ದೇವಸ್ಥಾನದಲ್ಲಿರುವ ಪುರುಷ ಮೂರ್ತಿಗಳಲ್ಲಿ ಈ ಚಮತ್ಕಾರ ಶಿಲ್ಪ ರಚನೆ ಕಂಡು ಬರುತ್ತದೆ. ಉತ್ತರ ಗರ್ಭಗೃಹದ ಜನಾರ್ದನ ಪ್ರತಿಮೆಯ ಕತ್ತಿನಿಂದ ಇಳಿಬಿದ್ದಿರುವ ಅಲಂಕಾರಿಕ ಸರಗಳಲ್ಲಿ ಕೆಳಗಿನದು, ಅದರ ಪಕ್ಕಗಳಲ್ಲಿ ಅರ್ಧಕ್ಕೆ ಇಳಿಬಿದ್ದಿರುವ ತೊಡುಗೆ, ಎದೆಯ ಭಾಗ, ಮತ್ತು ನಾಭಿಯ ಸುತ್ತಲಿನ ಹೊಟ್ಟೆ ಎಲ್ಲ ಸೇರಿ ಬಸವನ ಮುಖದಂತೆ ಗೋಚರವಾಗುತ್ತದೆ. ಸರ ಮತ್ತು ಭುಜದಿಂದ ಇಳಿಬಿದ್ದಿರುವ ತೊಡುಗೆಯ ಒಂದು ಭಾಗ ಸೇರಿ ಕೊಂಬುಗಳಾದರೆ, ಎದೆ ತೊಟ್ಟುಗಳು ಕಣ್ಣುಗಳಾಗುತ್ತವೆ.

    ಬೇಲೂರಿನ ವಿಷ್ಣುವಿನ ಪ್ರತಿಮೆಯಲ್ಲೂ ಈ ರೀತಿ ಕಂಡು ಬರುತ್ತದೆಯಂತೆ. ಕಥೆಯಲ್ಲಿರುವ ಹಾಗೆ ಇದು ಶಿಲ್ಪಿಯೊಬ್ಬನ ಪ್ರಯತ್ನಪೂರ್ವಕ ರಚನೆಯೂ ಇದ್ದಿರಬಹುದು. ಹೊಯ್ಸಳ ಶೈಲಿಯ ವಿಷ್ಣುವಿನ ಪ್ರತಿಮೆಯ ವಿನ್ಯಾಸದಲ್ಲಿ ಸಹಜವಾಗಿ ಉದ್ಧೇಶಪೂರ್ವಕವಲ್ಲದೆ ಮೂಡಿರಬಹುದಾದ ಬಸವನ ರೂಪವಿರಬಹುದು, ಕಥೆಯಲ್ಲಿ ಬರುವ ಹಾಗೆ ಈ ಬಸವನ ರೂಪ ಶಿಲ್ಪಿಯ ಪ್ರಯತ್ನಪೂರ್ವಕ ಅಡಕವಾಗಿದ್ದರೆ ಶಿಲ್ಪ ಕೌಶಲದಲ್ಲಿ ಅದೊಂದು ಅದ್ಭುತವಾದ ದ್ವಿಸಂಧಾನ ಪ್ರಕ್ರಿಯೆ.

    the-sixth-sense

    ಸಾಹಿತ್ಯದಲ್ಲಿ ಈ ರೀತಿಯ ದ್ವಿಸಂಧಾನ ಪ್ರಯೋಗಗಳು ಬಹಳಷ್ಟಿವೆ. ಈ ತಂತ್ರವನ್ನು ತೇಜಸ್ವಿಯವರು “ಜುಗಾರಿ ಕ್ರಾಸ್” ಕಾದಂಬರಿಯಲ್ಲಿ ವಿವರಿಸಿರುವುದನ್ನು ಕಾಣಬಹುದು. ಗುರುರಾಜ ಕವಿಯ ದ್ವಿಸಂಧಾನ ಕಾವ್ಯ, ‘ಉತ್ತುಂಗ ರಾಜನ ಕಥೆ’ (ಇದಕ್ಕಾಗಿ ತೇಜಸ್ವಿಯವರು ಷಟ್ಪದಿಯಲ್ಲಿ ಮೂರು ಷಟ್ಪದಿಗಳನ್ನು ರಚಿಸಿದ್ದಾರೆ.) ಎಂಬ ಕಾಲ್ಪನಿಕ ಗ್ರಂಥದಲ್ಲಿ ದ್ವಿಸಂಧಾನ ಪ್ರಯೋಗದ ಉದಾಹರಣೆ ಸಿಗುತ್ತದೆ. ಇಲ್ಲಿ ಉತ್ತುಂಗ ರಾಜನ ಕಥೆಯು ಕಾವ್ಯದ ಸೋಗಿನಲ್ಲಿ ಬರೆದ ರಹಸ್ಯ ದಾಖಲೆ. ಒಂದು ಅರ್ಥದಲ್ಲಿ ಉತ್ತುಂಗ ರಾಜನಿಗೆ ರತ್ನಮಾಲ ನರ್ತಕಿಯು ತನ್ನ ಶಿಖೆಯಲ್ಲಿನ ಕೆಂಪು ಮಾಣಿಕ್ಯವನ್ನು ಕೊಟ್ಟ ಕಥೆಯಾದರೆ ಇನ್ನೊಂದು ಅರ್ಥದಲ್ಲಿ ರತ್ನಮೂಲ ಅಥವಾ ದೋಣಿಹೊಳೆಯ ಮೂಲದಲ್ಲೆಲ್ಲೋ ಸಹ್ಯಾದ್ರಿಯ ಶೃಂಗ ಶಿಖೆಯಲ್ಲಿ ಕೆಂಪು ರತ್ನ ದೊರೆಯುವ ಜಾಗ ನಿರ್ದೇಶಿಸುವ ನೀಲ ನಕ್ಷೆ. ಗುರುರಾಜ ಕವಿಯು ಇದರ ರಚನೆಯಲ್ಲಿ ಎರಡು ಅರ್ಥಗಳನ್ನಿಟ್ಟು ಉತ್ತುಂಗ ರಾಜನ ಆಸ್ಥಾನಕ್ಕೆ ಬಂದ ನರ್ತಕಿಯ ಸ್ತನ ನಿತಂಬಗಳನ್ನು ವರ್ಣಿಸುತ್ತಲೇ ಗೂಢವಾಗಿ ದೋಣಿಹೊಳೆಯ (ಹಳೆಯ ಹೆಸರು ರತ್ನಮೂಲ) ಕಗ್ಗಾಡಿನೊಳಗೆ ಕೆಂಪು ಕಲ್ಲು ಸಿಕ್ಕುವ ಕಳ್ಳದಾರಿಗಳ ಜಾಡು ತಿಳಿಸಿದ್ದಾನೆ.

    ಜಾನಪದ ಹಾಡು “ನುಚ್ಚಾಯ್ತು ನೀರ ಹೊಳೆಯಾಗಿ”ಯಲ್ಲಿ ದಾಂಪತ್ಯದ ಹೊರಗೆ ಪ್ರಣಯ ನಡೆಸಿದ್ದ ಹೆಣ್ಣೊಬ್ಬಳಿಗೆ ತನ್ನ ಪ್ರಿಯತಮ ದಂಡಿನ ಕಾಳಗದಲ್ಲಿ ಸತ್ತ ಸುದ್ದಿ ನೀರು ತರಲೆಂದು ಕೆರೆಗೆ ಹೋದಾಗ ತಿಳಿಯುತ್ತದೆ. ಅದನ್ನು ಕೇಳಿ ಅವಳ ಕೈಯಲ್ಲಿದ್ದ ಕೊಡ ಬಿದ್ದು ಒಡೆದು ಹೋಗುತ್ತದೆ. ಪ್ರಿಯಕರನ ಸಾವಿನಿಂದ ಅವಳು ದುಃಖಿಸುವುದನ್ನು ಕಂಡು ಜೊತೆಯಲ್ಲಿದ್ದವರು ಕೊಡ ಒಡೆದು ಹೋದದ್ದಕ್ಕೆ ದುಃಖಿಸುತ್ತಿದ್ದಾಳೆಂದು ಭಾವಿಸಿ, ಒಡೆದು ಹೋದದ್ದು ರನ್ನಾದ ಕೊಡವಲ್ಲ ಚಿನ್ನಾದ ಕೊಡವಲ್ಲ ಏಕೆ ಅಷ್ಟೊಂದು ದುಃಖಿಸುವೆ ಎಂದು ಕೇಳುತ್ತಾರೆ. ಅದಕ್ಕೆ ಅವಳು ಅತ್ತೆಗೆ ಕಾಣದಂತೆ ಬಳಸಿದ್ದೆ, ಮಾವನಿಗೆ ಕಾಣದಂತೆ ಬಳಸಿದ್ದೆ, ಗಂಡನಿಗೆ ಕಾಣದಂತೆ ಬಳಸಿದ್ದೆ. ಮುಚ್ಚುಮರೆಯಲ್ಲಿ ಹೇಗೆಲ್ಲಾ ಎಷ್ಟು ಕಾಲ ಬಳಸಿದ್ದೆ ಎಂದೆಲ್ಲಾ ಅವಲತ್ತುಕೊಂಡು ಪ್ರಲಾಪಿಸುತ್ತಾಳೆ. ಇಲ್ಲಿ ಉದ್ದಕ್ಕೂ ಅವಳು ಹೇಳುವ ಕೊಡವನ್ನು ಕುರಿತಾದ ಎಲ್ಲ ಮಾತುಗಳು ಕೇಳುಗರಿಗೆ/ಓದುಗರಿಗೆ ಅವಳ ಪ್ರಿಯಕರನ ಕುರಿತಾದ ಮಾತುಗಳೆಂಬುದು ಸುಲಭವಾಗಿ ಅರ್ಥವಾಗುತ್ತವೆ. ಅವೇ ಮಾತುಗಳು ಹಾಡೊಳಗಿನ ಪಾತ್ರಗಳಿಗೆ ಕೊಡವನ್ನು ಕುರಿತದ್ದು ಎನಿಸುತ್ತದೆ. ಈ ರೀತಿಯ ದ್ವಿಸಂಧಾನ ತಂತ್ರವನ್ನು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಶ್ಲೇಷಾಲಂಕಾರ ಎಂದು ಕರೆಯುತ್ತಾರೆ. ಶೇಷಾಲಂಕಾರದಲ್ಲಿ ಒಂದಕ್ಕಿಂತ ಹೆಚ್ಚು ಅರ್ಥಗಳು ವಾಚ್ಯವಾಗಿಯೇ ಇರುತ್ತವೆ ಅವು ಗ್ರಹಿಸುವವರ ನಿಲುವು ಮತ್ತು ಸಾಮರ್ಥ್ಯವನ್ನವಲಂಬಿಸಿ ಗೋಚರವಾಗುತ್ತವೆ.

    ಸಿನೆಮಾ ವಿಶ್ಲೇಷಣೆಯ ಸಂದರ್ಭದಲ್ಲಿ ಇಷ್ಟೆಲ್ಲ ಶಿಲ್ಪ, ಸಾಹಿತ್ಯದಿಂದ ವಿವರಣೆ ಯಾಕೆ ಅನಿಸಬಹುದು. ಎಲ್ಲ ರೀತಿಯ ಸಂವಹನ ಮಾಧ್ಯಮಗಳು ತಮ್ಮದೇ ಆದ ರೀತಿಯಲ್ಲಿ ವಿಭಿನ್ನವಾದರೂ ಮೂಲಭೂತವಾಗಿ ಮಾನವ ಗ್ರಹಿಕೆಯ ಮೂಲ ತತ್ವಗಳನ್ನೆ ತಮ್ಮ ಯಶಸ್ವೀ ಸಂವಹನ ಪ್ರಕ್ರಿಯೆಗೆ ದುಡಿಸಿಕೊಳ್ಳುತ್ತಿರುತ್ತವೆ. ಆ ಮಾಧ್ಯಮವನ್ನು ಬಳಸುವ ಕಲಾವಿದರು ನಿರೂಪಣೆಯಲ್ಲಿ ಕೆಲವು ಸಂದರ್ಭಗಳಲ್ಲಿ ತಮ್ಮ ಕೈ ಚಳಕಗಳನ್ನು ಈ ರೀತಿ ಪ್ರಯೋಗಿಸಿ ನಮ್ಮನ್ನು ನಿಬ್ಬೆರಗಾಗಿಸುತ್ತಾರೆ. ಮಾನವ ಗ್ರಹಿಕೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ತಮ್ಮ ಮಾಧ್ಯಮವನ್ನು ಚಮತ್ಕಾರಿಕವಾಗಿ ದುಡಿಸಿಕೊಳ್ಳುವ ಕಲಾವಿದರ ಇಂಥ ಕೌಶಲಗಳು ಬಹಳ ಕುತೂಹಲಕಾರಿಯಾಗಿರುತ್ತವೆ. ಈ ರೀತಿಯ ದ್ವಿಸಂಧಾನ ಸಿನೆಮಾ ಕೌಶಲವು ಹಾಲಿವುಡ್ಡಿನ ಯಶಸ್ವೀ ಚಿತ್ರಗಳಲ್ಲೊಂದಾದ “ಸಿಕ್ಸ್ತ್ ಸೆನ್ಸ್”ನಲ್ಲಿ ಪರಿಣಾಮಕಾರಿಯಾಗಿ ಪ್ರಯೋಗವಾಗಿದೆ.

    ಈ ಚಿತ್ರ ಬಿಡುಗಡೆಯಾದಾಗ ಇದೊಂದು ಮಾಮೂಲಿ ದೆವ್ವ ಭೂತಗಳ ಕಥೆಯ ಥ್ರಿಲ್ಲರ್. ನೋಡುವ ಸಮಯ ಸುಮ್ಮನೆ ವೇಸ್ಟು ಎಂದುಕೊಂಡು ನೋಡಿರಲಿಲ್ಲ. ತರಗತಿಯಲ್ಲಿ ಇದರ ಕುರಿತು ಪಾಠ ಮಾಡಬೇಕಾದಾಗಲೂ ಹಾಲಿವುಡ್ಡಿನ ಚಿತ್ರಗಳನ್ನು ಉದಾಹರಣೆಯಾಗಿಟ್ಟುಕೊಳ್ಳುವ ಪಠ್ಯಕ್ರಮದ ಬಗ್ಗೆಯೇ ಬೇಸರವಾಗಿತ್ತು. ನಂತರ ಈ ಚಿತ್ರವನ್ನು ವಸ್ತುವಿನ ಕಾರಣಕ್ಕಾಗಲ್ಲ, ಮಾಧ್ಯಮದ ಸಾಧ್ಯತೆಗಳನ್ನು ಅಭ್ಯಸಿಸಲು ಬಹಳ ಮುಖ್ಯವಾದ ಚಿತ್ರ ಅನಿಸಿತು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದರಲ್ಲಿ ದೆವ್ವಗಳ ಕಥೆಯಿದ್ದರೂ ಸ್ಪೆಶಲ್ ಎಫೆಕ್ಟ್‌ಗಳನ್ನು ಬಳಸದೆ ಅಪ್ಪಟ ಸಿನೆಮಾ ತಂತ್ರಗಳನ್ನು ಬಳಸಿರುವುದು.

    the-sixth-sense

    “ಸಿಕ್ಸ್ತ್ ಸೆನ್ಸ್” ಚಿತ್ರವನ್ನು ಪಾಂಡಿಚೆರಿಯ ಮಾಹೆಯಲ್ಲಿ ಜನಿಸಿದ ಮನೋಜ್ ನೈಟ್ ಶ್ಯಾಮಲನ್ ನಿರ್ದೇಶಿಸಿದ್ದಾರೆ. ಕಳೆದ ಶತಮಾನದ 90ರ ದಶಕದಲ್ಲಿ ಶ್ಯಾಮಲನ್ ನಿರ್ದೇಶಿಸಿದ್ದ ಸ್ಮಿರ್ನಾಫ್ ಎಂಬ ಮದ್ಯಪಾನೀಯದ ಟಿವಿ ಜಾಹೀರಾತುಗಳು ತಮ್ಮ ವಿಕರಾಳತೆಯಿಂದಾಗಿ ನೋಡುಗರನ್ನು ಬೆಚ್ಚಿ ಬೀಳಿಸಿ, ಜಾಹೀರಾತು ಆಸಕ್ತಿದಾರರ ಗಮನ ಸೆಳೆದಿದ್ದುವು. ಸ್ಮಿರ್ನಾಫ್ ಗುಂಡಿನ ಬಾಟಲಿಯ ಮೂಲಕ ಕಂಡ ವಸ್ತು, ವ್ಯಕ್ತಿಗಳು ಅಕರಾಳ ವಿಕರಾಳವಾಗಿ ಕಾಣುವಂಥ ಜಾಹೀರಾತುಗಳು ಅವು.ಸ್ಮಿರ್ನಾಫ್ ಮೂಲಕ ನೋಡಿದರೆ ಥಳುಕಿನ ಒಳಗಿರುವ ಹುಳುಕು ಕಾಣಿಸಿ ಬಿಡುತ್ತದೆ ಎಂಬುದು ಆ ಜಾಹೀರಾತುಗಳ ಅರ್ಥ. ಗೌರವಾನ್ವಿತ ವ್ಯಕ್ತಿಯೊಬ್ಬ ಸ್ಮಿರ್ನಾಫ್ ಬಾಟಲಿನ ಮೂಲಕ ವಾಲ್ರಸ್ ಪ್ರಾಣಿಯಂತೆ ಕಾಣುತ್ತಾನೆ. ಕುಲೀನ ಮಹಿಳೆಯೊಬ್ಬಳ ಕುತ್ತಿಗೆಯಲ್ಲಿರುವ ಸರದ ಅಮೂಲ್ಯ ಮಣಿಗಳು ಹುಳು ಹುಪ್ಪಟೆಗಳಾಗಿ ಕಾಣುತ್ತವೆ. ಶ್ಯಾಮಲನ್ ತಮ್ಮ ಈ ರೀತಿಯದೇ ವಿಶಿಷ್ಟ ಬೀಭತ್ಸ ಕಥಾವಸ್ತುಗಳಿಗಾಗಿ ಹಾಲಿವುಡ್ಡಿನಲ್ಲಿಯೂ ಹೆಸರಾದವರು. “ಸೈನ್” ಚಿತ್ರದ ಚಿತ್ರಕ್ಕಾಗಿ ದಾಖಲೆ 50 ಲಕ್ಷ ಡಾಲರ್ ಸಂಭಾವನೆ ಪಡೆದವರು. ಮನೋಜ್ ಶ್ಯಾಮಲನ್‌ರವರ ಆರಾಧ್ಯ ನಿರ್ದೇಶಕರೆಂದರೆ ಹಿಚ್‌ಕಾಕ್ ಮತ್ತು ಸ್ಪೀಲ್‌ಬರ್ಗ್. ಸಾಮಾನ್ಯವಾಗಿ ಶ್ಯಾಮಲನ್‌ರವರ ಚಿತ್ರಗಳ ಕೊನೆಯಲ್ಲಿ ಅನಿರೀಕ್ಷಿತ ತಿರುವುಗಳಿರುತ್ತವೆ. ಎರಡು ಮುಖ್ಯ ಪಾತ್ರಗಳಿರುತ್ತವೆ. ಅವು ಸಾಮಾನ್ಯ ಪಾತ್ರಗಳಾದರೂ ಅವುಗಳಲ್ಲೊಂದಕ್ಕೆ ಅಥವಾ ಎರಡೂ ಪಾತ್ರಗಳಿಗೂ ಅಸಾಮಾನ್ಯವಾದ ಸಾಮರ್ಥ್ಯವಿರುತ್ತದೆ. ಅಥವಾ ಅಸಾಮಾನ್ಯ ಘಟನೆಗಳು ಒಂದು ಪಾತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುತ್ತವೆ. ಮುಖ್ಯ ಪಾತ್ರದ ಭೂತಕಾಲ ಈಗ ನಡೆಯುತ್ತಿರುವ ಘಟನಾವಳಿಗೆ ತಳುಕು ಹಾಕಿಕೊಂಡಿರುತ್ತದೆ. ಕಥೆಯ ಮುಖ್ಯವಾದ ಪ್ರಸಂಗ ಸಾಮನ್ಯವಾಗಿ ನೆಲಮಾಳಿಗೆಯಲ್ಲಿ ನಡೆಯುತ್ತದೆ. ಎರಡು ಪಾತ್ರಗಳ ನಡುವೆ ನಡೆಯುವ ಮಾತುಕತೆ ಅಥವಾ ವ್ಯವಹಾರವನ್ನು ಮಧ್ಯೆ ಕಟ್ ಇಲ್ಲದಂತೆ ದೀರ್ಘಾವಧಿಯ ಷಾಟ್‌ಗಳ ಮೂಲಕ ಸೆರೆ ಹಿಡಿಯುವುದು ಇವರ ಒಂದು ವೈಶಿಷ್ಟ್ಯ. ಢಾಳಾದ ಬಣ್ಣಗಳನ್ನು ಅದರಲ್ಲೂ ಕೆಂಪು ಬಣ್ಣವನ್ನು ಸಮಸ್ಯೆಗೆ ಸುಳಿವು ಕೊಡಲು ಅಥವಾ ಚಿತ್ರದ ನಿರ್ಣಾಯಕ ಕ್ಷಣಗಳನ್ನು ಸೂಚಿಸಲು ಬಳಸುತ್ತಾರೆ. ಸೆಟ್‌ನ ಯಾವುದಾದರು ವಸ್ತುವಿನಲ್ಲಿ ಪಾತ್ರಗಳನ್ನು ಪ್ರತಿಬಿಂಬಿಸುವುದು ಸಹ ಇವರ ಚಿತ್ರ ನಿರೂಪಣೆಗಳಲ್ಲಿ ಕಂಡು ಬರುವ ಅಂಶಗಳು. ಸೌಂಡ್ ಎಫೆಕ್ಟ್‌ಗಳಿಗೆ ಸ್ಟಾಕ್‌ನಿಂದ ಎರವಲು ಪಡೆಯದೆ ಹೊಸದಾಗಿ ದ್ವನಿ ಸಂಯೋಜಿಸುವುದು ಇವರ ಬದ್ಧತೆ.

    ಇದನ್ನೂ ಓದಿ : ಸಂಕಥನದ ಮೊದಲು – ಗಿರೀಶ ಕಾಸರವಳ್ಳಿಯವರ ಬಿಂಬ ಬಿಂಬನ

    “ಸಿಕ್ಸ್ತ್ ಸೆನ್ಸ್”ನಲ್ಲಿ ಮನೋಜ್ ಶ್ಯಾಮಲನ್, 9 ವರ್ಷದ ಕೊಲ್ ಎಂಬ ಅತೀಂದ್ರಿಯ ಶಕ್ತಿಯಿರುವ ಆದರೆ ಅದರಿಂದಾಗಿಯೆ ಐಲು ಎಂದು ಎಲ್ಲರಿಂದ ಅವಹೇಳನಕ್ಕೀಡಾಗುವ ಬಾಲಕನ ವಸ್ತುವನ್ನಿಟ್ಟುಕೊಂಡು ಮಾಲ್ಕಂ ಎಂಬ ಮಕ್ಕಳ ಮನೋವೈದ್ಯನ ಕಥೆಯನ್ನು ಹೇಳುತ್ತಾರೆ. ಕೋಲ್‌ನ ತಂದೆ ಇರುವುದಿಲ್ಲ. ತಾಯಿ ಒಬ್ಬಳೆ ದುಡಿದುಕೊಂಡು ಇವನನ್ನು ಸಾಕುತ್ತಿರುತ್ತಾಳೆ. ಕೋಲ್‌ಗೆ ಸತ್ತವರ ಪ್ರೇತಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇತರರಿಗೆ ಅವು ಗೋಚರವಾಗುವುದಿಲ್ಲ. ಅವು ತಾವು ಸತ್ತಿಲ್ಲ ಎಂದು ನಂಬಿರುತ್ತವೆ. ಅವನೊಂದಿಗೆ ಮಾತನಾಡುತ್ತವೆ. ತೊಂದರೆ ಕೊಡುತ್ತಿರುತ್ತವೆ. ಕೆಲವು ಸಾರಿ ಅವನ ಮೈ ಮೇಲೆ ಕಾರಣವಿಲ್ಲದೆ ಗಾಯಗಳಾಗಿರುತ್ತವೆ. ಅವುಗಳೊಂದಿಗಿನ ಅವನ ಸಂಪರ್ಕ ಇತರರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವನನ್ನು ಐಲು ಹುಡುಗ ಎಂದು ಭಾವಿಸುತ್ತಾರೆ. ತಾಯಿಗೆ ಇದರಿಂದ ಅಪಾರ ನೋವು ಸಂಕಟ. ಕೋಲ್‌ಗೆ ಇದನ್ನು ನಂಬುವಂತೆ ತಾಯಿಗೆ ಹೇಳಲಾಗದ ಅಸಹಾಯಕತೆ. ಜೊತೆಗೆ ಹೇಳಿಬಿಟ್ಟರೆ ಅಮ್ಮನ ಮನಸ್ಸಿಗೆ ನೋವಾಗುತ್ತದೆ ಎಂಬ ಕಾಳಜಿ.

    ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಡಾಕ್ಟರ್ ಮಾಲ್ಕಂ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವನನ್ನು ಪುರಸ್ಕರಿಸಲಾಗಿರುತ್ತದೆ. ಚಿತ್ರದ ಪ್ರಾರಂಭದಲ್ಲಿ ಡಾಕ್ಟರ್ ಮಾಲ್ಕಂ ಮತ್ತು ಅವನ ಹೆಂಡತಿ ಪ್ರಶಸ್ತಿ ಸ್ವೀಕಾರದ ಸಂತೋಷವನ್ನು ಮನೆಯಲ್ಲಿ ಆಚರಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ಅವನ ಹಳೆಯ ರೋಗಿ, ಈಗಲೂ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿರುವ ತರುಣ, ವಿನ್ಸೆಂಟ್ ಪ್ರತ್ಯಕ್ಷವಾಗುತ್ತಾನೆ. ಡಾಕ್ಟರ್ ಮಾಲ್ಕಂ ತನಗೆ ಮೋಸ ಮಾಡಿದ್ದಾನೆ. ತನ್ನ ಮಾನಸಿಕ ಸಮಸ್ಯೆಯಿಂದ ತನಗೆ ಇನ್ನೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ಮಾಲ್ಕಂನ ಹೊಟ್ಟೆಗೆ ಶೂಟ್ ಮಾಡುತ್ತಾನೆ. ತಾನೂ ತಲೆಗೆ ಶೂಟ್ ಮಾಡಿಕೊಳ್ಳುತ್ತಾನೆ. ಮಾಲ್ಕಂನ ಹೆಂಡತಿ ಹಾಸಿಗೆಯ ಮೇಲೆ ಅಂಗಾತನಾಗಿ ಬಿದ್ದಿರುವ ಗಂಡನ ಬಳಿಗೆ ಓಡಿ ಬಂದು ಹೊಟ್ಟೆಯನ್ನು ಹಿಡಿದುಕೊಂಡಿರುವ ಅವನ ಕೈಗಳ ಮೇಲೆ ತನ್ನಹಸ್ತಗಳನ್ನು ಇಡುತ್ತಾಳೆ.. ಫೇಡ್ ಔಟ್ ಆಗುತ್ತದೆ. ಅವನು ಸತ್ತನೋ ಬದುಕಿದನೋ ತಿಳಿಯುವುದಿಲ್ಲ, ಈ ಚಿತ್ರವನ್ನು ಮೊದಲ ಸಾರಿ ನೋಡುವವರಿಗೆ ಮುಂದಿನ ದೃಶ್ಯದಿಂದಾಗಿ ಮಾಲ್ಕಂ ಬದುಕಿಕೊಂಡ ಎಂಬ ಭಾವನೆ ಬರುತ್ತದೆ.

    ಮುಂದಿನ ವರ್ಷ ಡಾಕ್ಟರ್ ಮಾಲ್ಕಂ ಬಾಲಕ ಕೋಲ್‌ನ ಕೇಸನ್ನು ತೆಗೆದುಕೊಂಡಿರುತ್ತಾನೆ. ಕೋಲ್ ಮೊದಲೆ ಹೇಳಿದ ಹಾಗೆ ಅತೀಂದ್ರಿಯ ಶಕ್ತಿ ಇರುವ ಬಾಲಕ. ಕೋಲ್‌ನ ಸಮಸ್ಯೆಗೆ ವಿನ್ಸೆಂಟ್‌ನ ಸಮಸ್ಯೆಯ ಸಾಮ್ಯವಿರುತ್ತದೆ. ಇದನ್ನು ಡಾಕ್ಟರ್ ಮಾಲ್ಕಂ ತನ್ನ ಹೆಂಡತಿಗೂ ಹೇಳುತ್ತಾನೆ. ಹೇಳುತ್ತಿದ್ದೇನೆ ಎಂದು ಅವನು ಭಾವಿಸಿರುತ್ತಾನೆ. ಈಗ ಅವನು ಪ್ರೇತವಾಗಿರುವುದರಿಂದ ಅವನ ಇರುವಿಕೆಯಾಗಲಿ ಮಾತುಗಳಾಗಲಿ ಅವಳ ಗ್ರಹಿಕೆಗೆ ಬರುವುದಿಲ್ಲ. ಅವನ ಗುರಿ, ಕೋಲ್‌ನ ಸಮಸ್ಯೆಯನ್ನು ಬಗೆಹರಿಸುವುದು. ಅವನ ಈ ಪ್ರಯತ್ನದಲ್ಲಿ ಹೆಂಡತಿ ಅವನನ್ನು ದೂರ ಮಾಡುತ್ತಿದ್ದಾಳೆ ಎಂದು ಅವನಿಗೆ ಅನಿಸ ತೊಡಗುತ್ತದೆ. ತಾನೆಷ್ಟೇ ಮಾತನಾಡಿದರೂ ಅವಳು ತನ್ನೊಡನೆ ಮಾತನಾಡುವುದಿಲ್ಲ. ಪ್ರತಿಕ್ರಿಯಿಸುವುದಿಲ್ಲ. ಮೌನವಾಗಿರುತ್ತಾಳೆ ಎಂಬುದು ಅವನ ಅಳಲು. ಅವಳು ಇನ್ನೊಬ್ಬ ಗಂಡಸಿಗೆ ಹತ್ತಿರವಾಗುತ್ತಿರುವುದನ್ನೂ ನೋಡುತ್ತಾನೆ. ತನ್ನ ಅಳಲನ್ನು ತೋಡಿಕೊಂಡ ನಂತರ ಬಾಲಕ ಕೋಲ್‌ನ ಸಮಸ್ಯೆಗೆ ಪರಿಹಾರ ತಿಳಿಸುತ್ತಾನೆ. ಅದೇನೆಂದರೆ ಆ ಪ್ರೇತಗಳ ಬಯಕೆಗಳನ್ನು ಈಡೇರಿಸುವುದು. ಕೋಲ್‌ನ ಸಮಸ್ಯೆ ಬಗೆ ಹರಿಯುತ್ತದೆ. ಅದಕ್ಕೆ ಪ್ರತಿಯಾಗಿ ಕೋಲ್, ಹೆಂಡತಿ ಅವನ ಜೊತೆ ಮಾತನಾಡಬೇಕಾದರೆ ಅವಳು ಮಲಗಿರುವಾಗ ಮಾತನಾಡಿಸು ಎಂದು ಮಾಲ್ಕಂನ ಸಮಸ್ಯೆಗೆ ಪರಿಹಾರ ಸೂಚಿಸುತ್ತಾನೆ. ಮಲಗಿರುವ ಹೆಂಡತಿಯನ್ನು ಮಾತನಾಡಿಸಲು ಮಾಲ್ಕಂ ಪ್ರಯತ್ನಿಸಿದಾಗ ಮನೋಜ್ ಶ್ಯಾಮಲನ್‌ರವರ ಟ್ರೇಡ್ ಮಾರ್ಕ್ ತಿರುವು ಚಿತ್ರಕ್ಕೆ ದೊರೆಯುತ್ತದೆ. ಮಲಗಿರುವ ಅವಳ ಕೈಯಿಂದ ಜಾರಿ ಅವನ ಮದುವೆಯ ಉಂಗುರ ಕೆಳಕ್ಕೆ ಬೀಳುತ್ತದೆ. ಅವಳ ಬೆರಳಲ್ಲಿ ಬೇರೆ ಮದುವೆ ಉಂಗುರವಿರುತ್ತದೆ. ಹಲವಾರು ಫ್ಲಾಷ್‌ಬ್ಯಾಕ್‌ಗಳ ಮೂಲಕ ಮಾಲ್ಕಂಗೆ ತಾನು ವಿನ್ಸೆಂಟ್ ಶೂಟ್ ಮಾಡಿದಾಗ ಸತ್ತಿರುವುದು ಅರಿವಿಗೆ ಬರುತ್ತದೆ. ಈ ಫ್ಲಾಷ್‌ಬ್ಯಾಕ್‌ಗಳು ಮುಚ್ಚಿದ್ದ ಮುಸುಕನ್ನು ತೆರೆದಂತೆ ಬಾಲಕ ಕೋಲ್‌ನ ಜೊತೆ ವ್ಯವಹರಿಸಿದ್ದು ಮಾಲ್ಕಂನ ಪ್ರೇತ ಎಂಬುದು ಪ್ರೇಕ್ಷಕರ ಅರಿವಿಗೆ ಬರುತ್ತದೆ. ಹಿಂದೆ ನಾವು ಅವನು ಬದುಕಿದ್ದಾನೆ ಎಂಬ ನಂಬಿಕೆಯಲ್ಲಿ ನೋಡಿದ್ದ ಅವೇ ದೃಶ್ಯಗಳು ಈಗ ಪುನಃ ರೀಪ್ಲೇ ಮಾಡಿ ನೋಡಿದರೆ ನಿಜಕ್ಕೂ ಮಾಲ್ಕಂನ ಪ್ರೇತ ಅದು ಎಂಬುದು ಸ್ಪುಟವಾಗಿ ತಿಳಿಯುತ್ತದೆ. ಚಲನಚಿತ್ರ ಮಾಧ್ಯಮದ ತಾಂತ್ರಿಕತೆಯನ್ನು ಇಷ್ಟೊಂದು ಕೌಶಲದಿಂದ ದ್ವಿಸಂಧಾನ ನಿರೂಪಣೆಯಲ್ಲಿ ಬಹುಶಃ ಬೇರೆ ಯಾರೂ ಬಳಸಿಲ್ಲ.

    ಇದನ್ನೂ ಓದಿ : ಎಫ್‌ ಟಿ ಐ ಐ ನ ಸ್ಮಾರ್ಟ್‌ ಫೋನ್‌ ಡಾಕ್ಯುಮೆಂಟರಿ ಕೋರ್ಸ್ ಗೆ ಆಹ್ವಾನ

     ದ್ವಿಸಂಧಾನದ ಒಂದೆರಡು ದೃಶ್ಯಗಳನ್ನು ನೋಡೋಣ.

    ಮಾಲ್ಕಂನನ್ನು ವಿನ್ಸೆಂಟ್ ಶೂಟ್ ಮಾಡಿದ ನಂತರದ ಎಲ್ಲ ದೃಶ್ಯಗಳಲ್ಲೂ ಮಾಲ್ಕಂ ಕೋಲ್‌ಗೆ ಮಾತ್ರ ಕಾಣಿಸುತ್ತಿರುತ್ತಾನೆ. ಅವನಿಗೆ ಮಾತ್ರ ಕೇಳಿಸುತ್ತಿರುತ್ತಾನೆ. ಮಾಲ್ಕಂನೊಂದಿಗೆ ಕೋಲ್ ಬಿಟ್ಟು ಇತರರು ಯಾರಾದರು ಇರುವ ದೃಶ್ಯಗಳೆಲ್ಲ ದ್ವಿಸಂಧಾನ ನಿರೂಪಣೆಗಳು.

     shyamalan

    ಕೋಲ್ ಡಾಕ್ಟರ್ ಮಾಲ್ಕಂನನ್ನು ಒಪ್ಪಿಕೊಳ್ಳುವ ದೃಶ್ಯದಲ್ಲಿ ಮಾಲ್ಕಂ ಮತ್ತು ಕೋಲ್‌ನ ತಾಯಿ ಎದುರು ಬದುರು ಕುರ್ಚಿಗಳಲ್ಲಿ ಮಾತಿಲ್ಲದೆ ಶಾಲೆಯಿಂದ ಬರುವ ಕೋಲ್‌ಗೆ ಕಾಯುತ್ತಾ ಕುಳಿತಿದ್ದಾರೆ. ಇದಕ್ಕೆ ಹಿಂದೆ ಕೋಲ್ ಮಾಲ್ಕಂನನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾನೆ. ಅವನಿಗೆ ಈ ಡಾಕ್ಟರ್ ಮತ್ತು ಅವನ ಚಿಕಿತ್ಸೆ ಇಷ್ಟವಿರುವುದಿಲ್ಲ. ಬಾಲಕನ ಸಮಸ್ಯೆ ಬಗೆ ಹರಿಸುವ ಬಗ್ಗೆ ಮಾತನಾಡಿ ಅವನು ಬರುವುದನ್ನ ಕಾಯುತ್ತಾ ಇಬ್ಬರೂ ಮೌನವಾಗಿ ಕುಳಿತಿದ್ದಾರೆ ಎಂದುಕೊಳ್ಳಲೂ ಬಹುದು. ಮಾಲ್ಕಂ ಸತ್ತಿದ್ದಾನೆಂದುಕೊಂಡರೆ ಅವನ ಪ್ರೇತ ಅಲ್ಲಿರುವುದು ಅವಳಿಗೆ ಗೊತ್ತಿಲ್ಲ ಎಂದುಕೊಳ್ಳಲೂ ಬಹುದು. ಮನೆಯ ಹೊರಗೇ ಕೋಲ್‌ಗೆ ಒಳಗೆ ಮಾಲ್ಕಂನ ಪ್ರೇತ ಇರುವುದು ಗೊತ್ತಾಗಿಬಿಡುತ್ತದೆ. ಹೆದರಿಕೊಂಡೇ ಒಳಕ್ಕೆ ಬರುತ್ತಾನೆ. ಅವನ ತಾಯಿ ಅವನ ಪುಸ್ತಕ ಮೇಲಂಗಿಗಳನ್ನು ಒಳಕ್ಕೆ ಓಯ್ದ ಮೇಲೆ ಮಾಲ್ಕಂ ಮತ್ತು ಕೋಲ್ ಒಂದು ಶರತ್ತಿನ ಆಟವನ್ನು ಆಡುತ್ತಾರೆ. ಕೊನೆಯಲ್ಲಿ ಕೋಲ್, “ಥ್ಯಾಂಕ್ಯು. ನೀನು ಒಳ್ಳೆಯವನು. ನೀನು ನನಗೆ ಸಹಾಯ ಮಾಡಬಹುದು” ಎಂದು ಹೇಳುತ್ತಾನೆ. ಮೇಲ್ನೋಟಕ್ಕೆ ಇದು ಮಾನಸಿಕ ತೊಂದರೆಯಿರುವ ಹುಡುಗ ಮನೋವೈದ್ಯನನ್ನು ಒಪ್ಪಿಕೊಳ್ಳುವಂತೆ, ತನಗೆ ಚಿಕಿತ್ಸೆ ನೀಡಲು ಅಂಗೀಕರಿಸಿದಂತೆ ಕಾಣುತ್ತದೆ. ಇನ್ನೊಂದು ನೆಲೆಯಲ್ಲಿ ಇದು ಅವನ ಇತರ ಪ್ರೇತಗಳೊಂದಿಗಿನ ಹಿಂಸಾತ್ಮಕ ಅನುಭವದ ಹಿನ್ನೆಲೆಯಿಂದ ಬಂದ ಮಾತುಗಳು. ಮಾಲ್ಕಂನ ಪ್ರೇತ ಚಿತ್ರದಲ್ಲಿ ನಾವು ನೋಡುವ ಇತರ ಪ್ರೇತಗಳಿಗೆ ಹೋಲಿಸಿದರೆ ಸಂಭಾವಿತ ಮಾತ್ರವಲ್ಲ ಅವುಗಳ ರೂಪ ಮತ್ತು ವರ್ತನೆಯಲ್ಲಿರುವ ಘೋರತೆ ಇವನಲ್ಲಿಲ್ಲ.

    ಮುಂದಿನ ದೃಶ್ಯ ದ್ವಿಸಂಧಾನ ಸಿನೆಮಾ ತಂತ್ರದ ಅತ್ಯುತ್ತಮ ಉದಾಹರಣೆಯಾಗಿದೆ. ಒಂದು ನಿಮಿಷ ಐವತ್ತನಾಲ್ಕು ಸೆಕೆಂಡುಗಳ ಇಡೀ ದೃಶ್ಯವನ್ನು ದೀರ್ಘಾವಧಿಯ ಒಂದೇ ಶಾಟ್‌ನಲ್ಲಿ ತೆಗೆಯಲಾಗಿದೆ. ಇದೊಂದು ಸಂಕೀರ್ಣವಾದ ಶಾಟ್ ನಿರ್ವಹಣೆ. ಶಾಟ್ ಶುರುವಾಗುವುದು ರೆಸ್ಟಾರೆಂಟ್ ಒಂದರ ಒಳಗಿನ ಮಿಡ್ ಫ್ರೇಮಿನಿಂದ. ಫ್ರೇಮಿನ ಮಧ್ಯದಿಂದ ಡಾಕ್ಟರ್ ಮಾಲ್ಕಂ ಕ್ಯಾಮೆರಾದ ಕಡೆ ಚಲಿಸಿಕೊಂಡು ಬರುತ್ತಿದ್ದಾನೆ. (ಭೂತ ಮೂಡಿ ಬಂದಂತೆ) ಅವನು ಕಾಣಿಸಿಕೊಳ್ಳುವ ಮೊದಲೇ ಕ್ಯಾಮೆರಾ ಪ್ರೇಕ್ಷಕರ ಅರಿವಿಗೇ ಬಾರದ ಹಾಗೆ ನಿಧಾನವಾಗಿ ಝೂಮ್ ಇನ್ ಆಗುತ್ತಿರುತ್ತದೆ. ಹೆಂಡತಿ ಆನ್ನಾ ಕುಳಿತಿರುವ ಟೇಬಲ್ಲಿನ ಬಳಿ ಬಂದು ಅವಳೆದುರಿನ ಕುರ್ಚಿಯ ಬಳಿ ಅವಳಿಗೆ ಮುಖ ಮಾಡಿ ನಿಲ್ಲುತ್ತಾನೆ. ಕ್ಯಾಮೆರಾ ಅವಳ ಹಿಂದೆ ಅವಳಿಗೆ ಸ್ವಲ್ಪ ಎತ್ತರದಲ್ಲಿ ಅವನ ಮುಖದ ಮಟ್ಟದಲ್ಲಿ ಇದೆ. ಈಗ ಫ್ರೇಮಿನಲ್ಲಿ ಅವರಿಬ್ಬರೂ ಪ್ರಧಾನವಾಗಿ ಇದ್ದಾರೆ. ಅವಳೆದುರಿನ ಕುರ್ಚಿಯಲ್ಲಿ ಕೂರುತ್ತಾನೆ. ಅವಳ ಕ್ಷಮೆ ಕೇಳುತ್ತಾನೆ. ಅವನು ತಪ್ಪಿತಸ್ಥ ಭಾವನೆಯಲ್ಲಿ ಮಾತನಾಡುತ್ತಿರುವಂತೆ ಕ್ಯಾಮೆರಾ ಝೂಮ್ ಇನ್ ಆಗುತ್ತಲೇ ಅವನ ಕಡೆಗೆ ತನ್ನ ಎಡಕ್ಕೆ ಟ್ರ್ಯಾಕ್ ಚಲನೆಯಲ್ಲಿ ಚಲಿಸಲಾರಂಭಿಸುತ್ತದೆ. ಕ್ರಮೇಣ ಅವಳು ಫ್ರೇಮಿನಿಂದ ಹೊರಗಾಗುತ್ತಾಳೆ. ಅವನು ತನ್ನ ಹೊಸ ಕೇಸ್ ಕೋಲ್‌ನ ಬಗ್ಗೆ ವಿವರಿಸುತ್ತಿರುವ ಹಾಗೇ ಅವನು ಬಸ್ಟ್ ಫ್ರೇಮಿಗೆ ಸಿಗುತ್ತಾನೆ. ಸ್ವಲ್ಪ ಎತ್ತರದ ಕೋನದಲ್ಲಿದ್ದ ಕ್ಯಾಮೆರಾ ಅವನ ಮುಖದ ಮಟ್ಟಕ್ಕೆ ಕ್ರೇನ್ ಡೌನ್ ಆಗುತ್ತದೆ. ಅವನು ಪ್ರೋಫೈಲಿನಲ್ಲಿ ಕ್ಲೋಸ್ ಫ್ರೇಮಿಗೆ ಸಿಗುತ್ತಿದ್ದ ಹಾಗೆ ವೆಯ್ಟರ್ ಬಿಲ್ ತಂದು ಟೇಬಲ್ಲಿನ ಮೇಲೆ ಇಡುತ್ತಾನೆ. ವೆಯ್ಟರ್‌ನ ಕೈ ಮತ್ತು ತೋಳು ಮಾತ್ರ ಕಾಣಿಸುತ್ತದೆ. ಕ್ಯಾಮೆರಾ ಬಿಲ್ಲನ್ನು ಕೇಂದ್ರೀಕರಿಸಿಕೊಂಡು ಬಲಕ್ಕೆ ಟಿಲ್ಟ್ ಡೌನ್ ಜೊತೆಗೆ ಪ್ಯಾನ್ ಆಗುತ್ತದೆ. ಇಬ್ಬರೂ ಬಿಲ್ ಎತ್ತಿಕೊಳ್ಳಲು ಕೈ ಚಾಚುತ್ತಾರೆ. ಅವಳಿಗೆ ಸಿಗುತ್ತದೆ. ಅದನ್ನು ಹತ್ತಿರ ಎಳೆದುಕೊಂಡು ಅವಳು ಸಹಿ ಮಾಡುತ್ತಿದ್ದ ಹಾಗೆ ಕ್ಯಾಮೆರಾ ಇನ್ನಷ್ಟು ಬಲಕ್ಕೆ ಪ್ಯಾನ್ ಆಗಿ ಟಿಲ್ಟ್ ಅಪ್ ಆಗುತ್ತದೆ. ಅವಳು ಕ್ಲೊಸ್ ಫ್ರೇಮಿನಲ್ಲಿದ್ದಾಳೆ. ಅವನು ಮಾತನಾಡತ್ತಲೇ ಇದ್ದಾನೆ. ಅವಳು ಅಸಹನೆಯಿಂದ (ಇನ್ನೊಂದು ನೆಲೆಯಲ್ಲಿ ಶೋಕದಿಂದ ಇರುವ) ಹಾವಭಾವ ಪ್ರಕಟಿಸುತ್ತಾಳೆ. ಒಂದು ಸಾರಿ ಅವನ ಕಡೆ ನೋಡುತ್ತಾಳೆ. ಈಗ ಕ್ಯಾಮೆರಾ ಝೂಮ್ ಔಟ್ ಆಗುತ್ತಲೇ ಹಿಂದಕ್ಕೆ ಚಲಿಸಲಾರಂಭಿಸುತ್ತದೆ. ಅವನು ಫ್ರೇಮಿನೊಳಕ್ಕೆ ಸೇರಿಕೊಳ್ಳುತ್ತಾನೆ. ನನಗೆ ಇನ್ನೊಂದು ಅವಕಾಶ ಕೊಡು ಎಂದು ಅವನು ಕೋರುತ್ತಿದ್ದ ಹಾಗೇ “ಹ್ಯಾಪಿ ಆನಿವರ್ಸರಿ” ಎಂದು ಗಂಭೀರವಾಗಿ ತನಗೆ ತಾನೇ ಎಂಬಂತೆ, ಅವನ ಸಾಂಗತ್ಯ ಅಸಹನೀಯ ಎಂಬಂತೆ ಹೇಳಿ ಎದ್ದು ಕ್ಯಾಮೆರಾ ಮತ್ತು ಅವನ ನಡುವೆ ಹಾದು ಹೊರಟು ಹೋಗುತ್ತಾಳೆ.

    ಇಡೀ ದೃಶ್ಯವನ್ನು ಅವನು ಬದುಕಿದ್ದಾನೆ ಎಂಬ ನೆಲೆಯಲ್ಲಿ ಪರಿಭಾವಿಸಿದರೆ ಉದ್ದಕ್ಕೂ ಆನ್ನಳ ಚಟುವಟಿಕೆಗಳು ಗಂಡನ ಬಗೆಗಿನ ಅಸಮಧಾನದಿಂದ ಕೂಡಿದ್ದು ಮುರಿದು ಹೋದ ಮನಸ್ಸಿನ ಪ್ರತಿಕ್ರಿಯೆ ಅನಿಸುತ್ತದೆ. ಅವನು ಸತ್ತಿದ್ದಾನೆ. ಅವನ ಪ್ರೇತ ಅವಳಿಗೆ ಕಾಣಿಸುತ್ತಿಲ್ಲ. ಅವನು ಮಾತನಾಡುತ್ತಿರುವುದು ಅವಳಿಗೆ ಕೇಳಿಸುತ್ತಿಲ್ಲ ಎಂಬ ನೆಲೆಯಲ್ಲಿ ಪರಿಭಾವಿಸಿದರೆ ಪ್ರೀತಿಯ ಗಂಡ ಸತ್ತು ಹೋದ ಹೆಂಗಸಿನ ಮ್ಲಾನತೆಯಂತೆ ತಳಮಳದಂತೆ ಕಾಣಿಸುತ್ತದೆ. ಗಂಡ ಸತ್ತ ವರ್ಷದೊಳಗೆ ಇನ್ನೊಬ್ಬನೊಂದಿಗೆ ಅವಳ ಸಂಬಂಧ ಕೊನರುತ್ತಿದೆ. ಸತ್ತ ಗಂಡನ ನೆನಪಿನಿಂದ ಇನ್ನೂ ಅವಳಿಗೆ ಬಿಡುಗಡೆಯಾಗಿಲ್ಲ. ಅವಳು ಅವನ ಕಡೆ ನೋಡುವುದು ಅವನನ್ನು ತೀವ್ರ ಅಸಮಾಧಾನದಿಂದ ಸಹಿಸುವುದೂ ಹೌದು. ಶೂನ್ಯ ನೋಟವೂ ಹೌದು. ದೃಶ್ಯ ಪೂರ್ತಿ ಎರಡೂ ರೀತಿಯಲ್ಲೂ ಅವಳ ಆಂಗಿಕ ಅಭಿನಯ, ಭಂಗಿಗಳು ಮತ್ತು ಹಸ್ತಮುದ್ರೆಗಳು ಸಹಜ ಎನಿಸುತ್ತವೆ. ಇದಕ್ಕೆ ಪೂರಕವಾಗಿ ಕ್ಯಾಮೆರಾದ ಚಲನವಲನಗಳು ಪಾತ್ರಗಳ ಮನಸ್ಥಿತಿಗಳನ್ನು ಮತ್ತು ಸನ್ನಿವೇಶದ ನಾಟಕೀಯತೆಯನ್ನು ಪ್ರಖರಗೊಳಿಸುತ್ತವೆ.

    the-sixth-sense

    ಕೋಲ್‌ನ ಸಹಪಾಠಿಯ ಹುಟ್ಟುಹಬ್ಬದ ಸಮಾರಂಭದಲ್ಲಿ ಕೆಲವು ಹುಡಗರು ಸೇರಿಕೊಂಡು ಅವನನ್ನು ಅಟ್ಟದ ಮೇಲೆ ತಳ್ಳಿ ಕೂಡಿ ಹಾಕಿ ಬಿಡುತ್ತಾರೆ. ಅಲ್ಲಿ ಪ್ರೇತ್ಮಾತ್ಮಗಳಿರುವುದು ಕೋಲ್‌ಗೆ ಗೊತ್ತಿರುತ್ತದೆ. ಒಳಗೆ ಅವನು ಆಕ್ರಂದಿಸುತ್ತಿರುತ್ತಾನೆ. ಅವನ ತಾಯಿ ಗಾಬರಿಯಿಂದ ಬಂದು ಅವನನ್ನು ಅಲ್ಲಿಂದ ಬಿಡಿಸುತ್ತಾಳೆ. ಈ ದೃಶ್ಯದಲ್ಲಿ ತಾಯಿಯ ಅಸಹಾಯಕತೆ, ಸದಾ ಹೀಗೆ ಒಂದಿಲ್ಲೊಂದು ಕ್ಲೇಶಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಬಗೆಗಿನ ಕ್ಷೆಭೆ, ಎಲ್ಲವೂ ಸೂಕ್ತ ಶಾಟ್‌ಗಳು ಮತ್ತು ಸಂಕಲನ ತಂತ್ರಗಳಿಂದ ಪರಿಣಾಮಕಾರಿಯಗಿ ಮೂಡಿ ಬಂದಿವೆ. ಕೋಲ್‌ನನ್ನು ಪ್ರೇತಗಳು ಭೇಟಿ ಮಾಡುವ ದೃಶ್ಯಗಳೂ ಸಹ ಸಿನೆಮಾ ನಿರೂಪಣೆಯ ಉತ್ತಮ ಉದಾಹರಣೆಗಳು. ಅವುಗಳ ಕುರಿತೇ ಇನ್ನೊಂದು ಲೇಖನ ಬರೆಯಬಹುದು.

    ಇದನ್ನೂ ಓದಿ : ಕನ್ನಡ ಚಿತ್ರರಂಗದ ಸ್ಥಿತಿಗತಿ ಚೆನ್ನಾಗಿಯೇ ಇದೆಯಲ್ಲ :ಶೇಷಾದ್ರಿ

    ಈ ದೃಶ್ಯದ ನಂತರ ತಾಯಿ ಒಬ್ಬ ಮನೋವೈದ್ಯನ ಬಳಿ ಚರ್ಚಿಸುವ ದೃಶ್ಯ ಬರುತ್ತದೆ. ಆ ಮನೋವೈದ್ಯನ ಪಾತ್ರವನ್ನು ತನ್ನ ಆರಾಧ್ಯ ನಿರ್ದೇಶಕರಲ್ಲಿ ಒಬ್ಬನಾದ ಹಿಚ್‌ಕಾಕ್, ತನ್ನ ಚಿತ್ರಗಳಲ್ಲಿ ನಿರ್ವಹಿಸುವ ಕ್ಯಾಮಿಯೊ(ತಾರಾ ಮೌಲ್ಯವುಳ್ಳ ವ್ಯಕ್ತಿಗಳು ಮಾಡುವ ಸಣ್ಣ ಪುಟ್ಟ ಪಾತ್ರಗಳು) ಪಾತ್ರಗಳಂತೆ ಮನೋಜ್ ಶ್ಯಾಮಲನ್ ಅವರೇ ನಿರ್ವಹಿಸಿದ್ದಾರೆ. ಈ ದೃಶ್ಯದಲ್ಲೂ ಡಾಕ್ಟರ್ ಮಾಲ್ಕಂ ಪಾತ್ರದ ದ್ವಿಸಂಧಾನ ಅಸ್ತಿತ್ವವಿದೆ. ಅವರಿಬ್ಬರ ಸಂಭಾಷಣೆಯ ನಡುವಿನ ಅವನ ಪ್ರತಿಕ್ರಿಯೆಗಳು ಎರಡೂ ನೆಲೆಗಳಲ್ಲಿ ಅರ್ಥಪೂರ್ಣವಾಗಿವೆ.

    ಮತ್ತೊಂದು ಸಾರಿ ಮಾಲ್ಕಂ ಮನೆಗೆ ಬರುತ್ತಿರುವಾಗ ಆನ್ನಳ ಹೊಸ ಗೆಳೆಯ ಮನೆಯಿಂದ ಹೊರಬಂದು ಕಾರು ಹತ್ತಿ ಹೋರಟು ಹೋಗುತ್ತಾನೆ. ಇವನು ಅವನನ್ನು ನಿಲ್ಲುವಂತೆ ಕೂಗುತ್ತಾ ಬರುತ್ತಿದ್ದರೂ ಕೇರೇ ಮಾಡದೆ ಹೊರಟು ಬಿಡುತ್ತಾನೆ. ವಾಸ್ತವವಾಗಿ ಇವನ ಇರುವು ಅವನ ಅರಿವಿಗೇ ಬಂದಿರುವುದಿಲ್ಲ. ಹುಡುಗಿಯೊಬ್ಬಳ ಶಾದ್ಧದ ದಿನ ಅವಳ ಪ್ರೇತದ ಕೋರಿಕೆಯಂತೆ ಅವಳ ಕೊಲೆಯ ರಹಸ್ಯವನ್ನು ಅವಳಪ್ಪನಿಗೆ ಕೋಲ್ ಬಹಿರಂಗ ಪಡಿಸುವ ದೃಶ್ಯದಲ್ಲಿ ಸಹ ಅಲ್ಲಿ ನೆರೆದಿರುವ ಅಷ್ಟೊಂದು ಜನರಲ್ಲಿ ಯಾರ ಅರಿವಿಗೂ ಪರಿವೆಗೂ ಡಾಕ್ಟರ್ ಮಾಲ್ಕಂನ ಅಸ್ತಿತ್ವ ಬರುವುದಿಲ್ಲ. ಅವನು ಸತ್ತಿದ್ದಾನೆ ಎಂಬ ನೆಲೆಯಲ್ಲಿ ಈ ದೃಶ್ಯವನ್ನು ನೋಡಿದರೆ ಶ್ಯಾಮಲನ್‌ರವರ ಸಿನೆಮಾ ದ್ವಿಸಂಧಾನ ಕೌಶಲದ ಅರಿವಾಗುತ್ತದೆ.

    ಹೀಗೆ ಈ ಚಿತ್ರವು ಮಾಲ್ಕಂನ ಮೇಲೆ ನಡೆಯುವ ಗುಂಡಿನ ದಾಳಿಯಿಂದ ಅವನಿಗೆ ತಾನು ನಿಜವಾಗಲೂ ಸತ್ತಿದ್ದೇನೆ ಎಂದು ಅರಿವಾಗುವವರೆಗೆ ಎರಡು ನೆಲೆಗಳಲ್ಲಿ ಕಥೆಯನ್ನು ಒಂದೇ ನಿರೂಪಣೆಯ ಮೂಲಕ ಸಾಧಿಸಿದೆ.

    (ಲೇಖನ ಕೃಪೆ : ಸಾಂಗತ್ಯ ಬ್ಲಾಗ್)

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]